ಬಣ್ಣದ ಬದುಕಿನಲ್ಲಿ ತಮ್ಮನೇ ಬೆನ್ನೆಲುಬು

*ಚಿಕ್ಕನೆಟಕುಂಟೆ ಜಿ.ರಮೇಶ್

ಬಣ್ಣದ ಜಗತ್ತಿನಲ್ಲಿ ಬದುಕು ಕಟ್ಟಿಕೊಳ್ಳಬೇಕೆಂಬ ಕನಸು ಅನೇಕ ಮಂದಿಯದು. ಅದರಲ್ಲಿ ಕೆಲವರು ಯಶಸ್ವಿಯಾದರೆ ಮತ್ತೆ ಕೆಲವರು ಬಂದ ದಾರಿಗೆ ಸುಂಕವಿಲ್ಲದೆ ಮರಳಿ ಗೂಡು ಸೇರಿಕೊಳ್ಳುತ್ತಾರೆ. ಇನ್ನೂ ಕೆಲವು ಮಂದಿ ಅವಕಾಶವೂ ಸಿಗದೆ. ಮನೆ ಕಡೆಗೆ ಹೋಗಲಾರದೆ ಮುಂದೇನು ಎನ್ನುವ ಮಹಾಗೋಡೆಯ ಮೇಲೆ ಕುಳಿತ ಮಂದಿ ಕೂಡ ಕಣ್ಣಮುಂದಿನ ತಾಜಾ ಉದಾಹರಣೆ.

ನಟಿಯಾಗಬೇಕೆನ್ನುವ ಕನಸು ಕಂಡು  “ಕಲಾತ್ಮಕ” ರಂಗ ತಂಡದಲ್ಲಿ ತೊಡಗಿಸಿಕೊಂಡ ಕಲ್ಲಿನಕೋಟೆ ಚಿತ್ರದುರ್ಗದ ಹುಡುಗಿಗೆ ಕೈ ಬೀಸಿ ಕರೆದಿದ್ದುದು “ವರಲಕ್ಷ್ಮಿ ಸ್ಟೋರ್”. ಅಲ್ಲಿ ಕೆಲಸ ಮಾಡುತ್ತಲೇ ಸಿಕ್ಕ ಮತ್ತೊಂದು ಅವಕಾಶ “ಮತ್ತೆ ವಸಂತ”, ಈ ನಡುವೆ “ಡಿಕೆ ಬೋಸ್” ಚಿತ್ರದಲ್ಲಿಯೂ ಕಾಣಿಸಿಕೊಂಡಾಕೆ.

ಈ ಮಧ್ಯೆ  “ಕಸ್ತೂರಿ ನಿವಾಸ”ಕ್ಕೆ ಖುಷಿಯಿಂದಲೇ ಪ್ರವೇಶ ಮಾಡಿದ್ದಾರೆ ನಟಿ ರಿಶಾ. ಈ ಮುಂಚೆ ಬೇರೊಬ್ಬ ನಟಿ ಮಾಡುತ್ತಿದ್ದ ನಾಯಕಿ ಪಾತ್ರ ಇದೀಗ ರಿಶಾ ಪಾಲಿಗೆ ಒಲಿದು ಬಂದಿದೆ. ಈ ನಡುವೆ “ಮತ್ತೆ ವಸಂತ”ದಲ್ಲಿ ಎರಡನೇ ನಾಯಕಿಯಾಗಿ ನಟಿಸುತ್ತಿದ್ದಾರೆ.

ನಾಯಕಿಯಾಗಿ ನಟಿಸುತ್ತಾ ಏಕ ಕಾಲಕ್ಕೆ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳುವುದು ಒಂದು ರೀತಿ ಹಿನ್ನೆಡೆ ಅಥವಾ ಮುಜುಗರ ಅನ್ನಿಸುವುದಿಲ್ಲ. “ಮತ್ತೆ ವಸಂತ” ಮುಂಚಿನಿಂದಲೂ ನಟಿಸುತ್ತಿದ್ದೇನೆ. ಅದರ ಬಗ್ಗೆ ಒಪ್ಪಂದ ಕೂಡ ಆಗಿದೆ. ಆ ಪಾತ್ರ ಸದ್ಯದಲ್ಲಿಯೇ ಮುಗಿಯಲಿದೆ. ಹೀಗಾಗಿ ಯಾವುದೇ ಬೇಜಾರು ಇಲ್ಲ

ಕಸ್ತೂರಿ ನಿವಾಸಕ್ಕೆ ಇದೀಗ ತಾನೆ ಪ್ರವೇಶ ಮಾಡಿದ್ದೇನೆ. ಒಳ್ಳೆಯ ಪಾತ್ರ ಸಿಕ್ಕಿದೆ. ನಟನೆಯಲ್ಲಿ ತನ್ನನ್ನು ತಾನು ನಿರೂಪಿಸಿಕೊಳ್ಳುವ ಪಾತ್ರ. ಎಲ್ಲರ ಗಮನ ಸೆಳೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎನ್ನುತ್ತಾರೆ ನಿಶಾ.

