ಬಡ ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಅಫಜಲಪುರ:ಫೆ.23: ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಹತ್ತಿರವಿರುವ ಕಣ್ಣಿ ಕಾಂಪ್ಲೆಕ್ಸ್ ನೆಲ ಮಹಡಿಯಲ್ಲಿರುವ ಬೆಂಗಳೂರು ದವಾಖಾನೆ ಸ್ಥಾಪನೆಯ ಪ್ರಥಮ ವರ್ಷದ ವರ್ಷಾಚರಣೆ ಪ್ರಯುಕ್ತ ಡಾ. ಸಚಿನ್ ಹೂಗಾರ ನೇತೃತ್ವದಲ್ಲಿ ಬಡ ಜನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಶ್ರೇಯಸ್ ಐ ಕೇರ್ ಆಪ್ಟಿಕಲ್ಸ್ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಯಶಸ್ವಿಯಾಗಿ ಜರುಗಿತು.

ಸುಮಾರು 200ಕ್ಕೂ ಅಧಿಕ ಗ್ರಾಮೀಣ ಭಾಗ ಹಾಗೂ ಪಟ್ಟಣದ ಬಡ ಸಾರ್ವಜನಿಕ ರೋಗಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡರು.

ಮೂಳೆ ಹಾಗೂ ಎಲಬು ತಜ್ಞ ಡಾ. ಯಶವಂತ ಅಂಜುಟಗಿ ಹಾಗೂ ನೇತ್ರಾಧಿಕಾರಿ ಪಿ.ಎಂ ರಾಠೋಡ ಅವರು ಶಿಬಿರದಲ್ಲಿ ಪಾಲ್ಗೊಂಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದರು.

ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಜರಿದ್ದರು.