ಬಡ್ಡಿಗೆ ಹಣ ತಂದು ಬಾಡಿಗೆ ಕಟ್ಟಿದೆಅಂಗನವಾಡಿ ಕಾರ್ಯಕರ್ತೆಯರ ಗೋಳು


ಎನ್.ವೀರಭದ್ರಗೌಡ
ಬಳ್ಳಾರಿ, ಜು.08: ಒಂದು ಕಡೆ ಸರ್ಕಾರ ಗ್ಯಾರೆಂಟಿ ಯೋಜನೆಗಳ ಮೂಲಕ ನಾವು ಜನೋದ್ಧಾರಕರು ಎಂದು ಹೊರಟಿದೆ. ಆದರೆ ಇದೇ ಸರ್ಕಾರ ಕಳೆದ ಒಂದು ವರ್ಷದಿಂದ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಹಣ ಬಿಡುಗಡೆ ಮಾಡದೆ ಕಾರ್ಯಕರ್ತೆಯರು ಅವು ಇವು ಒತ್ತೆಇಟ್ಟು ಬಡ್ಡಿಗೆ ಹಣ ತಂದು ಬಾಡಿಗೆ ಕಟ್ಟುವ ಪರಿಸ್ಥಿತಿ ಬಂದಿದೆ.
ಇದು ನಗರದ 10 ನೇ ವಾರ್ಡಿನ  ಮರಿಸ್ವಾಮಿ ಮಠದ ಬಳಿ ಬಾಡಿಗೆ ಕಟ್ಟಡದಲ್ಲಿರುವ ಇರುವ  ಅಂಗನವಾಡಿ ಕಟ್ಟಡ. ಇದರ ಬಾಡಿಗೆ ಮಾಸಿಕ 4 ಸಾವಿರ ರೂಪಾಯಿ. ಕಳೆದ ಒಂದು ವರ್ಷದಿಂದ ಇಲಾಖೆ ಬಾಡಿಗೆ ಹಣ ನೀಡಿಲ್ಲ.
ಬಾಡಿಗೆದಾರ ಅದಕ್ಕಾಗಿ ಕಟ್ಟಡ ತೊರೆಯುವಂತೆ ಆಗ್ರಹ. ಅನಿವಾರ್ಯವಾಗಿ ಕೇಂದ್ರದ ಕಾರ್ಯಕರ್ತೆ ನೀಲಾವತಿ ಮಾಸಿಕ ನೂರು ರೂ.ಗೆ ಒಂದುವರೆ ರೂ ನಂತೆ ಬಡ್ಡಿ ತಂದು ಆರು ತಿಂಗಳ 25 ಸಾವಿರ ರೂ ಹಣ ನೀಡಿದ್ದರಿಂದ ಬಾಡಿಗೆದಾರರು ಸುಮ್ಮನಾಗಿದ್ದಾರಂತೆ. ಬಡ್ಡಿ ಹಣ ಇಲಾಖೆ ನೀಡಲ್ಲ ನಮ್ಮ ಗೌರವ ಧನದಲ್ಲೇ ನೀಡಬೇಕು ಎನ್ನುತ್ತಿದ್ದಾರೆ ನೀಲಾವತಿ.
ಸಕಾಲಕ್ಕೆ ಅನುದಾನ ಬಾರದೆ ಕೆಲ ಕಡೆ ಕೇಂದ್ರಗಳಿಂದ ಮಕ್ಕಳನ್ನು ಹೊರ ಹಾಕುವ ಪರಿಸ್ಥಿತಿ ಏರ್ಪಟ್ಟಿದೆ
ಇದು ಈ ಒಂದು ಅಂಗನವಾಡಿ ಕೇಂದ್ರದ ಪರಿಸ್ಥಿತಿ ಅಲ್ಲ. ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿರುವ  500 ಕ್ಕೂ ಹೆಚ್ಚು ಕೇಂದ್ರಗಳ ಗೋಳಾಗಿದೆ ಎಂದು ಅಂಗನವಾಡಿ ನೌಕರರ ಸಂಘದ ಮುಖಂಡ ಜೆ.ಸತ್ಯಬಾಬು ಹೇಳುತ್ತಿದ್ದಾರೆ.
ಇನ್ನು ಸಂಡೂರು ತಾಲೂಕಿನಲ್ಲಿ ಕಳೆದ ಏಳು ತಿಂಗಳಿಂದ ತರಕಾರಿ ಖರೀದಿಗೆ, 4 ತಿಂಗಳಿಂದ ಗ್ಯಾಸ್ ಖರೀದಿಗೆ ಹಣ ನೀಡಿಲ್ಲವೆಂದು ಆ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಖಾಜಾಭಿನ್ನಿ ಹೇಳುತ್ತಿದ್ದಾರೆ.
ಒಟ್ಟಾರೆ ಗ್ಯಾರೆಂಟಿ ಯೋಜನೆಗಳ ಮೂಲಕ ಜನಮನ ಗೆಲ್ಲಲು ಹೊರಟಿರುವ ಸರ್ಕಾರ ಭವಿಷ್ಯತ್ತಿನ ಪ್ರಜೆಗಳಾದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಅವಶ್ಯವಾದ ಅನುದಾನ ನೀಡಲು ಮಾತ್ರ ನಿರ್ಲಕ್ಷವಹಿಸಿರುವುದು ವಿಪರ್ಯಾಸದ ಸಂಗತಿ ಎನ್ನಬಹುದು.

One attachment • Scanned by Gmail