ಬಡಾವಣೆಗಳನ್ನು ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ನಗರ ನೈರ್ಮಲ್ಯಕರಣಕ್ಕೆ ಒತ್ತಾಯಿಸಿ ಕರವೇಯಿಂದ ಮನವಿ

ವಿಜಯಪುರ, ಸೆ.22-ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಬನದ ಜಿಲ್ಲಾ ಪದಾಧಿಕಾರಿಗಳು ವಿಜಯಪುರ ನಗರದ ಬಡಾವಣೆಗಳನ್ನು ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ನಗರ ನೈರ್ಮಲ್ಯಕರಣಕ್ಕೆ ಒತ್ತಾಯಿಸಿ ಆಯುಕ್ತರು ಮಹಾನಗರ ಪಾಲಿಕೆ ಮ್ಯಾನೆಜರ್ ಎಲ್.ಎಮ್. ಕಾಂಬಳೆ ಅವರಿಗೆ ಬೆಳಗ್ಗೆ 11 ಗಂಟೆಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ, ನಗರದ ಎಲ್ಲ ಬಡಾವಣೆಗಳಲ್ಲಿ ಕಸದ ರಾಶಿ ದಿನೆ ದಿನೆ ಸಂಗ್ರಹಗೊಂಡು ಹೆಚ್ಚಾಗುತ್ತಿದ್ದು ಇದರಿಂದ ಅನಾರೋಗ್ಯಕರ ಕಾಯಿಲೆಗಳಾದ ಮಲೆರಿಯಾ ಹಾಗೂ ಡೆಂಗ್ಯೂಗಳಂತಹ ಮಾರಕ ಕಾಯಿಲೆಗಳು ಹೆಚ್ಚಾಗುತ್ತಿವೆ. ಇದರಿಂದ ಪ್ರತಿಯೊಂದು ಮನೆಯಲ್ಲಿ ವೃದ್ಧರು, ಚಿಕ್ಕ ಮಕ್ಕಳು ಇರುವ ಕಾರಣದಿಂದ ಸೊಳ್ಳೆಗಳ ಹಾವಳಿ ವಿಪರಿತವಾಗಿದ್ದು ಅವುಗಳ ಕಡಿತದಿಂದ ಬಡಾವಣೆಗಳು ಮಲಿನಗೊಂಡು ಬಹುತೇಕ ಮನೆಗೆ ಒಬ್ಬರು ಅಥವಾ ಇಬ್ಬರು ಕಾಯಿಲೆಗೆ ಗುರಿಯಾಗುತ್ತಿದ್ದಾರೆ.
ತೀವ್ರ ಗತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದಿದ್ದಲ್ಲಿ ಪ್ರಗತಿಪರ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳು ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಕರವೇ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಟಂಕಸಾಲಿ ಮಾತನಾಡಿ, ನಗರದ ಬಡಾವಣೆಗಳಾದ ಬಾಗಲಕೋಟ ರಸ್ತೆಯ ಆಯುರ್ವೆದ ಮಹಾವಿದ್ಯಾಲಯ, ವಿದ್ಯಾನಗರ, ಕೆ.ಎಸ್.ಆರ್.ಟಿ.ಸಿ.ಕಾಲೋನಿ, ಬಸವ ನಗರ, ವಾರ್ಡ ನಂ.16ರ ಯೋಗಾಪುರ ಬಡಾವಣೆ, ಮುನೇಶ್ವರ ನಗರ, ನವಬಾಗ, ಹವೇಲಿ ಗಲ್ಲಿ, ಹೀಗೆ ಮುಂತಾದವ ಬಡಾವಣೆಗಳಲ್ಲಿ ರಸ್ತೆ ಗುಂಡಿ ಬಿದ್ದು ನೀರು ತುಂಬಿಕೊಂಡು ರಸ್ತೆ ಸಂಚಾರಕ್ಕೆ ಅಡತಡೆಯಾಗುತ್ತಿದೆ. ಕೂಡಲೇ ನಗರದ ಪಾಳು ಬಿದ್ದ ರಸ್ತೆಗಳನ್ನು ರಿಪೇರಿ ಮಾಡುವಂತೆ ಒತ್ತಾಯಿಸಿದರು.
ರಾಜ್ಯ ಕಾರ್ಯಾಧ್ಯಕ್ಷ ಗುಲಾಬ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ.ಬನ್ನಟ್ಟಿ, ಮಾತನಾಡಿದರು. ಇದೇ ಸಂದರ್ಭದಲ್ಲಿ ಅಬ್ದುಲ್ ಸತ್ತಾರ ಪೀರಜಾದೆ, ಮಹಿಳಾ ಘಟಕದ ಪದಾಧಿಕಾರಿಗಳಾದ ಸೀಮಾ ಕುಲಕರ್ಣಿ, ಆಫ್ರೀನ್ ಕಾಖಂಡಕಿ, ಭಾರತಿ ಚವ್ಹಾಣ, ಶೈಲಾ ಚವ್ಹಾಣ, ರಷ್ಮಿ ದೇಶಪಾಂಡೆ, ವಸಂತರಾವ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.