ಬಡವರ ಬಗ್ಗೆ ಕಾಳಜಿ ಕರುಣೆ ಇಲ್ಲದ ಬಿಜೆಪಿ ಸರ್ಕಾರ

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ. 9 :- ಕಳೆದ ಏಳು ವರ್ಷದಿಂದ ಆಡಳಿತ ನಡೆಸುವ ಬಿಜೆಪಿ ಸರ್ಕಾರ ಬಡವರ ಕಷ್ಟ ಅರಿಯದೆ ತಿಂಗಳಿಗೆ ಎರಡು ಮೂರು ಬಾರಿ ಸಿಲೆಂಡರ್ ಬೆಲೆ ಹೆಚ್ಚಿಸಿ ಬಡವರಿಗೆ ಹೊರೆ ಮಾಡುತ್ತಿರುವುದನ್ನು ಖಂಡಿಸಿ ಕೂಡ್ಲಿಗಿಯಲ್ಲಿ ಮಹಿಳಾ ಕಾಂಗ್ರೆಸ್ ಘಟಕದವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸುವ ಮುನ್ನ ಬಳ್ಳಾರಿ ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆಶಾಲತಾ ಸೋಮಪ್ಪ ಮಾತನಾಡಿ ಬಡವರ ಪರ ಇರುವುದಾಗಿ ಜನರಿಗೆ ಸುಳ್ಳು ಹೇಳುವ ಮೂಲಕ ಅಧಿಕಾರ ನಡೆಸುತ್ತಿರುವ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಜನರ ಕಷ್ಟ ಕಾರ್ಪಣ್ಯ ಅರಿಯದೆ ತಮಗೆ ತಿಳಿದಂತೆ ದಿನಬಳಕೆ ವಸ್ತುಗಳ ಹಾಗೂ ಗ್ಯಾಸ್ ಸಿಲೆಂಡರ್ ಬೆಲೆಗಳು ಗಗನಕ್ಕೇರುವಂತೆ ಮಾಡಿ ಬಡಜನತೆ ಜೀವನ ನಡೆಸುವುದೇ ಕಷ್ಟವಾಗಿದೆ ತಕ್ಷಣ ಗ್ಯಾಸ್ ಹಾಗೂ ದಿನನಿತ್ಯ ಬಳಕೆ ಹಾಗೂ ದವಸಧಾನ್ಯದ ಬೆಲೆಗಳನ್ನು  ಇಳಿಸುವಂತೆ ಬಿಜೆಪಿ ಸರ್ಕಾರ ಮುಂದಾಗಬೇಕು ಎಂದರು.ಕೂಡ್ಲಿಗಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ನೇತ್ರಾವತಿ ಮಾತನಾಡಿ ಅಚ್ಛೆದಿನ್ ಅಚ್ಛೆದಿನ್ ಎಂದು ಹೇಳಿ ಜನರ ಕಷ್ಟ ಅರಿಯದೆ ಕಾಳಜಿ ಕರುಣೆ ಇಲ್ಲದ ಆಡಳಿತ ನಡೆಸುವ ಬಿಜೆಪಿ ಸರ್ಕಾರ ಪ್ರತಿಯೊಂದರ ಬೆಲೆ ಏರಿಸುವ ಮೂಲಕ ಬಡಜನತೆಯನ್ನು ಬೀದಿಗೆ ತಳ್ಳುತ್ತಿದೆ ಗ್ಯಾಸ ಸಿಲೆಂಡರ್ ಬೆಲೆ ಸಾವಿರ ರೂ ಏರಿಕೆಯಿಂದ ಮನೆಯಲ್ಲಿ ಮಹಿಳೆಯರು ಕಣ್ಣೀರು ಹಾಕುವ ಪರಿಸ್ಥಿತಿಗೆ ಬಂದಿದ್ದು ಮುಂದಿನ ದಿನದಲ್ಲಿ ಬಿಜೆಪಿ ಸರ್ಕಾರಕ್ಕೆ ಜನತೆ ತಕ್ಕಪಾಠ ಕಲಿಸಲಿದೆ ಮುಂದೆ ಕಾಂಗ್ರೆಸ್ ಆಡಳಿತವನ್ನು ಜನತೆ ತರಲಿದೆ ಎಂದು ಭವಿಷ್ಯ ನುಡಿದರು. ಪ್ರತಿಭಟನೆಯಲ್ಲಿ ಕೂಡ್ಲಿಗಿ ಮಹಿಳಾ ಕಾಂಗ್ರೆಸ್ ನ ರತ್ನಮ್ಮ, ವಸಂತ, ಹುಲಿಗೆಮ್ಮ, ಸುಮಲತಾ, ಸಕ್ರಮ್ಮ, ಉಮಾದೇವಿ, ಅಮಿದಾ, ಸಂಗೀತಾ, ಮುಮ್ಮುಸಾ, ಉಚ್ಚೆಂಗಮ್ಮ, ನಾಗರತ್ನ ಹಾಗೂ ಇತರರು ಭಾಗವಹಿಸಿದ್ದರು.