ಬಡವರ ಸಾವಿನ ಲೆಕ್ಕದಲ್ಲಿ ತಪ್ಪೇಕೆ: ಸುಧಾಕರ್ ವಿರುದ್ಧ ಕೈ ವಾಗ್ದಾಳಿ


ಬೆಂಗಳೂರು, ಏ. ೩೦- ರಾಜಧಾನಿ ಬೆಂಗಳೂರು ಸೇರಿದಂತೆ ಕೊರೊನಾದಿಂದ ಸಾವನ್ನಪ್ಪುವವರ ಸಂಖ್ಯೆ ಬಗ್ಗೆ ಸರ್ಕಾರ ಸುಳ್ಳು ಮಾಹಿತಿ ನೀಡುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಬೇರೆಯವರ ಹೆಂಡತಿಯರ ಲೆಕ್ಕವನ್ನು ಚೆನ್ನಾಗಿ ಹಾಕುವ ನೀವು ಬಡವರ ಸಾವಿನ ಲೆಕ್ಕದಲ್ಲಿ ತಪ್ಪುವುದೇಕೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಆಸ್ಪತ್ರೆಗಳಲ್ಲಿ ಹೆಣಗಳ ರಾಶಿ, ಸ್ಮಶಾನಗಳಲ್ಲಿ ಶವಗಳ ಸಾಲು, ಮಾಧ್ಯಮಗಳಲ್ಲಿ ಸಾವಿರ ಸಾವಿನ ಸುದ್ದಿಗಳು ಇಷ್ಟಾದರೂ ಸರ್ಕಾರ ತನ್ನ ವೈಫಲ್ಯ ಮುಚ್ಚಲು ಸಾವಿನ ಲೆಕ್ಕ ಮುಚ್ಚಿಡುತ್ತಿವೆ. ಮೋದಿಯ ಚಾಳಿ ಮುಂದುವರೆಸಿದೆ ಎಂದು ಕಿಡಿಕಾರಿದೆ.
ಸಚಿವ ಸುಧಾಕರ್ ಅವರೆ ಬೇರೆಯವರ ಹೆಂಡತಿಯವರ ಲೆಕ್ಕವನ್ನು ಸರಿಯಾಗಿ ಹಾಕುವ ನೀವು, ಬಡವನ ಸಾವಿನ ಲೆಕ್ಕದಲ್ಲಿ ತಪ್ಪುವುದೇಕೆ ಎಂದು ಪ್ರಶ್ನಿಸಿದೆ.
ಜನರ ಜೀವನಕ್ಕೆ ಮಣ್ಣು, ಜೀವಕ್ಕೆ ಬೆಂಕಿ ಇಡುವುದೇ ಈ ಸರ್ಕಾರದ ಸಾಧನೆ ಎಂದು ಕಾಂಗ್ರೆಸ್ ಹರಿಹಾಯ್ದಿದೆ.
ಅನ್ನಭಾಗ್ಯದ ಅಕ್ಕಿಯನ್ನು ೧೦ ಕೆ.ಜಿ.ಗೆ ಏರಿಸಿ, ಜನರನ್ನು ಹಸಿವು ಕೊಲ್ಲುತ್ತಿದೆ. ಕೊರೊನಾ ಸೋಂಕಿತರ ಸಾವಿನಂತೆಯೇ ಹಸಿದವರ ಸಾವು ಸೇರಲಿದೆ. ಅನ್ನಭಾಗ್ಯ ಅಕ್ಕಿಯನ್ನು ಏರಿಕೆ ಮಾಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಒತ್ತಾಯಿಸಿದೆ.
ಶೇ. ೨೦ ರಷ್ಟು ಸೋಂಕಿತರು ತಲೆಮರೆಸಿಕೊಂಡಿದ್ದಾರೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ. ಇದು ಸರ್ಕಾರದ ಅಯೋಗ್ಯತನಕ್ಕೆ ಕನ್ನಡಿ. ಟ್ರೇಸ್, ಟ್ರ್ಯಾಕ್ ಮತ್ತು ಟ್ವೀಟ್‌ಗಳಲ್ಲಿ ವಿಫಲಗೊಂಡಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದಿರುವ ಕಾಂಗ್ರೆಸ್, ಸರ್ಕಾರ ಕೈಗೆ ಸಿಕ್ಕರೆ ಸಾವೇ ಗತಿ ಎಂದು ಅರ್ಥೈಸಿಕೊಂಡಿದ್ದಾರೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.