ಬದಲಾವಣೆ ತರುವ ನಿಟ್ಟಿನಲ್ಲಿ ಸಂಶೋಧನಾ ವರದಿಗಳು ಹೊರಬರಲಿ


ಚಿತ್ರದುರ್ಗ,ಅ.29; ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಸಂಶೋಧನಾ ವರದಿಗಳು ಹೊರಬರುವಂತಾಗಲಿ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ಎ.ನಾರಾಯಣಸ್ವಾಮಿ ಸಲಹೆ ನೀಡಿದರು.
 ಚಿತ್ರದುರ್ಗದ ಗುಡ್ಡದರಂಗವ್ವನಹಳ್ಳಿ ಸ್ನಾತಕೋತ್ತರ ಕೇಂದ್ರ ಜ್ಞಾನಗಂಗೋತ್ರಿ ಕ್ಯಾಂಪಸ್ ಆವರಣದಲ್ಲಿ  ಡಾ.ಬಾಬು ಜಗಜೀವನ್‍ರಾಮ್ ಉಪನ್ಯಾಸ ಮಾಲಿಕೆ ಉದ್ಘಾಟನೆ ಹಾಗೂ ಮಹಿಳಾ ವಸತಿ ನಿಲಯದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ದೇಶದ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್‍ರಾಮ್ ಅವರ ಅಧ್ಯಯನ ಪೀಠಗಳಿವೆ. ಆದರೆ ವಾಸ್ತವದಲ್ಲಿ ಸಮಾಜದ ಸಮಸ್ಯೆ, ಕೊರತೆ, ಸಮಾಜವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅಧ್ಯಯನ ವರದಿಗಳು ಬರುತ್ತಿಲ್ಲ. ಸಮಾಜವನ್ನು ಪರಿವರ್ತನೆ ಮಾಡುವಂತಹ ಸಂಶೋಧನೆಗಳಾಗಬೇಕು. ದೇಶದಲ್ಲಿ ಹೊಸ ಅವಿಷ್ಕಾರಗಳು, ಅನ್ವೇಷಣೆಗಳು, ಸಂಶೋಧನೆಗಳು ಆಗಬೇಕು. ಸಂಶೋಧನೆಯಿಂದ ದೊರಕುವ ಉತ್ತರದಿಂದ ಸಮಾಜ ಕಟ್ಟಲು ತಾಳಪಾಯವಾಗಲಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯಗಳು ವ್ಯಕ್ತಿತ್ವ ಹಾಗೂ ಜ್ಞಾನವನ್ನು ವೃದ್ಧಿಸುವ ಕೇಂದ್ರಗಳಾಗಿದ್ದು, ಸಮಾಜ, ದೇಶ ಕಟ್ಟಲು ಅವಶ್ಯಕವಾಗಿರುವ ದೇವಾಲಯಗಳಾಗಿವೆ. ವಿದ್ಯಾರ್ಥಿಗಳು ಕೇವಲ ಪದವಿ ಪಡೆದರೆ ಸಾಲದು, ಪದವಿ ಪ್ರಮಾಣ ಪತ್ರದ ಜೊತೆಗೆ ಉತ್ತಮ ಜ್ಞಾನ, ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ದೇಶದಲ್ಲಿ ಐಎಎಸ್ ಅಧಿಕಾರಿಗಳ ಕೊರತೆಯಿದ್ದು, ವಿಶ್ವವಿದ್ಯಾಲಯಗಳು ಐಎಎಸ್ ಅಧಿಕಾರಿಗಳನ್ನು ತಯಾರು ಮಾಡುವ ಮೂಲಕ ಐಎಎಸ್ ಅಧಿಕಾರಿಗಳ ಕೊರತೆ ನೀಗಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಎಂ ಗೌಡ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೆ ಬಂದಿದ್ದು, ಇದನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಂಡಿದ್ದು, ರಾಜ್ಯಕ್ಕೆ ಇದು ದೊಡ್ಡ ಜವಾಬ್ದಾರಿಯಾಗಿದೆ ಎಂದು ಹೇಳಿದರು.
 ವಿದ್ಯಾರ್ಥಿಗಳ ಜನಸಂಖ್ಯೆಗೆ ಅನುಗುಣವಾಗಿ ವಿಶ್ವವಿದ್ಯಾಲಯಗಳ ಸ್ಥಾಪನೆಯಾಗಬೇಕು. ಇದರ ಜೊತೆಗೆ ವಿಶ್ವವಿದ್ಯಾಲಯಗಳಿಗೆ ಅಗತ್ಯವಾಗಿ ಬೇಕಾಗಿರುವ ಅಕಾಡೆಮಿಕ್ ಸೌಲಭ್ಯಗಳನ್ನು ಸರ್ಕಾರದ ಕಾಲಕಾಲಕ್ಕೆ ನಿಯಮಿತವಾಗಿ ಕಲ್ಪಿಸಬೇಕು. ಉತ್ತಮ ಗುಣಮಟ್ಟದ ಸಂಶೋಧನಾ ವರದಿಗಳನ್ನು ದೇಶಕ್ಕೆ ಕೊಡುಗೆ ನೀಡುವ ಜವಾಬ್ದಾರಿ ವಿಶ್ವವಿದ್ಯಾಲಯಗಳ ಮೇಲಿದೆ. ರಾಜ್ಯದಲ್ಲಿ ಇಂಗ್ಲಿಷ್, ವಿಜ್ಞಾನ ಹಾಗೂ ಗಣಿತ ಶಿಕ್ಷಕರ ಕೊರತೆ ಇದ್ದು, ಈ ವಿಷಯಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
 ಚಿತ್ರದುರ್ಗದ ಗುಡ್ಡದರಂಗವ್ವನಹಳ್ಳಿಯ ಜ್ಞಾನ ಗಂಗೋತ್ರಿ ಸ್ನಾತಕೋತ್ತರ ಕೇಂದ್ರವು ಸ್ವತಂತ್ರ ವಿಶ್ವವಿದ್ಯಾಲಯವಾಗಬೇಕು. ಇದರಿಂದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಬಿ.ಗಂಗಾಧರ್ ಅವರು ಡಾ.ಬಾಬು ಜಗಜೀವನ್‍ರಾಂ ಅವರ ಜೀವನದ ಘಟನಾವಳಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ ಹಲಸೆ, ಕುಲಸಚಿವೆ ಪ್ರೊ.ಗಾಯತ್ರಿ ದೇವರಾಜ, ಪರೀಕ್ಷಾಂಗ ಕುಲಸಚಿವೆ ಎಚ್.ಎಸ್. ಅನಿತಾ, ಹಣಕಾಸು ಅಧಿಕಾರಿ ಪ್ರಿಯಾಂಕ ಡಿ, ಗುಡ್ಡದ ರಂಗವ್ವನಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಎಚ್.ವಿಶ್ವನಾಥ, ವಿಶ್ವವಿದ್ಯಾನಿಲಯದ ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್, ವಿವಿಧ ನಿಕಾಯಗಳ ಡೀನರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.