ಬ್ಯಾಡಗಿ,ಜೂ27:ಬಂಜಾರ (ಲಂಬಾಣಿ) ಸಮಾಜದ ಬಡವರಿಗೆ ನೀಡಿದ್ದ ಭೂಮಿಯಲ್ಲಿ ಅನಧೀಕೃತವಾಗಿ ಮನೆಮನೆಗೆ ಗಂಗೆ ಯೋಜನೆಯಡಿ ನೀರಿನ ಜಲಾಗಾರ ನಿರ್ಮಿಸುತ್ತಿರುವುದನ್ನು ಖಂಡಿಸಿ ಸೇವಾಲಾಲ್ ನಗರದ ಗ್ರಾಮಸ್ಥರು ಶಿಡೇನೂರ ಗ್ರಾಮದ ಹಂಸಭಾವಿ ಬ್ಯಾಡಗಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಮಾಜದ ಹಿರಿಯ ಮುಖಂಡ ತಿರಕಪ್ಪ ನಾಯಕ, ಸರ್ಕಾರ ಬಡವರಿಗೆಂದೇ ಉಳುಮೆ ಮಾಡಲು ಅಕ್ರಮ-ಸಕ್ರಮ ಯೋಜನೆಯಡಿ ಭೂಮಿ ನೀಡಿದೆ ಶಿಡೇನೂರಿನ 29 ದಲಿತ ಕುಟುಂಬಗಳಿಗೆ ರಿ.ಸ.ನಂ.244 ಮತ್ತು 245 ರಲ್ಲಿ ಪ್ರತಿಯೊಬ್ಬರಿಗೆ 1 ಎಕರೆ 15 ಗುಂಟೆ ಭೂಮಿ ಮಂಜೂರು ಮಾಡಿದೆ, ಕಳೆದ-23-11-2007 ರಂದು ಪಟ್ಟಾ ನೀಡಿದ್ದಲ್ಲದೇ 11-12-2008 ರಂದು ಪಹಣಿಯನ್ನು (ಉತಾರ) ಕೂಡ ನೀಡಿದೆ ಎಂದರು.
ಏಕಾಏಕಿ ಟ್ಯಾಂಕ್ ನಿರ್ಮಾಣ: ಕಳೆದ 15 ವರ್ಷಗಳ ಹಿಂದೆ ಸರ್ಕಾರ ಬಡ ಹಾಗೂ ಹಿಂದುಳಿದ ಪರಿಶಿಷ್ಟ ಜಾತಿಯ ಸಮು ದಾಯ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಸಾಗುವಳಿ ಮಾಡಿದ ನಮಗೆ ಜಮೀನು ನೀಡಿದೆ, ಎಲ್ಲ ದಾಖಲೆಗಳು ನಮ್ಮ ಬಳಿಯಿದ್ದು, ನಮಗೆ ನೀಡಿರುವ ಜಮೀನಿನಲ್ಲಿ ಮನೆ ಮನೆ ಗಂಗೆ ಯೋಜನೆಯಡಿ ಅನಧೀಕೃತವಾಗಿ ನೀರಿನ ಟ್ಯಾಂಕ ನಿರ್ಮಿಸುತ್ತಿದ್ದಾರಲ್ಲದೇ ಬೇರೆ ಬೇರೆ ಕೆಲಸಕ್ಕೆ ಬಳಸಲು ಯತ್ನಿಸುತ್ತಿರುವುದು ಕ್ರಮಬದ್ಧವಲ್ಲ ಎಂದು ಆರೋಪಿಸಿದರು.
