ಬಡವರ ಫ್ರೀಜ್ ಕುಂಬಾರನ ಗಡಿಗೆ ಭಾರಿ ಬೇಡಿಕೆ

ಬಡ ಕುಂಬಾರರ ಮೊಗದಲ್ಲಿ ಬೇಸಿಗೆಯು ಕೊಂಚ ನಗು ಮೂಡಿಸಿದೆ
ಲಿಂಗಸುಗೂರ,ಏ.೦೫- ಗಡಿಗೆಗಳು ಬಡವರ ಫ್ರೀಜ್ ಎಂದೇ ಖ್ಯಾತಿ ಪಡೆದಿವೆ. ಬಹಳಷ್ಟು ಜನ ಬೇಸಿಗೆಯ ದಿನಗಳಲ್ಲಿ ಗಡಿಗೆ ನೀರನ್ನು ಕುಡಿಯುವುದನ್ನು ರೂಢಿಸಿಕೊಂಡಿರುತ್ತಾರೆ.
ಹಳ್ಳಿಗಳಲ್ಲಂತೂ ಬಡವರು ಗಡಿಗೆಗಳನ್ನುಬಳಸುವುದು ಈಗೂ ಸಾಮಾನ್ಯ. ಬಿಸಿಲು ಈಗ ದಿನೇದಿನೆ ಹೆಚ್ಚುತ್ತಿದ್ದರಿಂದ ಕೆಲವರು ಕುಂಬಾರರ ಗಡಿಗೆ ಖರೀದಿಗೆ ಮುಂದಾಗಿದ್ದು, ಇದರಿಂದ ಬಡ ಕುಂಬಾರರ ಮೊಗದಲ್ಲಿ ಬೇಸಿಗೆಯು ಕೊಂಚ ನಗು ಮೂಡಿಸಿದೆ.
ಹಿಂದೆ ಮಡೆಕೆಯಿಲ್ಲದೇ ಮಾನವನ ಬದುಕಿಲ್ಲ ಅನ್ನುವಷ್ಟು ಮಡಿಕೆಯೇ ಮುಖ್ಯವಾಗಿತ್ತು. ಈ ಮಾತು ಈಗ ಸುಳ್ಳೇನೋ ಅನ್ನುವಷ್ಟು ಪರಿಸ್ಥಿತಿ ಬದಲಾಗಿದೆ. ಆಧುನೀಕತೆಯ ಭರಾಟೆಯಲ್ಲಿ ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್, ಪೈಬರ್ ಬಂದು ಮಡಿಕೆಗಳು ಮಾಯವಾಗುತ್ತಲೇ ಇದ್ದವು. ಇದರಿಂದ ಕುಂಬಾರರು ಆತಂಕದ ನಡುವೆಯೇ ವೃತ್ತಿ ಸಾಗಿಸುತ್ತಿದ್ದರು. ಈಗ ಪ್ರಸಕ್ತ ಬೇಸಿಗೆಯ ಬಿಸಿಲಿನ ತಾಪ ವಿಫರೀತ ಹೆಚ್ಚಿದ್ದರಿಂದ ಜನತೆ ಅನಿವಾರ್ಯವಾಗಿ ಮಡಕೆಯ ಮೊರೆ ಹೋಗುತ್ತಿದ್ದರಿಂದ ಮಾರಾಟದಲ್ಲಿ ಚೇತರಿಕೆ ಕಂಡು ಅವರಲ್ಲಿ ಸ್ವಲ್ಪ ಪ್ರಮಾಣದ ನೆಮ್ಮದಿ ಕಾಣುತ್ತಿದೆ.
