ಬತ್ತಿ ಹೋದ ಮಾಳಾಪುರ ಕೆರೆ, ಪಶು ಪಕ್ಷಿಗಳಿಗೆ ನೀರಿನ ಸಂಕಷ್ಟ


ಜಾಲಿಹಾಳ್ ರಾಜಸಾಬ್
ಸಿರುಗುಪ್ಪ: ತಾಲೂಕಿನಲ್ಲಿಯೇ ಅತಿ ದೊಡ್ಡದಾದ ಸುಮಾರು 250 ಎಕರೆ ಪ್ರದೇಶ ವ್ಯಾಪ್ತಿಯನ್ನು ಹೊಂದಿರುವ ಈ ಕೆರೆಯಲ್ಲಿ ಒಂದು ಬಾರಿ ಮಳೆನೀರು ಸಂಗ್ರಹವಾದರೆ ಒಂದು ವರ್ಷದ ವರೆಗೆ ನೀರು ಬತ್ತುತ್ತಿರಲಿಲ್ಲ, ಅಲ್ಲದೆ ಎಲ್‌ಎಲ್‌ಸಿ ಕಾಲುವೆಯಿಂದಲು ಈ ಕೆರೆಗೆ ನೀರನ್ನು ಮಳೆಗಾಲದಲ್ಲಿ ಹರಿಸಲಾಗುತ್ತಿತ್ತು.  ಆದರೆ ಈ ಬಾರಿ ಉತ್ತಮ ಮಳೆಯಾಗದೆ ಕೆರೆಯು ಬಂದ ಅಲ್ಪಸ್ವಲ್ಪ ಮಳೆನೀರು ಸಂಗ್ರಹವಾಗಿತ್ತು. ಎಲ್‌ಎಲ್‌ಸಿ ಕಾಲುವೆಯಿಂದ ಈ ಬಾರಿ ಕೆರೆಗೆ ನೀರನ್ನು ಹರಿಸದ ಕಾರಣ ಬೇಸಿಗೆಗೆ ಮುನ್ನವೆ ಕೆರೆಯು ಸಂಪೂರ್ಣವಾಗಿ ಬತ್ತಿ ಹೋಗಿದೆ.
  ತಾಲೂಕಿನ ಮುದ್ದಟನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಅತಿ ದೊಡ್ಡ ಕೆರೆಯಾದ ಮಾಳಾಪುರ ಕೆರೆಯು ನೀರಿಲ್ಲದೆ ಬತ್ತಿ ಹೋಗಿದ್ದು, ಕೆರೆಯ ನೀರನ್ನು ನಂಬಿಕೊಂಡು ಜೀವಿಸುತ್ತಿದ್ದ 20ಕ್ಕೂ ಹೆಚ್ಚು ಪ್ರಬೇಧದ ಪಕ್ಷಿಗಳು, ಹತ್ತಾರು ಜಾತಿಯ ಮೀನುಗಳು, ನೀರಿನ ಸಂಕಷ್ಟ ಎದುರಿಸುತ್ತಿದ್ದು, ಮಾಳಾಪುರ ರೈತರ ಪಾಲಿಗೆ ಜಲಸಂಜೀವಿನಿಯಾಗಿದ್ದ ಕೆರೆ ಈಗ ಖಾಲಿ ಖಾಲಿಯಾಗಿದೆ.
  ಇದರಿಂದಾಗಿ ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಅಪರೂಪದ ವಿವಿಧ ಜಾತಿಯ ಪಕ್ಷಿ ಸಂಕುಲ ನೀರಿಲ್ಲದೆ ಬೇರೆಡೆ ವಲಸೆ ಹೋಗಿವೆ, ಆದರೆ ಹಲವು ತಳಿಯ ಮೀನುಗಳು ನೀರಿಲ್ಲದೆ ಸಾವನ್ನಪ್ಪಿವೆ.
ಸಿರಿಗೇರಿ ಸುತ್ತಮುತ್ತಲಿನ ಹಲವಾರು ಗ್ರಾಮಗಳ ಕುರಿಗಾರರ ಕುರಿಗಳಿಗೆ ಮತ್ತು ದನಕರುಗಳಿಗೆ ಮಾಳಾಪುರ ಕೆರೆಯ ನೀರು ಮೂಲಾಧಾರವಾಗಿದ್ದು, ಸುಮಾರು 15-20ಸಾವಿರ ಕುರಿ ದನಕರುಗಳು ಬೇಸಿಗೆ ಸಮಯದಲ್ಲಿ ಕೆರೆಯ ನೀರನ್ನು ಕುಡಿಯುತ್ತಿದ್ದವು, ಆದರೆ ಕೆರೆ ಬತ್ತಿರುವುದರಿಂದ ಕುರಿಗಾರರು ತಮ್ಮ ಕುರಿಗಳಿಗೆ ನೀರು ಕುಡಿಸಲು ಪರದಾಡುತ್ತಿದ್ದಾರೆ.
ಹೇಳಿಕೆ:- ಕುರಿ ಮತ್ತು ದನಕರುಗಳ ಕುಡಿಯುವ ನೀರಿನ ಮೂಲಾಧಾರವಾಗಿದ್ದ ಮಾಳಾಪುರ ಕೆರೆ ಬತ್ತಿಹೋಗಿದ್ದರಿಂದ ನಮ್ಮ ಕುರಿಗಳಿಗೆ ನೀರು ಕುಡಿಸಲು ಬೋರ್‌ವೆಲ್‌ಗಳ ನೀರನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆರಾಯ ಕಣ್ಣು ತೆರೆದರೆ ಮಾತ್ರ ಕೆರೆ ತುಂಬಲು ಸಾಧ್ಯವೆಂದು ಸಿರಿಗೇರಿಯ ಕುರಿಗಾರ ಮಾರೆಪ್ಪ ತಿಳಿಸಿದ್ದಾರೆ.
ಹೇಳಿಕೆ:-    ಮಾಳಾಪುರ ಕೆರೆಯಲ್ಲಿ ನೀರು ಬತ್ತಿದ್ದರೂ ದನಕರುಗಳಿಗೆ ಕುಡಿಯಲು ಬೋರ್‌ವೆಲ್ ನೀರನ್ನು ಒದಗಿಸಲಾಗುತ್ತಿದೆ. ಗ್ರಾಮದಲ್ಲಿರುವ ದನಕರುಗಳಿಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಇಲ್ಲವೆಂದು ಮುದ್ದಟನೂರು ಗ್ರಾ.ಪಂ. ಪಿ.ಡಿ.ಒ ಬಸವರಾಜ್ ತಿಳಿಸಿದ್ದಾರೆ.