ಬಣಿವೆಗೆ ಬೆಂಕಿ ಘಟನೆ; ಶಾಸಕರ ಭೇಟಿ-ಪರಿಹಾರದ ಭರವಸೆ

ಸಿರವಾರ,ಜೂ.೦೨-
ಪಟ್ಟಣದ ಶ್ರೀರಾಮ ನಗರದಲ್ಲಿ ಮಂಗಳವಾರದಂದು ಹುಲ್ಲಿನ ಬಣಿವೆಗಳಿಗೆ ಬೆಂಕಿ ಬಿದ್ದು, ಹುಲ್ಲು ಹಾಗು ೩ ಎಮ್ಮೆ ಕರುಗಳು ಸಜೀವ ದಹನವಾಗಿ ಅಪಾರವಾದ ಹಾನಿಯಾದ ಪ್ರದೇಶಕ್ಕೆ ಶಾಸಕರಾದ ಜಿ.ಹಂಪಯ್ಯ ನಾಯಕ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ರೈತರೊಂದಿಗೆ ಚರ್ಚಿಸಿದ ಶಾಸಕರು ತ್ವರಿತವಾಗಿ ಸೂಕ್ತ ಪರಿಹಾರ ಕಲ್ಪಿಸುವಂತೆ ಸ್ಥಳದಲ್ಲಿದ್ದ ತಹಶಿಲ್ದಾರರಿಗೆ ಸೂಚಿಸಿದರು.
ಸುಮಾರು ೧.೨೫ ಲಕ್ಷ ಮೌಲ್ಯದ, ೬೦ಎಕರೆಯ ಭತ್ತದ ಹುಲ್ಲನ್ನು ಸಂಗ್ರಹಿಸಿ ಇಡಲಾಗಿತ್ತು. ಮಂಗಳವಾರ ತಡರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ತಾಗಿ ೫ ಬಣಿವೆಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದವು. ಬುಧವಾರ ಮತ್ತೆ ಬೇರೆಡೆ ಹೊತ್ತಿಕೊಂಡ ಬೆಂಕಿ ೩ ಕರುಗಳನ್ನು ಬಲಿ ಪಡೆದಿತ್ತು.
ಅಗ್ನಿಶಾಮಕ ಠಾಣೆಗೆ ರೈತರ ಮನವಿ:
ಪ್ರತಿ ವರ್ಷವೂ ಬೇಸಿಗೆಯಲ್ಲಿ ಬೆಂಕಿ ಅವಘಡಗಳು ಸರ್ವೇ ಸಾಮಾನ್ಯವಾಗಿದೆ. ಸ್ಥಳೀಯವಾಗಿ ಅಗ್ನಿಶಾಮಕ ದಳದ ಅವಶ್ಯಕತೆ ಇದೆ.
ಪಕ್ಕದ ಅರಿಕೇರಾ ಗ್ರಾಮದಿಂದ ಅಗ್ನಿಶಾಮಕ ದಳ ಬರುವಷ್ಟರಲ್ಲಿ ಭತ್ತದ ಹುಲ್ಲು ಸಂಪೂರ್ಣವಾಗಿ ಭಸ್ಮವಾಗಿದೆ. ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಇದ್ದಿದ್ದರೇ ಹೆಚ್ಚಿನ ನಷ್ಟ ತಪ್ಪಿಸಬಹುದಾಗಿತ್ತು. ಅದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಚರ್ಚಿಸುವ ಮೂಲಕ ಅಗ್ನಿಶಾಮಕ ಠಾಣೆಯನ್ನು ಮಂಜೂರು ಮಾಡಿಸಲು ರೈತರು ಮನವಿ ಸಲ್ಲಿಸಿದರು.
ಈ ವೇಳೆ ತಹಶಿಲ್ದಾರ ಸುರೇಶ ವರ್ಮಾ, ಕಂದಾಯ ನಿರೀಕ್ಷಕ ಶ್ರೀನಾಥ, ಮುಖಂಡರಾದ ಎನ್ ಉದಯಕುಮಾರ್, ಟಿ.ಆರ್ ಪಾಟೀಲ್, ಉಮಾಪತಿ ಚುಕ್ಕಿ, ಜಿ.ವೀರೇಶ, ಅರಿಕೇರಿ ಶಿವಶರಣ, ಆದೇಶ ಗೋರ್ಕಲ್, ರೈತರಾದ ದೇವೆಂದ್ರಯ್ಯ ಸ್ವಾಮಿ, ಬೆಳವಿನೂರ ಶಿವಶರಣ ಗೌಡ, ಕೆ.ಬಸವರಾಜ, ಕೆ.ಚನ್ನಬಸವ, ಕುಂಬಾರ ಸಿದ್ದರಾಮಪ್ಪ, ಬೈನೇರ ರಾಮಯ್ಯ, ವೆಂಕಟೇಶ ದೊರೆ, ಪ.ಪಂ.ಸದಸ್ಯರಾದ ವೈ ಭೂಪನಗೌಡ, ಗಡ್ಲ ಚನ್ನಪ್ಪ, ಹಸೇನಲಿಸಾಬ್, ಹಾಜಿ ಚೌದ್ರಿ, ಮೌಲಸಾಬ್ ವರ್ಚಸ್, ಹಾಗು ರಂಗನಾಥ ಭೋವಿ, ಗಡ್ಲ ವೀರೇಶ,ಸೇರಿದಂತೆ ಇತರರು ಇದ್ದರು.