ಬಣ್ಣದ ಲೋಕಕ್ಕೆ ವಿದಾಯದ ಸುಳಿವು ಕೊಟ್ಟ ಕಾಜಲ್

ಹೈದರಾಬಾದ್,ಜೂ.೧೫-ನಟಿ ಕಾಜಲ್ ಅಗರ್‌ವಾಲ್ ಮದುವೆಯಾಗಿ ಮಗು ಹುಟ್ಟಿದ ನಂತರವೂ ಅವರ ಸೌಂದರ್ಯ ಒಂದಿನಿತೂ ಕುಂದಿಲ್ಲ. ಅದೇ ಗ್ಲಾಮರ್ ಉಳಿಸಿಕೊಂಡಿರುವ ನಟಿ ಕಾಜಲ್, ಸ್ಟಾರ್ ನಾಯಕಿಯಾಗಿ ಈಗಲೂ ಯುವಕರ ಹೃದಯಕ್ಕೆ ಲಗ್ಗೆ ಇಡುತ್ತಿದ್ದಾರೆ.ಟಾಲಿವುಡ್ ನಲ್ಲಿ ಬೆಳ್ಳಿತೆರೆಯ ಚಂದಮಾಮ ಎಂದೇ ಖ್ಯಾತಿ ಪಡೆದಿರುವ ಈ ಸುಂದರಿ ಹಲವು ಸೂಪರ್ ಡೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಈ ನಟಿ ಒಂದು ಹೊಸ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ..
ತೇಜಾ ನಿರ್ದೇಶನದ ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ಕಾಜಲ್ ತೆಲುಗು ಚಿತ್ರರಂಗ ಪ್ರವೇಶಿಸಿದರು. ನಂತರ ಕೃಷ್ಣವಂಶಿ ನಿರ್ದೇಶನದ ಚಂದಮಾಮ ಚಿತ್ರದ ಮೂಲಕ ಕಾಜಲ್ ಅತ್ಯಂತ ಬೇಡಿಕೆಯ ತಾರೆ ಆದರು.ಅಭಿಮಾನಿಗಳ ಅಪಾರ ಪ್ರೀತಿ ಗಳಿಸಿದರು.
ಮದುವೆ ನಂತರ ತೆಲುಗಿನಲ್ಲಿ ನಟ ಬಾಲಯ್ಯ ಜೊತೆ ಕಾಜಲ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಜೊತೆಗೆ ತಮಿಳಿನ ಕ್ವೀನ್ ರಿಮೇಕ್, ಭಾರತೀಯ ೨,,’ಪ್ಯಾರಿಸ್ ಪ್ಯಾರಿಸ್ ಮುಂತಾದ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಉಮಾ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲ ಚಿತ್ರಗಳನ್ನು ಆದಷ್ಟು ಬೇಗ ಮುಗಿಸುವ ಆತುರದಲ್ಲಿದ್ದಾರೆ ಕಾಜಲ್.
ಈ ಮಧ್ಯೆ, ಕಾಜಲ್ ತನ್ನ ಪತಿ ಮತ್ತು ಮಕ್ಕಳ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತಿದೆ. ಕೌಟುಂಬಿಕ ಕಾರಣಕ್ಕಾಗಿ ಕಾಜಲ್ ತನ್ನ ನೆಚ್ಚಿನ ಬಣ್ಣದ ಲೋಕಕ್ಕೆ ವಿದಾಯ ಹೇಳಲು ಹೊರಟಿದ್ದಾರೆ ಎಂದು ತೋರುತ್ತದೆ.
ಸಿನಿಮಾ ಚಿತ್ರೀಕರಣಗಾಗಿ ಹೆಚ್ಚಾಗಿ ಹೊರಗಡೆಯೇ ಇರುವುದರಿಂದ ಪತಿ ಮತ್ತು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಕಾಜಲ್ ಸಿನಿಮಾಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಮಗ ನೀಲ್ ಗಾಗಿ ಕಾಜಲ್ ಈ ತ್ಯಾಗ ಮಾಡುತ್ತಿದ್ದಾರೆ ಎನ್ನಲಾಗಿದೆ .ಚಿತ್ರಗಳ ಚಿತ್ರೀಕರಣದಲ್ಲಿ ಹೆಚ್ಚು ಕಾಲ ಇರುವುದರಿಂದ ಮಗನ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಈ ವಯಸ್ಸಿನಲ್ಲಿ ಮಗುವಿಗೆ ತಾಯಿಯ ಪ್ರೀತಿ ಹೆಚ್ಚು ಬೇಕು ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಕಾಜಲ್ ಯಾವುದೇ ಸ್ಪಷ್ಟನೆ ನೀಡಿಲ್ಲ.
ಸದ್ಯ ಬಾಲಯ್ಯ ೧೦೮ ಚಿತ್ರದಲ್ಲಿ ಕಾಜಲ್ ನಾಯಕಿಯಾಗಿದ್ದು, ಶ್ರೀಲೀಲಾ ಬಾಲಕೃಷ್ಣನ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಿನಿಮಾಗಳಲ್ಲಿ ನಟಿಸಲು ಕಾಜಲ್ ಗೆ ಭಾರಿ ಬೇಡಿಕೆ ಇದೆ.
ಆಕೆ ಕೇಳಿದ ಸಂಭಾವನೆ ನೀಡಲು ನಿರ್ಮಾಪಕರು ಸಿದ್ಧರಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಚಿತ್ರದಲ್ಲಿ ನಟಿಸಲು ಕಾಜಲ್ ೪ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಅನಿಲ್ ರವಿಪುಡಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ ಚಿತ್ರೀಕರಣ ಹಂತದಲ್ಲಿರುವ ಈ ಚಿತ್ರ ದಸರಾ ಹಬ್ಬಕ್ಕೆ ಬಿಡುಗಡೆಯಾಗಲಿದೆ.