ಬಣ್ಣ ಹಚ್ಚದೇ ನಟನೆ ಮಾಡುತ್ತಿರುವ ಕೃಷಿ ಸಚಿವರು: ಬಸವರಾಜು ವಿ ಶಿವಗಂಗಾ


ದಾವಣಗೆರೆ : ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲ್ಲೂಕಿನಲ್ಲಿ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಹೊಸ ಡ್ರಾಮಾ ಆರಂಭ ಮಾಡಿದ್ದು ಬಣ್ಣ ಹಚ್ಚದೇ ಅಭಿನಯ ಮಾಡಿದ್ದಾರೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ತಿಳಿಸಿದರು. ರೈತರು ಆತ್ಮಹತ್ಯೆ ಮಾಡಿಕೊಂಡ ವೇಳೆ, ಬೆಳೆ ನಷ್ಟದಿಂದ ಸಂಕಷ್ಟಕ್ಕೊಳಗಾದ ವೇಳೆ ರೈತರನ್ನ ಭೇಟಿಯಾಗದ ಕೃಷಿ ಸಚಿವರು ಇದೀಗ ಕಷ್ಟಪಟ್ಟು ರೈತರು ಬೆಳೆದ ಭತ್ತದ ಗದ್ದೆಗೆ ಹೋಗಿ ಫೋಸ್ ನೀಡುತ್ತಿದ್ದಾರೆ. ಗದ್ದೆಯಲ್ಲಿ ಇಳಿದು ಫೋಟೋ ತೆಗೆಸಿಕೊಂಡು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಬಿಸಿ ಪಾಟೀಲ್ ಅವರಿಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಹೊಂದಿದ್ದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡಲಿ, ಕೇವಲ ಒಂದು ದಿನ ರೈತರ ಜಮೀನುಗಳಿಗೆ ಭೇಟಿ ನೀಡಿ ಪ್ರಚಾರಕ್ಕಾಗಿ ರೈತರಿಗೆ ಇಲ್ಲ ಸಲ್ಲದ ಆಶ್ವಾಸನೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು. ಮಂಡ್ಯದಲ್ಲಿ ಸರಣಿ ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಗಳಿಗೆ ಬಿಜೆಪಿ ಏನು ಮಾಡಿದೆ, ಕೇವಲ ಅವರ ಕುಟುಂಬಗಳಿಗೆ ಇಂತಿಷ್ಟು ಪರಿಹಾರ ಎಂದು ನೀಡಿ ಕೈ ತೊಳೆದುಕೊಂಡಿದೆ ಎಂದರು. ಒಂದು ದಿನ ರೈತರ ಜೊತೆ ಇದ್ದ ಕೂಡಲೇ ರೈತರ ಸಮಸ್ಯೆ ಬಗೆಹರಿಯಲ್ಲ ಸರ್ಕಾರದಿಂದ ರೈತರಿಗೆ ಸಿಗಬೇಕಾದ ನ್ಯಾಯ ಕೊಡಿಸಲಿ ಎಂದರು. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಸರ್ಕಾರವೇ ಬೆಳೆ ಖರೀದಿ ಮಾಡಿ ರೈತರಿಗೆ ನೆರವಾಗಲಿ. ಈ ರೀತಿ ರೈತರ ಜಮೀನುಗಳಿಗೆ ಹೋಗಿ ಒಂದು ದಿನ ಕೃಷಿ ಕೆಲಸ ಮಾಡಿದ ಕೂಡಲೇ ಅನ್ನದಾತರ ಸಂಕಷ್ಟ ದೂರವಾಗಲ್ಲ ಎಂದರು. ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಅವರು ಒಂದು ದಿನದ ಡ್ರಾಮಾ ಮಾಡಿದ್ದಾರೆ ವಿನಃ ಬೇರೆ ಏನು ಮಾಡಿಲ್ಲ ಎಂದು ಆರೋಪಿಸಿದರು. ಕೆ.ಆರ್ ಪೇಟೆ ತಾಲ್ಲೂಕಿನಲ್ಲಿ ಬೆಳೆ ನಷ್ಟಕ್ಕೊಳಗಾದ ಹಾಗು ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಎಷ್ಟು ಪರಿಹಾರ ಕೊಟ್ಟಿದ್ದೀರಾ ಮಾಹಿತಿ ನೀಡಿ ಎಂದರು. ಪ್ರಚಾರಕ್ಕಾಗಿ ಈ ರೀತಿ ಕಾರ್ಯಕ್ರಮ ಮಾಡುವುದರಿಂದ ಬಿ.ಸಿ ಪಾಟೀಲ್ ಅವರು ನಿಜವಾದ ರೈತ ಆಗಲು ಸಾಧ್ಯವಿಲ್ಲ, ಇದು ಒಂದು ದಿನ ಅಭಿನಯ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ತಿಳಿಸಿದರು.