ಬಣ್ಣದೋಕುಳಿಯಲ್ಲಿ ಮಿಂದೆದ್ದ ಚಿಣ್ಣರು

ಸೈದಾಪುರ:ಮಾ.9:ವಯಸ್ಸಿನ ಅಂತರವಿಲ್ಲದೇ ಒಟ್ಟಾಗಿ ಎಲ್ಲರು ಸೇರಿಕೊಂಡು ಸ್ನೇಹ ಸೌಹಾರ್ದತೆಯೊಂದಿಗೆ ಮಂಗಳವಾರದಂದು ಪಟ್ಟಣದ ಬೀದಿ, ರಸ್ತೆಗಳಲ್ಲಿ ಚಿಣ್ಣರು ಯುವಕರು ವಯಸ್ಕರು ಸೇರಿದಂತೆ ಎಲ್ಲರು ಗುಂಪು ಗುಂಪಾಗಿ ವಿವಿಧ ಬಣ್ಣಗಳಲ್ಲಿ ಮಿಂದೇಳುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆಯಿತು. ಪುಟಾಣಿಗಳು ದಾರಿಹೋಕರಿಗೆ ತಮ್ಮ ಗೆಳೆಯರಿಗೆ ಬಣ್ಣ ಎರಚಿ ಸಂಭ್ರಮಿಸಿದರು. ಒಬ್ಬರಿಗೊಬ್ಬರು ಗುರುತು ಸಿಗದಷ್ಟು ಬಣ್ಣಗಳು ಎರಚಿಕೊಂಡು ಲಬೋ ಲಬೋ ಎಂದು ಬೊಬ್ಬೆ ಹಾಕುತ್ತ ಕುಣಿದು ಕುಪ್ಪಳಸಿತ್ತಿರುವುದು ಹೋಳಿ ಹಬ್ಬಕ್ಕೆ ಮತ್ತಷ್ಟು ಮೆರಗು ತರುವಂತಿತ್ತು. ತರುಣಿಯರು ಕೂಡ ತಾವೆನು ಕಮ್ಮಿಯಿಲ್ಲ ಎಂಬಂತೆ ತಮ್ಮ ಮನೆಯ ನೆರೆಹೊರೆಯವರ ಜೊತೆಯಾಗಿ ರಂಗೀನಾಟದಲ್ಲಿ ಮಿಂದೆದ್ದರು

ಪಟ್ಟಣದ ಬಸವೇಶ್ವರ ವೃತ್ತ, ರೈಲ್ವೇ ನಿಲ್ದಾಣ, ಲಕ್ಷ್ಮೀ ನಗರ ತಾಯಿ ಕಾಲೋನಿ, ಬಸ್ ನಿಲ್ದಾಣ, ಕನಕ ವೃತ್ತ, ಹೇಮರಡ್ಡಿ ಮಲ್ಲಮ್ಮ ವೃತ್ತ, ಅಂಬಿಗರ ಚೌಡಯ್ಯ ವೃತ್ತ ಸೇರಿದಂತೆ ಎಲ್ಲ ಕಡೆಗಳಲ್ಲಿ ಬಣ್ಣಗಳಲ್ಲಿ ಮುಳುಗಿ ಹೋಗಿದ್ದ ಯುವಕರು ಕಾಣುತ್ತಿದ್ದರು.

ಭಕ್ತಿಯಿಂದ ಕಾಮದಹನ: ಹೋಳಿ ಹುಣ್ಣಿಮೆಯ ಪ್ರಯುಕ್ತ ಪಟ್ಟಣದಲ್ಲಿ ಸೋಮವಾರ ರಾತ್ರಿ ಯುವಕರು, ಮಕ್ಕಳು ಪ್ರತಿ ಮನೆಗಳಿಂದ ಕಟ್ಟಿಗೆ, ಕುಳ್ಳುಗಳನ್ನು ಸಂಗ್ರಹಿಸಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಪೂಜೆ ಪುನಸ್ಕಾರ ಸಲ್ಲಿಸಲಾಯಿತು. ನಂತರ ಕಾಮಣ್ಣನಿಗೆ ದಹನ ಮಾಡಿ ಹೋಳಿ ಹಬ್ಬಕ್ಕೆ ಸರಳವಾಗಿ ಚಾಲನೆ ನೀಡಿದರು.