ಬಣ್ಣದಲ್ಲಿ ಮಿಂದೆದ್ದ ಮಲೆನಾಡ ನಗರಿ..!

ಶಿವಮೊಗ್ಗ, ಮಾ. 8: ಬಣ್ಣದ ಹಬ್ಬವೆಂದೇ ಕರೆಯಲಾಗುವ ಹೋಳಿ ಹಬ್ಬವನ್ನು, ಬುಧವಾರ ಮಲೆನಾಡ ನಗರಿ ಶಿವಮೊಗ್ಗದಲ್ಲಿ ಅತ್ಯಂತ ಸಡಗರ, ಸಂಭ್ರಮ, ಅದ್ಧೂರಿಯಾಗಿ ಆಚರಿಸಲಾಯಿತು.ನಗರದ ಹಲವೆಡೆ ಬಣ್ಣದೋಕುಳಿಯಲ್ಲಿ ನಾಗರೀಕರು ಅಕ್ಷರಶಃ ಮಿಂದೆದ್ದರು. ಕಳೆದೆರೆಡು ವರ್ಷಗಳಿಂದ ಕೊರೊನಾ ಹಾಗೂ ಲಾಕ್ ಡೌನ್ ಮತ್ತೀತರ ಕಾರಣದಿಂದ ಕಳೆಗುಂದಿದ್ದ ರಂಗಿನ ಹಬ್ಬದ ಸಡಗರ, ಪ್ರಸ್ತುತ ವರ್ಷ ಕಳೆಗಟ್ಟಿತ್ತು.ಬಹುತೇಕ ಎಲ್ಲೆಡೆ ನಾಗರೀಕರು ಪರಸ್ಪರ ಬಣ್ಣ ಎರಚಿಕೊಂಡು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು.ಹಲವೆಡೆ ಯುವಕ-ಯುವತಿಯರು ಗುಂಪುಗುಂಪಾಗಿ, ವಿವಿಧ ಸಿನಿಮಾ ಹಾಡುಗಳಿಗೆ ನರ್ತಿಸುತ್ತಾ ಸಂಭ್ರಮಾಚರಣೆ ಮಾಡಿದರು.  ಶಿವಮೊಗ್ಗದ ಗೋಪಿ ವೃತ್ತದಲ್ಲಿ ಭಾರೀ ಜನಸಾಗರವೇ ಕಂಡುಬಂದಿತು.ಡಿಜೆ ಹಾಡುಗಳಿಗೆ ಯುವ ಸಮುದಾಯ ಭರ್ಜರಿ ಡ್ಯಾನ್ಸ್ ಮಾಡಿ ಗಮನ ಸೆಳೆಯಿತು. ವಿವಿಧ ಘೋಷಣೆಗಳು ಮುಗಿಲು ಮುಟ್ಟಿದ್ದವು. ಒಟ್ಟಾರೆ  ಮಲೆನಾಡ ನಗರಿಯಲ್ಲಿ ಬಣ್ಣದ ಹಬ್ಬದ ರಂಗು ಜೋರಾಗಿದ್ದಂತೂ ಸತ್ಯ…!