ಬಣ್ಣ ಕಳೆದುಕೊಳ್ಳುತ್ತಿರುವ ಸುಣಗಾರನ ಬದುಕು


ಸಿಕಂದರ ಎಂ. ಆರಿ
ಗದಗ,ಮಾ.23: ಜಿಲ್ಲೆಯ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಕಲ್ಲು ಸುಟ್ಟು, ಸುಣ್ಣ ತಯಾರಿಸುವ ಸುಣಗಾರನ ಬದುಕು ತೀರಾ ಮೂರಾಬಟ್ಟೆಯಂತಾಗಿದೆ. ಮತ್ತೊಬ್ಬರ ಮನೆಯ ಬೆಳಗಿಸುವ ಅವರ ಬದುಕನ್ನು ಆಧುನಿಕ ರೆಡಿಮೇಡ್ ಪ್ಯಾಕೇಟೊಂದು ಬೀದಿಗೆ ಬೀಳುವಂತೆ ಮಾಡಿದೆ. ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಸುಲಭವಾಗಿ ಸಿಗುತ್ತದೆ. ಇದರಂದ ಸಮಯ ಉಳಿತಾಯವಾಗುತ್ತದೆ ಎನ್ನುವ ಕಾರಣಕ್ಕೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಅಂತಹದ್ದೊಂದು ಪ್ಯಾಕೇಟ್‍ವೊಂದು ಕಾಲಕಾಲಾಂತರದಿಂದ ಬಂದ ಸಾಂಪ್ರದಾಯಿಕ ಉದ್ಯೋಗಕ್ಕೆ ಕುತ್ತು ತರುತ್ತಿದೆ ಎಂದರೆ ಇದು ಅಭಿವೃದ್ಧಿಯೋ ಅಥವಾ ಇನ್ನೇನೋ ಎನ್ನುವ ಪ್ರಶ್ನೆಯನ್ನು ಜನಮಾನಸದಲ್ಲಿ ಹುಟ್ಟುಹಾಕಿದೆ.
ಸುಣ್ಣದ ಭಟ್ಟಿಯನ್ನು ಮುಂದುವರೆಸಬೇಕೋ ಅಥವಾ ಬೇಡವೋ ಎಂಬ ಗೊಂದಲದಲ್ಲಿ ಸುಣಗಾರರಿದ್ದಾರೆ. ರಸಾಯನಿಕ ಮಿಶ್ರಿತ ಸುಣ್ಣ ಮತ್ತು ಬಣ್ಣಕ್ಕೆ ಜನರು ಮರುಳಾಗಿದ್ದರಿಂದ ಮತ್ತು ತ್ವರಿತವಾಗಿ ಸಿಗುವುದರಿಂದ ಸುಣಗಾರರು ಕಷ್ಟಪಟ್ಟು ಸಿದ್ದಗೊಳಿಸಿದ ಸುಣ್ಣವನ್ನು ಯಾರೂ ಕೇಳುವವರು ಇಲ್ಲದಂತಾಗಿ, ಅವರ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿದೆ. ಇದರಿಂದ ಸುಣಗಾರನ ಬದುಕು ಕಾಲಕಳೆದಂತೆ ಕ್ರಮೇಣ ಬಣ್ಣ ಕಳೆದುಕೊಳ್ಳುತ್ತಿದೆ. ಇಂದಲ್ಲಾ ನಾಳೆ ಸುಣ್ಣಕ್ಕೆ ಹೆಚ್ಚಿನ ಬೆಲೆ ಬಂದಿತು ಎಂದು ಸುಣಗಾರರು ಹಲವಾರು ಕಡೆ ಸುಣ್ಣದ ಬಟ್ಟೆಯನ್ನು ತೆಗೆದಿದ್ದರಾದರೂ ಗ್ರಾಮೀಣ ಪ್ರದೇಶದ ಪಟ್ಟಣದ ಬಣ್ಣದ ಸುಣ್ಣಕ್ಕೆ ಮಾರು ಹೋಗಿ, ಸುಣ್ಣ ಹಾಗೆಯೇ ಉಳಿದು ಸುಣಗಾರ ವೃತ್ತಿಗೆ ಕೊಡಲಿಪೆಟ್ಟು ಬಿದ್ದಂತಾಗಿದೆ. ಇದರಿಂದ ಈ ವೃತ್ತಿಯನ್ನು ನಂಬಿಕೊಂಡವರು ಇತ್ತ ನಂಬಿಕೊಂಡ ವೃತ್ತಿಯನ್ನು ಬಿಡಲಾಗದೇ, ಮುಂದುವರೆಸಲೂ ಆಗದೇ ಸಂಕಟಪಡುತ್ತಿದ್ದಾರೆ. ಎಷ್ಟೇ ದುಡಿದರೂ ಹೊಟ್ಟೆಗಾದರೆ ಬಟ್ಟೆಗಾಗುವುದಿಲ್ಲ, ಬಟ್ಟೆಗಾದರೆ ಹೊಟ್ಟೆಗಿಲ್ಲ. ಅನ್ಯ ಉದ್ಯೋಗ ಅರಸಿಕೊಂಡು ಹೋಗುವ ಪ್ರಸಂಗ ಎದುರಾಗಿದೆ.
ಸುಣ್ಣದ ಕಲ್ಲು ಹಳ್ಳ ಮತ್ತು ಜಮೀನಿನಲ್ಲಿ ದೊರೆಯುವುದರಿಂದ ಇವರಿಗೆ ದೊಡ್ಡ ಸಮಸ್ಯೆ. ಇವರು ಬಾಗಲಕೋಟಿ ಜಿಲ್ಲೆಯ ಚೋಳಚಗುಡ್ಡದ ಹಳ್ಳಕ್ಕೆ ಹೋಗಿ ಸುಮಾರು ಒಂದು ಗಾಡಿಗೆ 4 ರಿಂದ 5 ಸಾವಿರ ರೂ. ನೀಡಬೇಕಿದೆ. ಸುಣ್ಣದ ಹರಳನ್ನು ಸುಡಲು ಇದ್ದಿಲು ಬೇಕೇಬೇಕು. ಇದ್ದಿಲು ಸಿಗುವುದೇ ದೊಡ್ಡ ಸಮಸ್ಯೆಯಾಗಿದೆ. ಹಣ ಕೊಟ್ಟರು ಇದ್ದಿಲು ಸಿಗುತ್ತಿಲ್ಲ ಎಂಬ ಕೂರಗು ಇವರದ್ದಾಗಿದೆ. ಈ ಆಧುನಿಕ ದಿನಗಳಲ್ಲಿ ನಮ್ಮ ಬುದಕು ಸರಿಯಿಲ್ಲ ಎಂಬುದು ಅವರ ನೋವಾಗಿದೆ. ಗದಗ ಜಿಲ್ಲೆಯ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಈ ವೃತ್ತಿಯನ್ನೆ ನಂಬಿ ಜೀವ ಸಾಗಿಸುವ ಹಲವಾರು ಕುಟುಂಬಗಳಿಗೆ ವೃತ್ತಿ ಭದ್ರತೆ ಮತ್ತು ಆದಾಯವಿಲ್ಲದಾಗಿದೆ. ಸರ್ಕಾರ ಇಂತಹ ಕುಟುಂಬಗಳಿಗೆ ಸಾಲಸೌಲಭ್ಯವನ್ನು ಕೂಡ ನೀಡದೇ ಇರುವುದರಿಂದ ಈ ಕುಟುಂಬಗಳು ಬೀದಿ ಪಾಲಾಗುವ ಸ್ಥಿತಿಗೆ ಬಂದು ನಿಂತಿವೆ.
ಸುಣ್ಣದ ಕಲ್ಲು, ಇದ್ದಿಲಿಗೆ ಹಣ ತೆತ್ತು ಕಷ್ಟಪಟ್ಟು ತಯಾರಿಸಿದ ಸುಣ್ಣಕ್ಕೆ ಮಾರುಕಟ್ಟೆಯಲ್ಲಿ ಒಂದು ಸೇರಿಗೆ 12 ರಿಂದ 15 ರೂ. ಇದೆ. ಬರುವ ಈ ಅಲ್ಪ ಹಣದಲ್ಲೇ ತನ್ನ ಹಾಗೂ ಕುಟುಂಬದ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಸ್ಥಿತಿ. ಹಿಂದೆ ಮಣ್ಣಿನ ಮನೆಗಳು ಜಾಸ್ತಿ ಇದ್ದು, ಮನೆಗೆ ಹಬ್ಬ ಹರಿದಿನಗಳಲ್ಲಿ ಜನರು ಹೆಚ್ಚಾಗಿ ಸುಣ್ಣ ಹಚ್ಚುತ್ತಿದ್ದರು. ಆದರೆ, ಈಗ ಆರ್‍ಸಿಸಿ ಮನೆಗಳ ನಿರ್ಮಾಣವಾಗಿದಕ್ಕೆ ಸಿದ್ದಸುಣ್ಣವನ್ನೇ ಬಳಸುತ್ತಾರೆ. ಜನರು ಕೂಡ ಜಗಮಗಿಸುವ ಹೊಸ ಸುಣ್ಣಕ್ಕೆ ಮಾರು ಹೋಗಿದ್ದರಿಂದ ಸುಣ್ಣವನ್ನು ಕೇಳುವರು ಇಲ್ಲದಾಗಿ ಸುಣ್ಣಸುಡುವ ಸುಣಗಾರನ ಬದುಕು ಕಷ್ಟಕ್ಕೆ ಬಂದು ನಿಂತಿದೆ.

ಕೋಟ್ :
ಮಳೆ-ಚಳಿಗಾಲ ಎನ್ನದೇ ನಮ್ಮ ಕೆಲಸದಲ್ಲಿ ನಾವು ತೊಡಗುತ್ತೇವೆ. ಕಲ್ಲುಗಳಿಗೆ ಬಹಳ ಬೇಡಿಕೆ ಇದೆ. ಆದರೂ ಬೇರೆಕಡೆಯಿಂದ ತಂದು ಸಣ್ಣ ತಯಾರು ಮಾಡಲಾಗುತ್ತಿದೆ. ನಂತರ ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತೇವೆ ಸೇರಿಗೆ 12 ರಿಂದ 15 ರೂ. ಸಿಗುತ್ತದೆ. ಬಣ್ಣ ಬಳಿಯುವವರ ಸಂಖ್ಯೆ ಜಾಸ್ತಿ ಇರುವುದರಿಂದ ಬೇಡಿಕೆ ಕುಗ್ಗಿದೆ ಎಂದು ಜಕ್ಕಲಿ ಗ್ರಾಮದ ಸುಣಗಾರ ಸಂಗಪ್ಪ ತುರಾಯದ, ಪರಸಪ್ಪ ತುರಾಯದ ತಿಳಿಸಿದರು.