ಬದುಕಿಗೆ ದಾರಿದೀಪ ಶರಣ ಸಾಹಿತ್ಯ

ದೇವದುರ್ಗ,ಮಾ.೦೯- ಶರಣ ಸಾಹಿತ್ಯ ಮಾನವನ ಬದುಕಿಗೆ ದಾರಿದೀಪವಾಗಿದೆ. ವೈಚಾರಿಕತೆ ನೆಲೆಗಟ್ಟಿನಲ್ಲಿ ಶರಣರು ರಚಿಸಿರುವ ವಚನಗಳಲ್ಲಿ ಬದುಕಿನ ಮೌಲ್ಯಗಳು, ಮಾನವೀಯ ಸದ್ಗುಣಗಳು, ಸಂಸ್ಕಾರ ಅಡಗಿವೆ. ಶರಣ ಪರಂಪರೆಯಲ್ಲಿ ಉದಯಿಸಿದ ಶರಣ ಸಾಹಿತ್ಯ ಕಾಯಕ ತತ್ವಕ್ಕೆ ಪ್ರಾಮುಖ್ಯತೆ ನೀಡಿದೆ ಎಂದು ರಾಯಚೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಶಿವಯ್ಯ ಹಿರೇಮಠ ಹೇಳಿದರು.
ಪಟ್ಟದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶರಣ ಸಾಹಿತ್ಯ ಪರಿಷತ್‌ನಿಂದ ಹಮ್ಮಿಕೊಂಡಿದ್ದ ಲಿಂ.ಹಂಪಣ್ಣ ಅಮರಾಪುರ ಹಾಗೂ ಆದಿಬಸಣ್ಣ ಮುದ್ದಮ್ಮ ದತ್ತಿ ಉಪನ್ಯಾಸಕ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಕಾಯಕವೇ ಶರಣರು ಹಾಗೂ ಅವರ ರಚಿಸಿರುವ ವಚನಗಳ ಮೂಲ ಮಂತ್ರವಾಗಿದೆ. ಹೀಗಿಯೇ ಶರಣ ಸಾಹಿತ್ಯ ಜಗತ್ತಿನಲ್ಲಿ ಶ್ರೇಷ್ಠ ಸಾಹಿತ್ಯ ಎನಿಸಿದೆ. ಜನರಿಗೆ ಸರಳವಾಗಿ ಅರ್ಥವಾಗುವಂತೆ ಕಾಯಕದ ಮಹತ್ವ, ಮಾನವೀಯ ಮೌಲ್ಯ, ಬದುಕಿನ ಅರ್ಥ ವಚನಗಳಲ್ಲಿ ಕಾಣಬಹುದು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಎ.ರಂಗಣ್ಣ ಪಾಟೀಲ್ ಅಳ್ಳುಂಡಿ ಅಧ್ಯಕ್ಷತೆವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ, ಶರಣ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ ಬದುಕಿನ ಮೌಲ್ಯಗಳನ್ನು ಹೇಳಿವೆ. ಇಂಥ ಸಾಹಿತ್ಯವನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು. ನಾಡು ನುಡಿ ಭಾಷೆ ಇವುಗಳ ಬಗ್ಗೆ ಅಪಾರವಾದ ಕಾಳಜಿ ವಹಿಸುವುದು ಯುವಕರು ಕರ್ತವ್ಯವಾಗಿದೆ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ್ ಮಸ್ಕಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಪುಸ್ತಕದಲ್ಲಿರುವ ಶರಣ ಸಾಹಿತ್ಯ, ವಚನ ಸಾಹಿತ್ಯಕ್ಕೆ ಆದ್ಯತೆ ನೀಡಿ ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು. ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡಬೇಕು ಎಂದರು. ಕಸಾಪ ತಾಲೂಕು ಅಧ್ಯಕ್ಷ ಮರಿಲಿಂಗಪ್ಪ ಕೋಳೂರು ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮುನಿಯಪ್ಪ ನಾಗೋಲಿ, ಉಪನ್ಯಾಸಕ ಸುಭಾಷ್ ಚಂದ್ರ ಪಾಟೀಲ್, ಮೈನುದ್ದೀನ್ ಕಾಟಮಳ್ಳಿ, ಶಿವರಾಜ್ ರುದ್ರಾಕ್ಷಿ, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಎಚ್.ಶಿವರಾಜ್, ಗಂಗಮ್ಮ, ವನಜಾಕ್ಷಮ್ಮ ವಾರದ್, ಆದಿ ಕಮಲಮ್ಮ, ವಿಜಯಲಕ್ಷ್ಮಿ, ಆದಿ ಚಂದ್ರಶೇಖರ್ ಇತರರಿದ್ದರು.