ಬಡ್ಡಿದರ ಹೆಚ್ಚಿಸಿದ ಫೆಡರಲ್ ರಿಸರ್ವ್: ಜಗತ್ತಿಗೆ ಸಂಕಷ್ಟ

ವಾಷಿಂಗ್ಟನ್, ಸೆ.೨೩- ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು ಮತ್ತೆ ಹೆಚ್ಚಿಸಿದ್ದು, ಹಾಗಾಗಿ ಸಹಜವಾಗಿಯೇ ವಿಶ್ವದ ಹಲವು ಕರೆನ್ಸಿಗಳು ಇದೀಗ ಭಾರೀ ಕುಸಿತಕ್ಕೆ ಈಡಾಗುವ ಅಪಾಯ ಎದುರಾಗಿದೆ. ಆರ್ಥಿಕ ಹಿಂಜರಿತದ ಭೀತಿ ಹುಟ್ಟುಹಾಕಿರುವ ಬೆಲೆ ಹೆಚ್ಚಳ ವಿರುದ್ಧದ ಹೋರಾಟದ ಅಂಗವಾಗಿ ಮುಂದಿನ ದಿನಗಳಲ್ಲಿ ಬಡ್ಡಿದರವನ್ನು ಮತ್ತಷ್ಟು ಏರಿಕೆ ಮಾಡಲಾಗುವುದು ಎಂದು ಫೆಡರಲ್ ರಿಸರ್ವ್ ಪ್ರಕಟಿಸಿದೆ.
ಫೆಡ್ ಬ್ಯಾಂಕಿನ ನೀತಿ ರೂಪಿಸುವ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ ಸತತ ಮೂರನೇ ಬಾರಿ ಬಡ್ಡಿದರವನ್ನು ೦.೭೫ರಷ್ಟು ಹೆಚ್ಚಿಸಿದ್ದು, ಕಳೆದ ೪೦ ವರ್ಷಗಳಲ್ಲೇ ದಾಖಲಾಗಿರುವ ಗರಿಷ್ಠ ಹಣದುಬ್ಬರಕ್ಕೆ ಕಡಿವಾಣ ಹಾಕುವ ಪ್ರಯತ್ನ ಮುಂದುವರಿಸಿದೆ. ಈ ಹೆಚ್ಚಳದಿಂದಾಗಿ ನೀತಿ ದರ ಶೇಕಡ ೩.೦-೩.೨೫ಕ್ಕೆ ಹೆಚ್ಚಿದ್ದು, “ಈ ಹೆಚ್ಚಳದ ನಿರೀಕ್ಷೆ ಮುಂದುವರಿಯುವುದು ಹೆಚ್ಚು ಸೂಕ್ತ” ಎಂದು ಎಫ್‌ಓಎಂಸಿ ಅಭಿಪ್ರಾಯಪಟ್ಟಿದೆ. ಬೆಲೆಹೆಚ್ಚಳ ಅಮೆರಿಕದ ಕುಟುಂಬಗಳು ಹಾಗೂ ವಹಿವಾಟುಗಳನ್ನು ಹಿಂಡುತ್ತಿದ್ದು, ಮುಂದಿನ ನವೆಂಬರ್ ನಲ್ಲಿ ಮಧ್ಯಾವಧಿ ಕಾಂಗ್ರೆಸ್ ಚುನಾವಣೆ ಎದುರಿಸಬೇಕಾಗಿರುವ ಅಧ್ಯಕ್ಷ ಜೋ ಬೈಡನ್ ಅವರಿಗೆ ರಾಜಕೀಯ ಹೊರೆಯಾಗುತ್ತಿದೆ. ಆದರೆ ವಿಶ್ವದ ಅತಿದೊಡ್ಡ ಆರ್ಥಿಕತೆಯ ಕುಗ್ಗುವಿಕೆಯು ಬೈಡನ್, ಫೆಡ್‌ಬ್ಯಾಂಕ್‌ನ ವಿಶ್ವಾಸಾರ್ಹತೆ ಮತ್ತು ವಿಸ್ತೃತವಾಗಿ ವಿಶ್ವಕ್ಕೆ ದೊಡ್ಡ ಹೊಡೆತವಾಗಲಿದೆ. ಆರ್ಥಿಕತೆಯನ್ನು ತಣಿಸಲು ಮತ್ತು ೧೯೭೦ರ ಹಾಗೂ ೧೯೮೦ರ ಪರಿಸ್ಥಿತಿ ಮರುಕಳಿಸುವುದನ್ನು ತಡೆಯಲು ರಭಸದ ಪ್ರಯತ್ನಗಳನ್ನು ಮುಂದುವರಿಸಲಾಗುವುದು ಎಂದು ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪಾವೆಲ್ ಸ್ಪಷ್ಟಪಡಿಸಿದ್ದಾರೆ. ೧೯೭೦ರ ಹಾಗೂ ೧೯೮೦ರ ದಶಕದ ಆರಂಭದಲ್ಲಿ ಅಮೆರಿಕದ ಹಣದುಬ್ಬರ ನಿಯಂತ್ರಣ ತಪ್ಪಿ ಬೆಳೆದಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ.