ಬಡವರ ಸಮಸ್ಯೆಗಳಿಗೆ ಶಾಸಕ ರಹೀಮ ಖಾನ ಸ್ಪಂದಿಸುತ್ತಿಲ್ಲ

ಬೀದರ: ಜಾತ್ಯಾತೀತ ಜನತಾದಳ ಪಕ್ಷ ಅಲ್ಪಸಂಖ್ಯಾತ ವಿಭಾಗದ ಬೀದರ ಜಿಲ್ಲಾಧ್ಯಕ್ಷ ಮುಹಮ್ಮದ್ ನಬಿ ಖುರೇಷಿ ಅವರು ಪತ್ರಿಕಾ ಪ್ರಕಟಣೆಯೊಂದು ಬಿಡುಗಡೆ ಮಾಡಿ, ಜಿಲ್ಲೆ ಸೇರಿದಂತೆ ರಾಜ್ಯ ಹಾಗೂ ದೇಶದಲ್ಲಿ ಕೋವಿಡ್-19 ಕರೋನಾ ವೈರಸ್ ಮಹಾಮಾರಿ ಬಹಳ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಕೋವಿಡ್-19 ಹಾಗೂ ಲಾಕ್‍ಡೌನ್‍ನಿಂದ ಬೀದರ ವಿಧಾನಸಭಾ ಮತಕ್ಷೇತ್ರದ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ನೋಂದ ಜನರ ಧ್ವನಿ ಯಾರೂ ಕೇಳುತ್ತಿಲ್ಲ. ರಾಜ್ಯದ ಹಲವು ಶಾಸಕರು ತಮ್ಮ ತಮ್ಮ ಮತಕ್ಷೇತ್ರದಲ್ಲಿ ಕರೋನಾ ಮಹಾಮಾರಿ ಮತ್ತು ಲಾಕ್‍ಡೌನ್‍ನಿಂದ ಬಹಳ ಕಷ್ಟದಲ್ಲಿರುವ ಜನರಿಗೆ ಸಹಾಯಹಸ್ತ ನೀಡಲು ಮುಂದಾಗಿದ್ದಾರೆ. ಆಹಾರ ಕಿಟ್, ನಗದು ಹಣ ನೀಡುತ್ತಿದ್ದಾರೆ ಎಂದಿದ್ದಾರೆ.
ಆದರೆ, ಸ್ಥಳಿಯ ಶಾಸಕ ರಹೀಮ ಖಾನ ಅವರು ತಮ್ಮ ಕ್ಷೇತ್ರದ ಮತದಾರರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಸರ್ಕಾರದಿಂದ ಆಯೋಜಿತ ಲಸೀಕಾಕರಣ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತಮ್ಮ ನೇತೃತ್ವದಲ್ಲಿ ಬೀದರ ಕ್ಷೇತ್ರದಲ್ಲಿ ಲಸೀಕಾಕರಣ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಸೋಷಿಯಲ್ ಮೀಡಿಯಾಗಳ ಮೂಲಕ ಪ್ರಚಾರ ಗಿಟ್ಟಿಕೊಳ್ಳುತ್ತಿದ್ದಾರೆ. ನಾನೂ ಹಗಲಿರಳು ಜನರ ಸೇವೆ ಮಾಡುತ್ತಿದ್ದೇನೆಂಬಂತೆ ಫೋಸು ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೀದರ ಜಿಲ್ಲಾಡಳಿತ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಶಾಸಕ ರಹೀಮ ಖಾನ ಅವರು ಭಾಗವಹಿಸುವುದು ತನ್ನ ಗೌರವವೆಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.
ಕೋವಿಡ್-19 ಮತ್ತು ಲಾಕ್‍ಡೌನ್‍ನಿಂದ ಅತ್ಯಂತ ಆತಂಕದಲ್ಲಿರುವ ಜನರ ಬಳಿ ಹೋಗಿ, ಸಮಸ್ಯೆಗಳು ಆಲಿಸಿ ಬಗೆಹರಿಸುವ ಬದಲು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಲ್ಲಿರುವುದು ಬಿಟ್ಟು ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಶಾಸಕ ರಹೀಮ ಖಾನ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಕೋವಿಡ್-1 ನೇ ಅಲೆಯಿಂದ ಸಾರ್ವಜನಿಕರು ಸುಧಾರಿಸಿಕೊಳ್ಳುವ ಮುನ್ನವೇ 2ನೇ ಅಲೆ ಬಂದಿರುವುದರಿಂದ ಬೀದರ ಕ್ಷೇತ್ರದ ಜನರು ಬಹಳ ಸಂಕಷ್ಟದಲ್ಲಿದ್ದಾರೆ. ದಿನಸಿ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಸೋಂಕಿತರ ರೋಗಿಗಳ ಚಿಕಿತ್ಸೆಗಾಗಿ ಸಂಬಂಧಿಕರು ಸಮಸ್ಯೆಯಲ್ಲಿದ್ದಾರೆ. ದಿನನಿತ್ಯದ ಖರ್ಚಿಗಾಗಿ ಕೈಯಲ್ಲಿ ಹಣ ಇಲ್ಲದ ಕಾರಣ ಸಾರ್ವಜನಿಕರು ಪರದಾಡುವಂತಾಗಿದೆ. ಹಲವು ಕುಟುಂಬಗಳು ತಮ್ಮಲ್ಲಿರುವ ಬಂಗಾರ ಅಡವಿಟ್ಟು ಸಂಸಾರ ನಡೆಸುತ್ತಿದ್ದಾರೆ. ಹಲವು ಬಡ ಕುಟುಂಬಗಳು ಒಂದೊಪ್ಪತ್ತಿನ ಊಟ ಸಿಗದೇ ಸಾಯುವ ಸ್ಥತಿಯಲ್ಲಿದ್ದಾರೆ ಎಂದಿದ್ದಾರೆ.
ರಾಜ್ಯದ ಹಲವು ಶಾಸಕರು ತಮ್ಮ ತಮ್ಮ ಕ್ಷೇತ್ರದ ಜನರ ಮನೆ ಮನೆಗೆ ಹೋಗಿ ಕೈಲಾಗದಷ್ಟು ಸಹಾಯ ಮಾಡುತ್ತಿದ್ದಾರೆ. ಆಹಾರದ ಕಿಟ್‍ಗಳು ಸೇರಿದಂತೆ ಇತ್ಯಾದಿ ಸಹಾಯ-ಸಹಕಾರ ನೀಡುತ್ತಿದ್ದಾರೆ. ಆದರೆ, ಬೀದರ ಶಾಸಕರಾದ ರಹೀಮ ಖಾನ ಅವರು ಮಾತ್ರ ತಮ್ಮ ಕ್ಷೇತ್ರದ ಜನರತ್ತ ಮುಖ ಮಾಡಿಯೂ ನೋಡುತ್ತಿಲ್ಲವೇಕೆ? ಎಂದು ಪ್ರಶ್ನಿಸುತ್ತಿದ್ದಾರೆ.
ಬೀದರ ಶಾಸಕರಾದ ರಹೀಮ ಖಾನ ಅವರು ಜನರ ಸಂಕಷ್ಟದಲ್ಲಿ ಮುಂದೆ ಬಂದು ಸಹಾಯ ಮಾಡಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಜನರು ಶಾಸಕರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ತಿಳಿಸಿದ್ದಾರೆ.