ಬದುಕಲ್ಲಿ ಸಮಸ್ಯೆ ಎದುರಿಸುವ ಛಲ ಬೆಳೆಸಿಕೊಳ್ಳಲು ಕರೆ

ಕಂಪ್ಲಿ ಮಾ 27 : ನಾನು ವಿಜಯನಗರ ಜಿಲ್ಲೆಯಲ್ಲಿದ್ದರೂ ನಾನು ಬಳ್ಳಾರಿ ಜಿಲ್ಲೆಯವರು ಎಂದು ಹೇಳುತ್ತೇನೆ. ಯಾಕೆಂದರೆ, ನನ್ನ ಜನ್ಮ ಸ್ಥಳ ಕಂಪ್ಲಿ, ನನ್ನ ತಂದೆ ಕಂಪ್ಲಿ ಸಕ್ಕರೆ ಕಾರ್ಖಾನೆಯಲ್ಲಿಯೇ ಕೆಲಸ ಮಾಡುತ್ತಿದ್ದರು ಎಂದು ಪದ್ಮಶ್ರೀ ಪುರಸ್ಕೃತ ಮಾತಾ ಮಂಜಮ್ಮ ಜೋಗತಿ ತಮ್ಮ ಹಳೆಯ ನೆನಪು ಮೆಲುಕು ಹಾಕಿದರು.
ಪಟ್ಟಣದ ಸಕ್ಕರೆ ಕಾರ್ಖಾನೆಯ ಮುಕ್ತಿನಾಥೇಶ್ವರ ದೇಗುಲ ಆವರಣದಲ್ಲಿ ಶುಕ್ರವಾರದಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿ ಆಗಮಿಸಿ ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದರು.
ನಾನು ಹುಟ್ಟಿದ ಸ್ಥಳದಲ್ಲೆ ನನಗೆ ಸನ್ಮಾನಿಸಿದ್ದು ನಿಜಕ್ಕೂ ತವರು ಮನೆಯವರು ಸೀರೆ ಮಾಡಿದಷ್ಟು ಖುಷಿ ತಂದಿದೆ. ಅನಿರೀಕ್ಷಿತವಾಗಿ ದೇಹದಲ್ಲಾದ ಬೆಳವಣಿಗೆ ಬಳಿಕ ನಾನು ಹೋಟೆಲ್ ನಡೆಸಿದೆ, ಪರಿಸ್ಥಿತಿ ನಿಮಿತ್ತ ಭಿಕ್ಷೆಯನ್ನೂ ಬೇಡಿದೆ. ದೃಢಿಗೆಡದೇ ಮನೆಯಲ್ಲೇ ಮಕ್ಕಳಿಗೆ ಪಾಠವನ್ನೂ ಭೋದಿಸಿದೆ. ಒಮ್ಮೆ ದಾವಣಗೆರೆ ಪ್ರೌಢಶಾಲೆ ಆವರಣದ ಮೈದಾನದಲ್ಲಿ ಮಲಗಿದ್ದಾಗ, ನನ್ನ ಮೇಲೆ ಪಾನಮತ್ತರು ಎರಗಿದ್ದರು. ಆ ಕ್ಷಣ ನಾನು ಸಾಯಲು ನಿರ್ಧರಿಸಿದ್ದೆ. ಆದರೆ ಸಾವೇ ಎಲ್ಲ ಸಮಸ್ಯೆಗಳಿಗೂ ಪರಿಹಾರವಲ್ಲ ಎಂಬುದನ್ನ ಮನಗಂಡು ಹಂತ ಹಂತವಾಗಿ ಛಲದಿಂದ ಬದುಕುನಡೆಸಿ ಈ ಮಟ್ಟಕ್ಕೆ ತಲುಪಿದ್ದೇನೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಭಾವುಕರಾದರು. ಇನ್ನು ನನ್ನಂತಹ ಮಂಗಳಮುಖಿಯರು ನಿಮ್ಮ ಮನೆಯಲ್ಲಿದ್ದರೆ ದಯವಿಟ್ಟು ಅವರನ್ನ ಮನೆಯಿಂದ ಹೊರದೂಡದೇ ಅವರಿಗೆ ಉತ್ತಮ ಶಿಕ್ಷಣ ನೀಡಿ. ಪ್ರೀತಿ-ವಿಶ್ವಾಸದಿಂದ ಕಾಣಿರಿ. ನಾನು ಇವತ್ತಿಗೂ ಯಾವುದೇ ಪ್ರಶಸ್ತಿ-ಪುರಸ್ಕಾರಗಳ ನಿರೀಕ್ಷೆ ಇಟ್ಟುಕೊಂಡಿಲ್ಲ. ಆದರೆ ಪ್ರಶಸ್ತಿಗಳು ಅವಾಗಿಯೇ ನನ್ನನ್ನು ಅರಸಿ ಬಂದಿವೆ. ಮಂಗಳಮುಖಿಯರನ್ನು ಕೀಳಾಗಿ ನೋಡದೇ ಅವರಲ್ಲಿನ ಪ್ರತಿಭೆ ಹಾಗು ಕಲೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕೆಲಸ ಆಗಬೇಕಿದೆ ಎಂದರು.
ಮಾಜಿ ಶಾಸಕ ಟಿ.ಎಚ್.ಸುರೇಶ್‍ಬಾಬು ಮಾತನಾಡಿ, ಮಹಿಳೆಯರಿಗೆ ಸಮಾಜದ ಎಲ್ಲಾ ರಂಗಗಳಲ್ಲು ಪುರುಷರಿಗೆ ನೀಡುವಷ್ಟೇ ಸಮಾನ ಅವಕಾಶಗಳನ್ನು ಕಲ್ಪಿಸಬೇಕು. ನಾನಾ ಸಮಸ್ಯೆಗಳು, ತೊಡಕುಗಳ ಮಧ್ಯೆ ಮಾತಾ ಮಂಜಮ್ಮ ಜೋಗತಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ನಾವು ಕೂಡ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಅಭಿವೃದ್ಧಿಗಾಗಿ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವಲ್ಲಿ ನೀಡುತ್ತಾ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಪ್ರೋತ್ಸಾಹ ನೀಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಕಂಪ್ಲಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್, ಪುರಸಭೆ ಅಧ್ಯಕ್ಷೆ ಶಾಂತಲಾ ವಿ ವಿದ್ಯಾಧರ್, ಉಪಾಧ್ಯಕ್ಷೆ ನಿರ್ಮಲಾ ಕೆ ವಸಂತ್, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಟಿ.ರಬಿಯಾ, ಪೂರ್ಣಿಮಾ, ಸುನೀತಾ, ಅನಿತಾ ರಾಮಬಸವೇಶ್ವರರಾವ್, ತಾಯಮ್ಮ, ರೀಟಾ ರಾಣಿ, ಹೇಮಾವತಿ ಪೂರ್ಣಚಂದ್ರ , ಲಕ್ಷ್ಮೀ, ದೇವಿ ಸೇರಿದಂತೆ ಮಹಿಳೆಯರನೇಕರು ಪಾಲ್ಗೊಂಡಿದ್ದರು.