ನಮ್ಮ ಜಮೀನು ನಮಗುಳಿಯಲಿ:ಬಂಜಾರ ಸಮಾಜದ ಜನರಿಗೆ ನೀಡಿದ ಜಮೀನು ಬಿಟ್ಟು ಇನ್ನುಳಿದ ಸರ್ಕಾರಿ ಜಮೀನಿನಲ್ಲಿ ಇಂತಹ ಕಟ್ಟಡ ನಿರ್ಮಿಸಲು ನಮ್ಮ ತಕರಾರಿಲ್ಲ, ರಾಜಕೀಯ ಪ್ರಭಾವದಿಂದ ದಲಿತ ರೈತ ಕುಟುಂಬಗಳಿಗೆ ಅನ್ಯಾಯ ವಾಗುತ್ತಿದೆ, ನೀವು ಇಂತಿಷ್ಟೇ ಭೂಮಿ ತೆಗೆದುಕೊಳ್ಳಿ ಎಂದು ಒತ್ತಡ ಹೇರುತ್ತಿರುವುದು ನ್ಯಾಯ ಸಮ್ಮತವಲ್ಲ ಪ್ರಕರಣದ ಹಿಂದಿರುವ ವ್ಯಕ್ತಿಗಳ ಹಾಗೂ ಅವರ ಉದ್ದೇಶಗಳು ಉನ್ನತಮಟ್ಟದ ತನಿಖೆಯಿಂದ ಹೊರಬರಬೇಕು ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ಹದ್ದುಬಸ್ತ ಮಾಡಿಕೊಡಿ: ನಾವು ಉಳುಮೆ ಮಾಡುತ್ತಿರುವ ಜಮೀನು ನಮ್ಮ ಹೆಸರಿನಲ್ಲಿದ್ದರೂ ಬೇರೆ ಬೇರೆ ಕಾರಣಗಳಿಂದ ಸರ್ವೆ ಇಲಾಖೆ ಅಧಿಕಾರಿಗಳು ಹದ್ದು ಬಸ್ತ ಮಾಡುತ್ತಿಲ್ಲ, ಪಹಣಿಯಲ್ಲಿರುವಂತೆ ಮತ್ತು ನಕ್ಷೆಯಲ್ಲಿರುವಂತೆ ಜಮೀನು ಗುರ್ತಿಸುವಂತೆ ಅರ್ಜಿ ಸಲ್ಲಿಸಿದರೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿದ ಅವರು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ಯರ್ಥಪಡಿಸದೇ ಹೋದಲ್ಲಿ ಪ್ರತಿಭಟನೆಯನ್ನು ಎದುರಿಸುವಂತೆ ಎಚ್ಚರಿಸಿದರು.
ಸ್ಥಳಕ್ಕೆ ಪಿಎಸ್‍ಐ:ಸುದ್ದಿ ತಿಳಿಯುತ್ತಿದ್ದಂತೆ ಶಿಡೇನೂರಿಗೆ ಆಗಮಿಸಿದ ಪಿಎಸ್‍ಐ ಮಂಜುನಾಥ ಕುಪ್ಪೆಲೂರು ಹಾಗೂ ಸಿಬ್ಬಂದಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು, ಸದರಿ ಸಮಸ್ಯೆಯನ್ನು ಚರ್ಚೆಯ ಮೂಲಕ ಇತ್ಯರ್ಥ ಪಡಿಸಿಕೊಳ್ಳುವುದು ಉತ್ತಮ ಕಾನೂನು ಕೈಗೆ ತೆಗೆದುಕೊಳ್ಳುವ ಅಗತ್ಯವಿಲ್ಲ ಅನಧೀಕೃತ ಟ್ಯಾಂಕ್ ನಿರ್ಮಾಣವನ್ನು ನಿಲ್ಲಿಸಲು ತಹಶೀಲ್ದಾರಗೆ ತಿಳಿಸಿದ್ದೇನೆ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಿ ಇತ್ಯರ್ಥಪಡಿಸಿಕೊಳ್ಳೋಣ ಎಂದು ಭರವಸ ನೀಡಿದ ಬಳಿಕ ಸಾಗುವಳಿದಾರರು ಪ್ರತಿಭಟನೆಯನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ರಮೇಶ ಸುತ್ತಕೋಟಿ, ಕುಮಾರ ಲಂಬಾಣಿ, ಮೂಕಪ್ಪ ನಾಗಪ್ಪ ತಡಸದ, ಶಂಕ್ರಪ್ಪ ರಾಮಚಂದ್ರಪ್ಪ ಪೂಜಾರ, ರಾಮಪ್ಪ ಕೊಲ್ಲಾಪುರ, ಪಾಂಡಪ್ಪ ಕಬ್ಬೂರು, ಈರಣ್ಣ ಬಣಕಾರ, ಪಾಂಡಪ್ಪ ಮಾನಪ್ಪ ಕಬ್ಬೂರ, ಗುರುಶಾಂತಪ್ಪ ಮೋಟಲೆಪ್ಪ ಲಮಾಣಿ, ಹನುಮಂತಪ್ಪ ದೊಡ್ಡಪುಟ್ಟಪ್ಪ ಬಡಿಗೇರ ಇನ್ನಿತರರಿದ್ದರು.