ಬಡವರ ಬಲವರ್ಧನೆಗೆ ಗ್ಯಾರಂಟಿ ಯೋಜನೆ: ಪರಂ

ತುಮಕೂರು, ಆ. ೨೦- ಬಡವರನ್ನು ಶಕ್ತಿವಂತರನ್ನಾಗಿ ಮಾಡಬೇಕು ಎಂಬುದು ಕಾಂಗ್ರೆಸ್ ಪಕ್ಷದ ಇಚ್ಛೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಬಡವರನ್ನು ಶಕ್ತಿವಂತರನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ನಮ್ಮ ಪಕ್ಷ ೫ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಈ ಮೂಲಕ ಬಡವರು, ಅಶಕ್ತರು, ಧ್ವನಿ ಇಲ್ಲದವರ ಶ್ರೇಯೋಭಿವೃದ್ಧಿಗೆ ನಮ್ಮ ಪಕ್ಷ ಶ್ರಮವಹಿಸಿ ಕೆಲಸ ಮಾಡುತ್ತಿದೆ ಎಂದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅರಸುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಜಾರಿಗೆ ತಂದಿರುವ ೫ ಗ್ಯಾರಂಟಿಗಳನ್ನು ವಿರೋಧ ಮಾಡುವವರು ಬಡಜನರ ನಿಜವಾದ ವಿರೋಧಿಗಳು ಎಂದರು.
ಸಣ್ಣ ಸಣ್ಣ ಸಮುದಾಯಗಳಿಗೆ ಧ್ವನಿಯಾಗುವ ಕೆಲಸವನ್ನು ಮಾಜಿ ಮುಖ್ಯಮಂತ್ರಿ ದಿ. ದೇವರಾಜು ಅರಸು ಅವರು ಮಾಡಿದರು. ಹೆಸರನ್ನು ಕೇಳದಿರುವ ಜಾತಿ ಇದೆ ಎಂದು ಸಮಾಜಕ್ಕೆ ಗೊತ್ತಾಗುವ ರೀತಿ ಧ್ವನಿ ಕೊಟ್ಟ ಮಹಾನುಭಾವರು ಅರಸು ಎಂದು ಬಣ್ಣಿಸಿದರು.
ಉಳ್ಳವರು, ಆಸ್ತಿವಂತರು, ಶಕ್ತಿವಂತರಿಗೆ ಸಮಾಜದಲ್ಲಿ ಯಾವಾಗಲೂ ಸೌಲಭ್ಯ ಸಿಗುತ್ತಲೇ ಇರುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡಿದವರು ದೇವರಾಜ ಅರಸು ಎಂದರು.
ದೇವರಾಜ ಅರಸು ಅವರಿಂದ ಯಾರು ಜಮೀನು ಪಡೆದುಕೊಂಡರೋ ಅವರೇ ಇಂದು ಅರಸುಗೆ ವಿರೋಧ. ರಾಜೀವ್‌ಗಾಂಧಿಯವರಿಂದ ಯಾರು ಮತದಾನ ಮಾಡುವ ಹಕ್ಕು ಪಡೆದರೋ ಅವರೇ ಇಂದು ನಮ್ಮ ಪಕ್ಷಕ್ಕೆ ವಿರೋಧವಾಗಿರುವುದು ವಿಪರ್ಯಾಸಕರ ಸಂಗತಿ ಎಂದರು.
ದೇವರಾಜ ಅರಸು ಅವರು ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡಿದವರು. ಅವರ ಹಾದಿಯಲ್ಲೇ ನಮ್ಮ ಪಕ್ಷ ಸಾಗುತ್ತಿದೆ. ನಾವೆಲ್ಲ ಶೋಷಿತರು, ಬಡವರು, ಅಶಕ್ತರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿಯವರು ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಇವರಿಗೆ ಬದ್ಧತೆ ಇಲ್ಲ. ಅವರ ಅಜೆಂಡಾದಲ್ಲಿ ಸಾಮಾಜಿಕ ನ್ಯಾಯ ಕೊಡಬೇಕು ಎಂಬುದಂತೂ ಇಲ್ಲವೇ ಇಲ್ಲ ಎಂದರು.
ಕಳೆದ ೪ ವರ್ಷ ರಾಜ್ಯದಲ್ಲಿ ಬಿಜೆಪಿಯ ದುರಾಡಳಿತ ಕಾಂಗ್ರೆಸ್‌ಗೆ ಮತ ಹಾಕುವ ರೀತಿಯಲ್ಲಿ, ಕಾಂಗ್ರೆಸ್ ಮೇಲೆ ನಂಬಿಕೆ ಬರುವ ರೀತಿಯಲ್ಲಿ ಮಾಡಿತು. ಬಿಜೆಪಿ ಪಕ್ಷದ ಭ್ರಷ್ಟಾಚಾರ ಒಂದು ಭಾಗವಾದರೆ, ಯಾರಿಗೆ ನ್ಯಾಯ ಒದಗಿಸಿದ್ದಾರೆ, ಯಾವ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ, ಯಾವ ಶೋಷಿತ ಸಮುದಾಯಗಳನ್ನು ಮೇಲೆತ್ತುವ ಪ್ರಯತ್ನ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮೇಲೆ ರಾಜ್ಯದ ಜನರಿಗೆ ನಂಬಿಕೆ ಬಂದಿದೆ. ಹಾಗಾಗಿ ೧೩೫ ಸೀಟುಗಳನ್ನು ಕೊಟ್ಟು ಒಳ್ಳೆಯ ಆಡಳಿತ ಮಾಡಿ ಎಂದು ಅಧಿಕಾರ ನೀಡಿದ್ದಾರೆ. ಈಗ ಒಳ್ಳೆಯ ಆಡಳಿತ, ಜನಪರ ಕಾರ್ಯಕ್ರಮಗಳನ್ನು ಮಾಡುವುದು ನಮ್ಮ ಜವಾಬ್ದಾರಿ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಬಾ ಕ್ಷೇತ್ರದ ಜಲಾಬ್ದಾರಿಯನ್ನು ವರಿಷ್ಠರು ನನ್ನ ಹೆಗಲಿಗೆ ನೀಡಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದು ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜೀವ್‌ಗಾಂಧಿ, ದೇವರಾಜು ಅರಸು ಹೆಸರಲ್ಲಿ ನೀವೆಲ್ಲಾ ಕಾಂಗ್ರೆಸ್ ಗೆಲ್ಲಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ಅಖಂಡ ಭಾರತದಲ್ಲಿ ಎಲ್ಲರೂ ಸಮಾನರಾಗಿ ಬದುಕಬೇಕು ಎಂದು ಹಲವು ಯೋಜನೆಗಳನ್ನು ಜಾರಿಗೊಳಿಸಿದರು ಎಂದರು.
ಈ ಸಂದರ್ಭದಲ್ಲಿ ಶಾಸಕ ಹೆಚ್.ವಿ. ವೆಂಕಟೇಶ್, ಮೇಯರ್ ಪ್ರಭಾವತಿ ಸುಧೀಶ್ವರ್, ಮುಖಂಡರಾದ ಮುರುಳೀಧರ ಹಾಲಪ್ಪ, ಇಕ್ಬಾಲ್ ಅಹಮದ್, ಕೆಂಚಮಾರಯ್ಯ, ಶ್ರೀನಿವಾಸ್ ಹಾಗೂ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರುಗಳು ಭಾಗವಹಿಸಿದ್ದರು.