ಬಣಜಿಗ ಸಮಾಜದಿಂದ ಬೃಹತ್ ಪ್ರತಿಭಟನೆ

ಮುಧೋಳ, ನ 6: ಎಲ್ಲ ಸಮಾಜಗಳೊಂದಿಗೆ ಸುಮಧುರ ಬಾಂಧವ್ಯ ಹೊಂದಿರುವ ಬಣಜಿಗ ಸಮಾಜ ಬಸವ ತತ್ವದಡಿ ಎಲ್ಲರೊಂದಿಗೆ ಹೊಂದಿಕೊಂಡು ಬಾಳುತ್ತಿದೆ. ನಮ್ಮ ಬಣಜಿಗ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಅವಮಾನಿಸುವ ರೀತಿಯಲ್ಲಿ ಮಾತನಾಡಿರುವ ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹಾಗೂ ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರ ವಿರುದ್ಧ ಹೋರಾಟ ಮಾಡಲಾಗುತ್ತಿದೆಯೇ ವಿನಹ ಯಾವುದೇ ಸಮಾಜದ ವಿರುದ್ಧ ಅಲ್ಲ ಎಂದು ಮುಧೋಳ ತಾಲೂಕಾ ಬಣಜಿಗ ಸಮಾಜದ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಹಮ್ಮಿಕೊಂಡಿದ್ದ ಪಂಚಮಸಾಲಿ ಸಮಾವೇಶದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಬಣಜಿಗ ಸಮಾಜಕ್ಕೆ ನಿಂದನೆ ಮಾಡಿದ್ದಾರೆ. ಮೀಸಲಾತಿ ಹೋರಾಟಕ್ಕೆ ನಮ್ಮ ವಿರೋಧವಿಲ್ಲ. ಅದಕ್ಕೆ ನಮ್ಮ ಬೆಂಬಲವಿದೆ. ಮಾನವೀಯ ಸಮಾಜದಲ್ಲಿ ಒಳಪಂಗಡಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಇಲ್ಲಸಲ್ಲದ ಹೇಳಿಕೆಗಳನ್ನು ಕೊಟ್ಟು ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಪಂಚಮಸಾಲಿ-ಬಣಜಿಗ ಸಮಾಜಗಳು ನೂರಾರು ವರ್ಷಗಳಿಂದ ಉತ್ತಮ ಕೌಟುಂಬಿಕ ಸಂಬಂಧ ಹೊಂದಿವೆ. ಆದರೆ ವಿಜಯಾನಂದ ಕಾಶಪ್ಪನವರ ಹಾಗೂ ಬಸನಗೌಡ ಪಾಟೀಲ ಯತ್ನಾಳ ಬಣಜಿಗ ಸಮಾಜಕ್ಕೆ ಅವಹೇಳನ ಮಾಡುವ ಮೂಲಕ ಸಮಾಜಗಳ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಆದ ಕಾರಣ ಈ ಇಬ್ಬರೂ ನಾಯಕರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಇವರಿಬ್ಬರೂ ಸಾರ್ವಜನಿಕವಾಗಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಸಂಬಂದಪಟ್ಟ ಇಲಾಖಾ ಮುಖ್ಯಸ್ಥರಿಗೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಬೇಕೆಂದು ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಅಜೀತ ಹೊನವಾಡ, ಗುರುರಾಜ ಉದಪುಡಿ,ನೀಲೇಶ ಬನ್ನೂರ,ನಾಗೇಶ ಗೋಲಶೆಟ್ಟಿ ಮಾತನಾಡಿ ಇಬ್ಬರೂ ನಾಯಕರ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರಾಜಕೀಯ ನಾಯಕರಾಗಿ ಎಲ್ಲ ಸಮಾಜಗಳ ಮತ ಪಡೆದು ಈಗ ಬಣಜಿಗ ಸಮಾಜದ ವಿರುದ್ಧ ಈ ರೀತಿ ಅವಮಾನಿಸುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ನಂತರ ತಹಶೀಲದಾರ ಕಚೇರಿಗೆ ತೆರಳಿ ಉಪತಹಶೀಲದಾರ ಘಾಟನಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಕಲ್ಲಪ್ಪಣ್ಣ ಸಬರದ, ಗಿರೀಶ ಮೋದಿ, ಮಿಲಿಂದ ಕೋಲ್ಹಾರ,ಸುನೀಲ ಬಗಟಿ, ಬಸವರಾಜ ಜಮಖಂಡಿ, ವiಹಾದೇವ ಅಂಗಡಿ, ಶಿವಾನಂದ ಕತ್ತಿ, ಡಾ.ರವಿ ನಂದಗಾಂವ, ಡಾ.ಕೆ.ಎಲ್.ಉದಪುಡಿ,ಸವಿತಾ ಅಂಗಡಿ,ಸರೋಜಾ ಕರೆಹೊನ್ನ,ಸೀಮಾ ರಾಮತೀರ್ಥ, ಮಲ್ಲಪ್ಪಣ್ಣ ಅಂಗಡಿ,ಪ್ರಕಾಶ ರಾಮತೀರ್ಥ,ಶಂಕರ ನಾವಲಗಿ,ಕಪಿಲ ಹೊನವಾಡ,ಸುರೇಶ ಅಕ್ಕಿಮರಡಿ,ಬಸವರಾಜ ಗಣಿ,ಸುಹಾಸ ಆವಟಿ,ವೀರೇಶ ಕಲಾದಗಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.