ಕುಟುಂಬದ ಬೆಂಬಲ

ನಟಿಯಾಗಿ  ತೆರೆಯ ಮೇಲೆ ಕಾಣಿಸಿಕೊಳ್ಳಲು ಅಪ್ಪ,ಅಮ್ಮ ಜೊತೆಗೆ ತಮ್ಮನ ಸಹಕಾರ ದೊಡ್ಡದು. ಹುಡುಗಿಯೊಬ್ಬಳು ಬಣ್ಣದ ಬದುಕಿಗೆ ಪ್ರವೇಶ ಮಾಡುವ ಸಮಯದಲ್ಲಿ ಅಪಸ್ವರಗಳೇ ಅಧಿಕ. ಆದರೆ ನನ್ನ ಕುಟುಂಬ ನನ್ನ ಮೇಲೆ ಸಂಪೂರ್ಣ ವಿಶ್ವಾಸವಿಟ್ಟಿದೆ.

ಮಗಳು ಏನೇ ಕೆಲಸ ಮಾಡಿದರೂ ಒಳ್ಳೆಯದನ್ನೇ ಮಾಡುತ್ತಾಳೆ ಎನ್ನುವ ನಂಬಿಕೆ ಅವರದು. ಜೊತೆಗೆ ಕೆಲಸ ಮಾಡುವಾಗ ಎಚ್ಚರದಿಂದ ಇರುವ ಎನ್ನುವ ಸಲಹೆಯನ್ನೂ ನೀಡಿದ್ದಾರೆ.ಅವರು ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುವ ದೊಡ್ಡ ಜವಬ್ದಾರಿ ನನ್ನ ಮೇಲಿದೆ.ಅದಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುತ್ತೇನೆ ಎನ್ನುತ್ತಾರೆ ನಟಿ ರಿಶಾ.

ನಟಿಯಾಗಲು ಸಹೋದರ ಕಾರಣ

ಸಹೋದರ ಅರುಣ್ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾನೆ. ನಾನು ನಟಿಯಾಗಲು ಆತನೇ ಮೂಲ ಕಾರಣ. ಆಡಿಷನ್‍ಗೆ ಹೋಗುವುದರಿಂದ ಇಡಿದು ಚಿತ್ರೀಕರಣ ಸೇರಿದಂತೆ ಎಲ್ಲ ಕಡೆ ನನ್ನ ನೆರಳಾಗಿ ನಿಂತಿದ್ದಾನೆ. ಆತ ಜೊತೆಗೆ ಇರುವುದರಿಂದ ಯಾವುದೇ ಭಯ ಆತಂಕವಿಲ್ಲ ಎಂದರು ರಿಶಾ.

ಪುನೀತ್ ರಾಜ್ ಕುಮಾರ್ ನಟನೆಯ ಅಂಜನಿಪುತ್ರ ಚಿತ್ರಕ್ಕೆ ಕೆಲಸ ಮಾಡಿದ್ದ.ಈಗ ನಂದಕಿಶೋರ್ ಜೊತೆ ಮುಂದಿನ ಚಿತ್ರದಲ್ಲಿ ಕೆಲಸ ಮಾಡಲಿದ್ದಾನೆ. ಲಾಕ್‍ಡೌನ್ ಇರುವ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತಗೊಂಡಿದೆ, ತಮ್ಮ,ಅಪ್ಪ,ಅಮ್ಮನ ಸಹಕಾರದಿಂದ ನಟಿಯಾಗಿದ್ದೇನೆ. ನನಗಾಗಿ ಅಪ್ಪ-ಅಮ್ಮ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ ಎಂದು ಹೇಳಿಕೊಂಡರು.

ಸವಾಲಿನ ಪಾತ್ರ ಇಷ್ಟ “ಕಥೆಗೆ ಮಹತ್ವವಿರುವ

 ಸವಾಲಿನ ಪಾತ್ರದಲ್ಲಿ ಮಾಡುವ ಕನಸಿದೆ. ಒಂದೇ ಪಾತ್ರದಲ್ಲಿ ಪಾಸಿಟೀವ್ ಮತ್ತು ನೆಗಟೀವ್ ಎರಡೂ ರೀತಿಯ ಶೇಡ್‍ನಲ್ಲಿ ಕಾಣಿಸಿಕೊಳ್ಳುವ ಹಂಬಲವಿದೆ. ಸಿನಿಮಾಗಳಿಂದ ಅವಕಾಶ ಬರುತ್ತಿದೆ.ಒಳ್ಳೆಯ ಪಾತ್ರ ಸಿಕ್ಕರೆ ಕಂಡಿತಾ ನಟಿಸುತ್ತೇನೆ. ಮನೆಯಲ್ಲಿ ಯಾವುದೇ ನಿರ್ಬಂಧ ಇಲ್ಲ. ಬದಲಾಗಿ ನನ್ನ ಮೇಲೆ ಅವರಿಗೆ ನಂಬಿಕೆ ಇದೆ, ಅದನ್ನು ಉಳಿಸಿಕೊಳ್ಳುವ ಜವಬ್ದಾರಿ ನನ್ನದು..”

-ರಿಶಾ, ನಟಿ,