ಬಡ್ಕೊಂಡ್ ಸಾಕಾಗಿ ಕೈ ಮೌನಕ್ಕೆ ಶರಣು

ಸುಧಾಕರ್ ಗೇಲಿ

ಬೆಂಗಳೂರು,ಜು.೨೬- ಕಾಂಗ್ರೆಸ್ ಪಕ್ಷದವರು ಬಡ್ಕೊಂಡ್ ಬಡ್ಕೊಂಡ್ ಸಾಕಾಗಿ ಈಗ ಮೌನ ಪ್ರತಿಭಟನೆಗೆ ಶರಣಾಗಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಗೇಲಿ ಮಾಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾಗಾಂಧಿ ಅವರ ಇಡಿ ವಿಚಾರಣೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ಇಂದು ನಡೆಸಿರುವ ಮೌನ ಪ್ರತಿಭಟನೆ ವಿರುದ್ಧ ಕಿಡಿಕಾರಿ ಮೊನ್ನೆಯಲ್ಲಾ ಬಡ್ಕೊಂಡ್ರು ಬಡ್ಕೊಂಡ್ ಸಾಕಾಗಿ ಈಗ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.ಕಾಂಗ್ರೆಸ್‌ನ ಈ ಪ್ರತಿಭಟನೆ ಸರಿಯಲ್ಲ, ಕಾಂಗ್ರೆಸ್ ಸಹ ದೇಶದಲ್ಲಿ ೫೪ ವರ್ಷ ಅಧಿಕಾರದಲ್ಲಿತ್ತು. ಆಗ ಇಡಿ, ಸಿಬಿಐಗಳು ಇರಲಿಲ್ಲವೇ? ಇವರುಗಳು ಯಾರ ವಿರುದ್ಧವೂ ತನಿಖೆ ನಡೆಸಲಿಲ್ಲವೆ? ಪ್ರಧಾನಿ ನರೇಂದ್ರಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಎಂಟತ್ತು ತಾಸು ಅವರ ವಿಚಾರಣೆ ನಡೆದಿತ್ತು. ಹಾಗೆಯೇ ಅಮಿತ್ ಶಾರವರನ್ನು ಇದೇ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಗಡಿಪಾರು ಮಾಡಿತ್ತು. ಆಗ ಬಿಜೆಪಿಯವರು ಪ್ರತಿಭಟನೆ ಮಾಡಲಿಲ್ಲ ಎಂದರು.ಸಾಂವಿಧಾನಿಕ ಹುದ್ದೆಗಳಲ್ಲಿದ್ದರೂ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತನಿಖಾ ಸಂಸ್ಥೆಗಳಿಂದ ವಿಚಾರಣೆಗೊಳಪಡಿಸಿತ್ತು. ಇದನ್ನು ಕಾಂಗ್ರೆಸ್ಸಿಗರು ಮರೆಯಬಾರದು. ಈಗ ವಿಚಾರಣೆಗೆ ಒಳಗಾಗಿರುವ ಕಾಂಗ್ರೆಸ್ ನಾಯಕರ್‍ಯಾರು ಸಾಂವಿಧಾನಿಕ ಹುದ್ದೆಯಲ್ಲಿಲ್ಲ. ಪ್ರತಿಭಟನೆ ಇವೆಲ್ಲ ನಡೆಸುವುದು ಅನಗತ್ಯ ಎಂದ ಅವರು ಕಾಂಗ್ರೆಸ್‌ನದು ದ್ವಿಮುಖ ನೀತಿ ಎಂದು ಟೀಕಿಸಿದರು.
ತಪ್ಪು ಮಾಡಿಲ್ಲ ಎಂದ ಮೇಲೆ ವಿಚಾರಣೆಗೆ ಏಕೆ ಭಯಪಡಬೇಕು ಒಂದು ವೇಳೆ ವಿನಾಕಾರಣ ಪ್ರಕರಣ ದಾಖಲಿಸಲಾಗಿದೆ ಎಂದಾದರೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ಅವಕಾಶವಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಯಾಗಲು ವ್ಯಕ್ತಿತ್ವ, ನಾಯಕತ್ವದ ಗುಣವನ್ನು ಜನ ಒಪ್ಪಿ ಅವರ ಮೇಲೆ ನಂಬಿಕೆ ಇಡಬೇಕು. ಹಾಗಿದ್ದಾಗ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ. ನಾವು ನಾವೆ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್‌ನ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯರವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು.
ಯಾವುದೇ ಒಂದು ಸಮುದಾಯದಿಂದ ಒಬ್ಬರು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಸಮುದಾಯದ ಒಟ್ಟಾರೆ ಬೆಂಬಲದ ಜತೆಗೆ ಉಳಿದ ಸಮುದಾಯಗಳ ವಿಶ್ವಾಸ ಗಳಿಸಿದವರು ಮಾತ್ರ ಮುಖ್ಯಮಂತ್ರಯಾಗಲು ಸಾಧ್ಯ ಎಂದರು.
ಯಾವುದೇ ಒಂದು ಸಮುದಾಯಕ್ಕೆ ನೋವಾಗುವ ರೀತಿಯಲ್ಲಿ ಹೇಳಿಕೆ ನೀಡುವುದು ಸರಿಯಲ್ಲ. ಮಾಜಿ ಸಚಿವ ಜಮೀರ್ ಅಹ್ಮದ್‌ಖಾನ್‌ರವರಿಂದ ಒಕ್ಕಲಿಗರಿಗೆ ನೋವಾಗುವಂತಹ ಮಾತನ್ನು ನಿರೀಕ್ಷೆ ಮಾಡಿರಲಿಲ್ಲ. ರಾಜಕಾರಣಿಗಳು ಮಾತನಾಡುವ ಮುನ್ನ ಯೋಚನೆ ಮಾಡಿ ಮಾತನಾಡಬೇಕು ಎಂದರು.
ಜನೋತ್ಸವ
ಬಿಜೆಪಿಗೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಶಕ್ತಿ ಇಲ್ಲ ಎಂದು ಹೇಳುವ ಬೇರೆ ಪಕ್ಷಗಳ ನಾಯಕರಿಗೆ ಜು. ೨೮ ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಜನೋತ್ಸವ ಸಮಾವೇಶದ ಮೂಲಕ ಉತ್ತರ ನೀಡಲಾಗುವುದು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ೩ ವರ್ಷ ಪೂರೈಸಿದೆ. ಕೋವಿಡ್ ಕಾರಣದಿಂದ ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದಾಗ ಸಾಧನ ಸಮಾವೇಶ ಮಾಡಿರಲಿಲ್ಲ. ಈಗ ಬಸವರಾಜ ಬೊಮ್ಮಾಯಿರವರು ಮುಖ್ಯಮಂತ್ರಿಯಾಗಿ ೧ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಲಕ್ಷಾಂತರ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದರು.