ಅಥಣಿ :ಜು.23: ತಾಲೂಕಿನ ಸಾರ್ವಜನಿಕ ಆಸ್ಪತ್ರೆಯು ಬೆಳಗಾವಿ ಜಿಲ್ಲೆಯಲ್ಲಿಯೇ ಮಾದರಿ ಆಸ್ಪತ್ರೆಯಾಗಿದೆ, ಅನೇಕ ಬಡವರಿಗೆ ಮತ್ತು ನಿರ್ಗತಿಕರ ಬಾಳಿಗೆ ಬೆಳಕಾಗಿರುವ ಅಥಣಿ ಸಾರ್ವಜನಿಕ ಆಸ್ಪತ್ರೆಯು ಬಡವರ ಬಾಳಿನ ದೇವಸ್ಥಾನವಾಗಿದೆ ಇಲ್ಲಿ ದೊರೆಯುತ್ತಿರುವ ಸೇವೆಗಳು ಖಾಸಗಿ ಆಸ್ಪತ್ರೆಗಿಂತ ಉತ್ತಮ ಗುಣಮಟ್ಟದ್ದಾಗಿವೆ, ಎಂದು ಯುವ ಮುಖಂಡ ಚಿದಾನಂದ ಲಕ್ಷ್ಮಣ ಸವದಿ ಪ್ರಸಂಶೆ ವ್ಯಕ್ತಪಡಿಸಿದರು.
ಅವರು ಅಥಣಿ ಪಟ್ಟಣದಲ್ಲಿಂದು ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಆಸ್ಪತ್ರೆ ಅಥಣಿ, ಮತ್ತು ಜನಹಿತ ಐಕೇರ ಸೆಂಟರ್ ಬೆಂಗಳೂರು, ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ತಂದೆ ಲಕ್ಷ್ಮಣ ಸವದಿ ಅವರು ಅಥಣಿ ಮತ ಕ್ಷೇತ್ರದ ಶಾಸಕರಾದ ಬಳಿಕ ಕಳೆದ 20 ವರ್ಷಗಳಲ್ಲಿ ಅಥಣಿ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸಿ ಇಲ್ಲಿ ಅನೇಕ ಆರೋಗ್ಯ ಸೇವೆಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡುವ ಮೂಲಕ ಬಡ ರೋಗಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು.
ಇಂದು ವಿಶ್ವ ಜನಸಂಖ್ಯಾ ದಿನಾಚರಣೆಯ ನಿಮಿತ್ಯವಾಗಿ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆರೋಗ್ಯ ಇಲಾಖೆಯಿಂದ ಮುಂಬರುವ ದಿನಗಳಲ್ಲಿ ಯಾವುದೇ ವಿಭಾಗದ ತಪಾಸಣಾ ಸೇವೆಗಳನ್ನು ಆಯೋಜಿಸಿದರೆ ಅದಕ್ಕೆ ಬೇಕಾಗುವ ಅಗತ್ಯ ಸಹಾಯ ಸಹಕಾರ ನೀಡುವುದಾಗಿ ಬರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಮಾತನಾಡಿ ಮನುಷ್ಯನಿಗೆ ಪ್ರತಿಯೊಂದು ಅಂಗಗಳು ಬಹಳ ಮುಖ್ಯ. ನಮ್ಮ ಕಣ್ಣುಗಳು ಸರಿಯಾಗಿದ್ದರೆ ನಮ್ಮ ಸುತ್ತಮುತ್ತಲಿನ ಪರಿಸರದ ಜೊತೆಗೆ ಇಡೀ ಜಗತ್ತನ್ನೇ ನೋಡಬಹುದು. ಕಣ್ಣು ಬಹಳ ಸೂಕ್ಷ್ಮವಾದ ಅಂಗ. ಪ್ರತಿಯೊಬ್ಬರು ತಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. 40ವರ್ಷ ಮೇಲ್ಪಟ್ಟವರಲ್ಲಿ ಮೋತಿ ಬಿಂದು ಸಮಸ್ಯೆ ಇದ್ದವರಿಗೆ ಸರ್ಕಾರದಿಂದ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದ್ದು, ಈ ಶಿಬಿರದಲ್ಲಿ 600ಕ್ಕೂ ಅಧಿಕ ರೋಗಿಗಳಿಗೆ ಕ್ಷೇತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೈಟೆಕ್ ಮಾದರಿಯ ಆರೋಗ್ಯ ಸೇವೆಗಳು ಇರುವುದು ಮತ್ತು ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುತ್ತಿರುವದಕ್ಕೆ ಅಭಿನಂದಿಸಿದರು.
