ಬಡ್ಡಿ ನಿಶ್ಚಲತೆ ಯೋಜನೆ ಜಾರಿಗೆ ಪ್ರಸ್ತಾವನೆ

ಮೈಸೂರು,ಜು.12:- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕುಡಿಯುವ ನೀರಿನ ಒಟ್ಟು 1,80,000ಸಂಪರ್ಕಗಳ ಪೈಕಿ ಸುಮಾರು 52,000ಸಂಪರ್ಕಗಳಿಂದ ಒಟ್ಟಾರೆ 220.00 ಕೋಟಿ ನೀರಿನ ಶುಲ್ಕದ ಬಾಕಿ ಮೊತ್ತವು ಹಲವಾರು ವರ್ಷಗಳಿಂದ ಪಾಲಿಕೆಗೆ ಪಾವತಿಯಾಗದೆ ಬಾಕಿ ಇರುತ್ತದೆ. ಈ ಪೈಕಿ 146.00ಕೋಟಿ ಅಸಲು ಮೊತ್ತವಾದರೆ 74.00ಕೋಟಿ ಬಡ್ಡಿಯ ಅಂಶವಾಗಿರುತ್ತದೆ. ಈ ವಿಷಯವಾಗಿ ಸರ್ಕಾರಕ್ಕೆ ಈ ಹಿಂದೆಯೇ ಪಾಲಿಕೆಯಿಂದ ಪ್ರಸ್ತಾವನೆ ಸಲ್ಲಿಸಿದ್ದು ಬಡ್ಡಿ ಮನ್ನಾ ಕುರಿತಂತೆ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆ ಹಂತದಲ್ಲಿದೆ ಎಂದು ಮೇಯರ್ ಸುನಂದಾ ಪಾಲನೇತ್ರ ತಿಳಿಸಿದರು.
ಇಂದು ಮೈಸೂರು ಮಹಾನಗರ ಪಾಲಿಕೆಯ ಜಯಚಾಮರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು 29/4/2022ರಂದು ನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಈ ವಿಚಾರವಾಗಿ ಸದಸ್ಯರು ಸಾಕಷ್ಟು ಚರ್ಚೆಯನ್ನು ನಡೆಸಿದ್ದು ನಗರದ ಜನತೆಗೆ ಹೆಚ್ಚಿನ ಹೊರೆ ಆಗುವುದನ್ನು ತಪ್ಪಿಸುವ ಸಲುವಾಗಿ ಹಾಗೂ ಪಾಲಿಕೆಯ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡುವ ಹಿತದೃಷ್ಟಿಯಿಂದ ನೀರಿನ ಶುಲ್ಕ ಬಾಕಿ ಉಳಿಸಿಕೊಂಡಿರುವ ಬಳಕೆದಾರರು ಒಂದೇ ಬಾರಿಗೆ ಹಿಂದಿನ ಬಾಕಿಯ ಅಸಲು ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದಲ್ಲಿ ಅಂತಹ ಬಳಕೆದಾರರ ಹಿಂದಿನ ಬಡ್ಡಿ ಅಂಶವನ್ನು ಒಂದು ಬಾರಿಗೆ ಮಾತ್ರ ನಿಶ್ಚಲಗೊಳಿಸಲಾಗುವ ಬಡ್ಡಿ ನಿಶ್ಚಲತೆ ಯೋಜನೆ' ಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದರು. ಈ ಯೋಜನೆಯಡಿಯಲ್ಲಿ ಬರುವ ಒಂದು ಬಾರಿಗೆ ಹಿಂದಿನ ಬಾಕಿಯ ಬಡ್ಡಿಯನ್ನು ನಿಶ್ಚಲಗೊಳಿಸಲಾಗುತ್ತದೆಯೇ ಹೊರತು ಸರ್ಕಾರದ ಆದೇಶ ಬರುವವರೆಗೂ ಬಡ್ಡಿಯನ್ನು ಮನ್ನಾ ಮಾಡಲಾಗುವುದಿಲ್ಲ. ಬಡ್ಡಿ ನಿಶ್ಚಲತೆ ಯೋಜನೆ ಅನ್ವಯವಾಗುವ ಬಳಕೆದಾರರು ಮುಂಬರುವ ದಿನಗಳಲ್ಲಿಬಡ್ಡಿ ನಿಶ್ಚಲತೆ ಯೋಜನೆ’ ಚಾಲ್ತಿಯಾದ ದಿನಾಂಕದ ನಂತರದ ದಿನಗಳಲ್ಲಿ ಯಾವುದಾದರೂ ಬಾಕಿ ಮೊತ್ತವನ್ನು ಉಳಿಸಿಕೊಂಡರೆ ಸದರಿ ಮೊತ್ತಕ್ಕೆ ಯಥಾಸ್ಥಿತಿ ಬಡ್ಡಿ ವಿಧಿಸುವುದನ್ನು ಮುಂದುವರಿಸಲಾಗುತ್ತದೆ. ಈ ಬಡ್ಡಿ ನಿಶ್ಚಲತೆಯ ಯೋಜನೆ ಮುಂದಿನ 6ತಿಂಗಳ ಅವಧಿಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.
ಅದೇ ರೀತಿ ನೀರಿನ ಶುಲ್ಕವನ್ನು ಪ್ರಸ್ತುತ ಪಾಲಿಕೆಯ ವಲಯ ಕಛೇರಿಯ ನಗದು ಕೇಂದ್ರಗಳಲ್ಲಿ ಮತ್ತು ಕರ್ನಾಟಕ ವನ್ ಕೇಂದ್ರಗಳಲ್ಲಿ ಪಾವತಿಸಿಕೊಳ್ಳಲಾಗುತ್ತಿದ್ದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಪಾಲಿಕೆಯ ವತಿಯಿಂದ ಹೊಸದಾಗಿ `ರೆವಿನ್ಯೂ ಮ್ಯಾನೇಜ್ಮೆಂಟ್ ಸಾಫ್ಟ್ ವೇರ್’ ಅಭಿವೃದ್ಧಿಪಡಿಸಲಾಗಿದ್ದು ಈ ವ್ಯವಸ್ಥೆಯಲ್ಲಿ ಬಳಕೆದಾರರು ನೀರಿನ ಶುಲ್ಕವನ್ನು ಪಾಲಿಕೆಯ ಸಿಬ್ಬಂದಿಗಳು ಬಿಲ್ ವಿತರಿಸಲು ಮನೆಬಾಗಿಲಿಗೆ ಬಂದ ಸಂದರ್ಭದಲ್ಲಿ ನೇರವಾಗಿ ಪಾಲಿಕೆ ಸಿಬ್ಬಂದಿಗೆ ಪಾವತಿಸಿ ಪ್ರಿಂಟೆಡ್ ರಶೀದಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆಯ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ ಸೇರಿದಂತೆ ಹಲವರಿದ್ದರು.