ಬದಲಾವಣೆ ಮನೋಭಾವನೆ ನಮ್ಮಿಂದಲೇ ಆರಂಭವಾಗಲಿ

ಕಲಬುರಗಿ:ಜ.14:ಸಂಕ್ರಾಂತಿಯಂದು ಸೂರ್ಯ ತನ್ನ ದಿಕ್ಕನ್ನು ಬದಲಾವಣೆ ಮಾಡುವ ಮೂಲಕ ಪ್ರಕೃತಿಯಲ್ಲಿ ಬದಲಾವಣೆಯಾಗುತ್ತದೆ. ಕೇವಲ ಸೂರ್ಯನ ದಿಕ್ಕು, ಪ್ರಕೃತಿ ಬದಲಾವಣೆಯಾದರೆ ಸಾಲದು. ಜನರು ಬದಲಾಗಬೇಕೆಂದು ಬಯಸುವವರು, ಬದಲಾವಣೆ ನಮ್ಮಿಂದಿಲೇ ಆರಂಭವಾಗಬೇಕೆಂಬ ಮನೋಭಾವನೆ ಬೆಳೆಸಿಕೊಂಡರೆ ಮಾತ್ರ ಅದು ಸಾಧ್ಯವಾಗುತ್ತದೆಯೆಂದು ಮುಖ್ಯ ಶಿಕ್ಷಕ ನೀಲಕಂಠಯ್ಯ ಸ್ವಾಮಿ ಅಭಿಮತ ವ್ಯಕ್ತಪಡಿಸಿದರು.
ನಗರದ ಆಳಂದ ರಸ್ತೆಯ ಎಂ.ಎಂ.ಎನ್ ಟ್ಯೂಟೋರಿಯಲ್ಸ್‍ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಸಂಜೆ ಏರ್ಪಡಿಸಿದ್ದ ‘ಸಂಕ್ರಾಂತಿ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡುತ್ತಾ, ಭಾರತದ ಸಂಸ್ಕ್ರತಿ, ಪರಂಪರೆ ಇಡೀ ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ. ಪಾಶ್ಚಾತ್ಯ ಸಂಸ್ಕ್ರತಿಯ ಅನುಕರಣೆ ಮಾಡದೇ ನಮ್ಮದೇ ಆದ ಭವ್ಯ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಜವಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ. ಈ ನಿಟ್ಟಿನಲ್ಲಿ ಹಬ್ಬಗಳು ತನ್ನದೇ ಆದ ಮಹತ್ವ ಪಡೆದಿವೆ. ಇಂತಹ ಹಬ್ಬಗಳ ಮೇರು ಸಂದೇಶವನ್ನು ವಿಶ್ವಸಂಸ್ಥೆಗೆ ಮುಟ್ಟಿಸುವ ಕಾರ್ಯವಾಗಬೇಕಾಗಿದೆಯೆಂದು ಆಶಯ ವ್ಯಕ್ತಪಡಿಸಿದರು.
ಸಂಕ್ರಾಂತಿ ಹಬ್ಬವು ವೈಜ್ಞಾನಿಕತೆಯಿಂದ ಕೂಡಿದೆ. ಎಳ್ಳು, ಬೆಲ್ಲ, ಕಬ್ಬು ಸೇವನೆಯಿಂದ ಶರೀರಕ್ಕೆ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ. ಪರಸ್ಪರ ಸ್ನೇಹ, ಸಹಕಾರ ಮನೋಭಾವನೆ, ಪ್ರೀತಿ, ವಿಶ್ವಾಸದಿಂದ ಜೀವನ ಸಾಗಿಸಬೇಕೆಂಬ ಮೇರು ಸಂದೇಶ ಹೊಂದಿದೆ. ಹಬ್ಬದ ಹಿನ್ನಲೆ, ವೈಶಿಷ್ಟತೆ, ಆಶಯವನ್ನು ಪ್ರತಿಯೊಬ್ಬರು ತಿಳಿದುಕೊಂಡು ಆಚರಿಸಿದರೆ ಹಬ್ಬಕ್ಕೆ ಹೆಚ್ಚಿನ ಅರ್ಥ ಬರಲು ಸಾಧ್ಯವಾಗುತ್ತದೆಯೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಸೋಮಶೇಖರ ಬಿ.ಮೂಲಗೆ, ಬಸವರಾಜ ಎಸ್.ಪುರಾಣೆ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಅಣ್ಣಾರಾಯ ಮಂಗಾಣೆ, ಪ್ರಕಾಶ ಸರಸಂಬಿ, ದಾನೇಶ ವಗ್ಗಿ, ವೀರೇಶ ಬೋಳಶೆಟ್ಟಿ ನರೋಣಾ, ವೀರಭದ್ರ ಡೊಣಗಾಪುರ ಸೇರಿದಂತೆ ಮತ್ತಿತರರಿದ್ದರು.