ಚಿಕ್ಕೋಡಿ ಅಪರ್ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶರಣಪ್ಪ ಗಡೆದ ಮಾತನಾಡಿ ಕಣ್ಣಿನ ಆರೋಗ್ಯ ಮತ್ತು ಶಿಬಿರದ ಮಹತ್ವದ ಕುರಿತು ತಿಳಿಸಿ ಜನಸಂಖ್ಯಾ ನಿಯಂತ್ರಣದ ಸಲಹೆಗಳನ್ನು ತಿಳಿಸಿದರು.
ತಾಲೂಕಾ ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, ಸಮಾಜ ಕಲ್ಯಾಣ ಅಧಿಕಾರಿ ಬಸವರಾಜ ಯಾದವಾಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅಶೋಕ ಕಾಂಬಳೆ, ನೇತ್ರ ತಜ್ಞರಾದ ಡಾ. ಬಸವರಾಜ ಪಟ್ಟೆದ ,ಡಾ. ರಮೇಶ ಹುಲಕುಂದ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ, ಡಾ, ಸಿ ಎಸ್ ಪಾಟೀಲ, ಡಾ, ಕನಮಡಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಿಕ್ಷಕ ಸಂಗಮೇಶ ಹಚದಡ ನಿರೂಪಿಸಿದರು. ಎ. ಬಿ ಗೂಳಿಧರ ವಂದಿಸಿದರು,
100 ಹಾಸಿಗೆ ಸೌಲಭ್ಯವುಳ್ಳ ಈ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಐಸಿಯು ಘಟಕ, ಡಯಾಲಿಸಿಸ್ ಘಟಕ, ಸಿಟಿ ಸ್ಕ್ಯಾನ್ ಸೌಲಭ್ಯ, ಹೈಟೆಕ್ ಮಾದರಿಯ ಶಸ್ತ್ರಚಿಕಿತ್ಸಾ ವಿಭಾಗ ಹೊಂದಿರುವುದರಿಂದ ತಾಲೂಕಿನ ಸಾವಿರಾರು ಬಡ ಕುಟುಂಬಗಳಿಗೆ ಅನುಕೂಲವಾಗಿದ್ದು, ಆಸ್ಪತ್ರೆಗೆ ಬೇಕಾಗುವ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನನ್ನ ತಂದೆ ಹಾಗೂ ಮತಕ್ಷೇತ್ರದ ಶಾಸಕರಾದ ಲಕ್ಷ್ಮಣ ಸವದಿ ಅವರು ಕೂಡ ಈ ಸಾರ್ವಜನಿಕ ಆಸ್ಪತ್ರೆಗೆ ಇನ್ನಷ್ಟು ಹೊಸ ಆರೋಗ್ಯ ಸೇವೆಗಳನ್ನ ಕೊಡುವ ನಿಟ್ಟಿನಲ್ಲಿ ಕನಸು ಹೊಂದಿದ್ದಾರೆ. ಮುಂಬರುವ ದಿನಗಳಲ್ಲಿ ಅವು ಅಥಣಿ ಜನತೆಗೆ ದೊರಕಲಿವೆ.
----- ಚಿದಾನಂದ ಸವದಿ,
ಯುವ ನಾಯಕ