ನಾಲ್ಕಾರು ವರ್ಷಗಳಿಂದ ಮಡಿಕೆಗಳನ್ನು ಕೇಳುವವರಿಲ್ಲದಂತಾಗಿತ್ತು. ಕುಂಬಾರಿಕೆ ಮಾಡುತ್ತಿದ್ದವರು ಮೂಲ ವತ್ತಿಯನ್ನು ಬಿಡಬೇಕೆ? ಇದನ್ನೇ ನಂಬಿ ಕುಳಿತರೆ ಹೊಟ್ಟೆಪಾಡಿಗೆ ಮಾಡುವುದೇನು? ಇದನ್ನು ಬಿಟ್ಟು ಮತ್ಯಾವ ವತ್ತಿಯಲ್ಲಿ ತೊಡಗಿ ಜೀವ ಸಾಗಿಸಬೇಕು ? ಎಂದು ಕುಂಬಾರರು ಚಿಂತೆಯಲ್ಲಿದ್ದರು. ಆದರೆ, ಈ ಬಾರಿ ಬಿಸಿಲು ಹೆಚ್ಚಾಗಿ ಮಡಿಕೆ ಮಾರಾಟ ವ್ಯಾಪಾರ ಕಂಬಾರರ ಕೈ ಹಿಡಿದಿದೆ. ಉಳ್ಳವರು ಪ್ರೀಜ್ ಮೊರೆ ಹೋಗಿದ್ದರೆ, ಬಡವರು ಮಡಿಕೆ ಖರೀದಿಸತೊಡಗಿದ್ದಾರೆ. ಇದರಿಂದ ಕುಂಬಾರರ ವ್ಯಾಪಾರ ತುಸು ಜೋರಾಗಿ ತುಸು ಖುಷಿಯಲ್ಲಿದ್ದಾರೆ.
ಕಡಿಮೆ ಬೆಲೆಗೆ ಸಿಗುವ ಮಣ್ಣಿನಿಂದ ತಯಾರಾದ ಮಡಿಕೆಗಳ ಸ್ಥಾನವನ್ನು ರೆಪ್ರೀಜೇಟರ್ ಸಂಪೂರ್ಣವಾಗಿ ಅಕ್ರಮಿಸಿಕೊಂಡಿದೆಯಾದರೂ ಮಣ್ಣಿನ ಮಡಿಕೆಗಳ ಮಾರಾಟ ಅಷ್ಟು ನಡದೇ ಇದೆ. ಆದರೂ ಕುಂಬಾರರು ಹೊಸ ಕಾಲದ ಪೈಪೋಟಿ ಎದುರಿಸಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಕರಡಕಲ್ ನಲ್ಲಿ ೨೦ ರಿಂದ ೩೦ ಕುಂಬಾರರು ಈಗೂ ತಮ್ಮದೇ ವತ್ತಿಯನ್ನು ನಂಬಿಕೊಂಡಿದ್ದಾರೆ. ಮಣ್ಣಿನ, ಮಡಿಕೆ, ಒಲೆ, ಪರ್ಯಾಣ, ಮುಚ್ಚಳ, ಪಣತೆ ವಿವಿಧ ಪಾತ್ರೆಗಳ ತಯಾರಿಕೆಯನ್ನೇ ಇವರು ಕಾಯಕವಾಗಿಸಿಕೊಂಡಿದ್ದಾರೆ.
ಬೇಸಿಗೆ ಈ ದಿನಗಳಲ್ಲಿ ಗಡಿಗೆಗಳ ಖರೀದಿ ತುಸು ಹೆಚ್ಚಿದ್ದು, ಇದು ಕುಂಬಾರರ ಮೊಗದಲ್ಲಿ ತುಸು ಸಂತಸ ಮೂಡಿಸಿದೆ.
ಪ್ರಾಕತಿಕವಾಗಿ ನೀರನ್ನು ತಂಪಾಗಿಸುವ ವೈಶಿಷ್ಟ್ಯತೆಯ ಗಡಿಗೆಗಳಿಗೆ ಬಿಸಿಲಿನ ಈ ವೇಳೆಯಲ್ಲಿ ಸಹಜವಾಗಿ ತುಸು ಬೇಡಿಕೆ ಬಂದಿದೆ. ಆಧುನಿಕತೆ ಸೌಕರ್ಯ ಕ್ರಾಂತಿಯ ಈ ಕಾಲದಲ್ಲೂ ಕೆಲವರು ಸಾಂಪ್ರದಾಯಿಕ ಗಡಿಗೆಗಳ ಖರೀದಿಗೆ ಮುಂದಾಗಿರುವುದು ವಿಶೇಷವಾಗಿದೆ.