ಬಣ್ಣದೊಕಳಿ ಬ್ಯಾನ್ ಉಲ್ಲಂಘಿಸಿದರೆ ಶಿಸ್ತು ಕ್ರಮ: ಮಂಜುನಾಥ

ಆಳಂದ:ಮಾ.27: ಕೋವಿಡ್-19 ನಿಯಂತ್ರಣ ಹಿನ್ನೆಲೆಯಲ್ಲಿ ಸರ್ಕಾರದ ನಿಮಾವಳಿ ಉಲ್ಲಂಘಸಿ ಸಾರ್ವತ್ರಿಕವಾಗಿ ಬಣ್ಣದೊಕಳಿ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿಪಿಐ ಮಂಜುನಾಥ ಎನ್ ಅವರು ಇಂದಿಲ್ಲಿ ಖಡಕ್ಕಾಗಿ ಎಚ್ಚರಿಸಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ಕರೆದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕ ಜೀವದ ಹಿತದೃಷ್ಟಿಯಿಂದ ಸಾಮಾಜಿಕ ಅಂತರ ಕಾಪಾಡುವುದು ಹೆಚ್ಚು ಹೆಚ್ಚು ಜನ ಸೇರದಂತೆ ಹಾಗೂ ಸಾಮೂಹಿಕವಾಗಿ ಹಬ್ಬ, ಉತ್ಸವಕ್ಕೆ ಕಡಿವಾಣ ಹಾಕಿದೆ. ಇದೊಂದು ಸಲ ಹೋಳಿ ಬಣ್ಣದ ಹಬ್ಬವನ್ನು ಎಲ್ಲರು ತಮ್ಮ ಮನೆಗಳಲ್ಲೇ ಆಚರಿಸಬೇಕು ಹಾಗೂ ಮಸೀದಿಗಳಲ್ಲೂ ಸಹ ಸಂಬಂಧಿತರು ಏಕವ್ಯಕ್ತಿಗೆ ಮಾತ್ರ ಪ್ರಾರ್ಥನೆಗೆ ಅವಕಾಶವಿದೆ. ಆದರೆ ಸಾಮೂಹಿಕವಾಗಿ ಸೇರಿ ಆಚರಣೆ ಮಾಡುವಂತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಎಲ್ಲ ಸಮುದಾಯದವರು ಇಲಾಖೆಗೆ ಸಹಕರಿಸುವ ಮೂಲಕ ಮಹಾಮಾರಿ ಕೊರೊನಾ ತೊಲಗಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಈ ಮೊದಲು ಶರಣನಗರದ ಮುಖಂಡ ಸೂರ್ಯಕಾಂತ ತಟ್ಟಿ ಅವರು ಬಡಾವಣೆಯಲ್ಲಿ ಸಾಂಕೇತಿಕವಾಗಿ ಎರಡು ಬ್ಯಾರೆಲ್ ತುಂಬಿದ ಬಣ್ಣದಾಟಕ್ಕೆ ಅವಕಾಶ ನೀಡಬೇಕು ಎಂಬ ಕೋರಿಕೆಗೆ ನಿರಾಕರಿಸಿದ ಸಿಪಿಐ ಮಂಜುನಾಥ ಅವರು, ಸಣ್ಣ ಪ್ರಮಾಣದ ಚಟುವಟಿಕೆಯಲ್ಲೂ ಹೆಚ್ಚು ಜನ ಸೇರುವ ಅವಕಾಶ ಇರುತ್ತದೆ. ಈ ನಿಟ್ಟಿನಲ್ಲಿ ಎಲ್ಲೂ ಸಹ ಬಣ್ಣದಾಟಕ್ಕೆ ಅವಕಾಶವಿಲ್ಲ. ಈ ಕುರಿತು ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದರು.

ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ, ಪುರಸಭೆ ಸದಸ್ಯ ಅಮ್ಜದ್ ಅಲಿ ಖರ್ಜಗಿ, ಮಾಜಿ ಉಪಾಧ್ಯಕ್ಷ ಮೋಹಿಜ್ ಕಾರಬಾರಿ, ಮಾಜಿ ಸದಸ್ಯ ಮಲ್ಲಪ್ಪ ಹತ್ತರಕಿ ಮತ್ತಿತರರು ಮಾತನಾಡಿ ಶಾಂತಿ ಸುವ್ಯವಸ್ಥೆಯೊಂದಿಗೆ ಕೋವಿಡ್ ನಿಮಾವಳಿ ಬದ್ಧರಾಗ ನಡೆದುಕೊಳ್ಳಲಾಗುವುದು ಎಂದು ಹೇಳಿದರು.

ಪಿಎಸ್‍ಐ ಮಹಾಂತೇಶ ಪಾಟೀಲ ಪ್ರಸ್ತಾವಿಕ ಮಾತನಾಡಿದರು. ಗ್ರೇಡ್-2 ಪ್ರಭಾರಿ ತಹಸೀಲ್ದಾರ ಶ್ರೀನಿವಾಸ್ ಕುಲಕರ್ಣಿ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಮುಖಂಡ ಶ್ರೀಶೈಲ ಖಜೂರಿ, ದಯಾನಂದ ಶೇರಿಕಾರ, ಸಂಪತಕುಮಾರ ವೇದಪಾಠಕ, ಬಸವ ಸೇನೆ ಅಧ್ಯಕ್ಷ ಶರಣು ನಾಗದೆ, ಗುಲಾಮ ಹುಸೇನ ಟಪ್ಪೇವಾಲೆ, ಮಹೇಶ ಸೂರೆ, ಸತ್ತಾರ ಮುರುಮಕರ್ ಮತ್ತಿತರರು ಉಪಸ್ಥಿತರಿದ್ದರು.

ಸಿದ್ಧರಾಮ ಬಿರಾದಾರ ನಿರೂಪಿಸಿದರು. ಶೇಖರ ಕಾರಬಾರಿ ಸ್ವಾಗತಿಸಿದರು. ಮಹಿಬೂಬ ಶೇಖ ವಂದಿಸಿದರು.