ಬಡವರ ಪರ ಬಜೆಟ್: ತಿಪ್ಪಣ್ಣಪ್ಪ ಕಮಕನೂರ

ಕಲಬುರಗಿ:ಫೆ.16: ಮುಖ್ಯಮಂತ್ರಿ, ಹಣಕಾಸು ಸಚಿವರಾದ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿರುವ ಬಜೆಟ್ ಬಡವರ ಪರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ್ದು 15ನೇ ಬಜೆಟ್ ಆಗಿದ್ದು, ಇದೊಂದು ಐತಿಹಾಸಿಕ ಬಜೆಟ್ ಆಗಿದೆ. ಸಿದ್ದರಾಮಯ್ಯನವರು 15ನೇ ಬಾರಿ ಬಜೆಟ್ ಮಂಡನೆ ಮಾಡಿರುವುದು ಗಿನ್ನಿಸ್ ದಾಖಲೆಯಾದಂತಾಗಿದೆ. ದೀನ, ದಲಿತ, ಶೋಷಿತ, ಬಡವರ ಪರ ಬಜೆಟ್ ಮಂಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮೀನುಗಾರಿಕೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮುಂದಿನ ವರ್ಷಗಳಲ್ಲಿ 3,000 ಕೋಟಿ ರೂ.ಗಳಷ್ಟು ಬೃಹತ್ ಗಾತ್ರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಿಎಂ ಘೋಷಣೆ ಮಾಡಿದ್ದು ಸ್ವಾಗತಾರ್ಹವಾಗಿದೆ. 2024-25ನೇ ಸಾಲಿನಲ್ಲಿ 10 ಸಾವಿರ ವಸತಿ ರಹಿತ ಮೀನುಗಾರರಿಗೆ ರಾಜ್ಯ ಸರಕಾರದ ವಿವಿಧ ವಸತಿ ಯೋಜನೆಗಳಲ್ಲಿ ಮನೆಗಳನ್ನು ನಿರ್ಮಿಸಲು ಸಹಾಯಧನ ನೀಡುವುದು ಮತ್ತು ಮೀನುಗಾರಿಕೆಗೆ ತೆರಳಿದಾಗ ಅಪಘಾತ ಅಥವಾ ಅನಾರೋಗ್ಯಕ್ಕೆ ಒಳಗಾಗುವ ಮೀನುಗಾರರಿಗೆ ತ್ವರಿತವಾಗಿ ದಡಕ್ಕೆ ತರಲು ರಾಜ್ಯದಲ್ಲಿ ಪ್ರಪ್ರಥಮ ಸಮುದ್ರ ಆಂಬುಲೆನ್ಸ್ 7 ಕೋಟಿ ರೂ. ವೆಚ್ಚದಲ್ಲಿ ಖರೀದಿಸುವುದು ಮತ್ತು ರಾಜ್ಯದಲ್ಲಿನ 16 ಮೀನು ಮರಿ ಉತ್ಪಾದನಾ ಕೇಂದ್ರಗಳ ಉನ್ನತೀಕರಣವನ್ನು ನಬಾರ್ಡ್ ಸಹಯೋಗದೊಂದಿಗೆ 20 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳುವ ಕುರಿತು ಸಿಎಂ ಘೋಷಣೆ ಮಾಡಿದ್ದಾರೆ. ಮೀನುಗಾರಿಕೆ ಇಲಾಖೆಗೆ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದ ಅನುದಾನ ಮೀಸಲಿಟ್ಟಿರುವುದಕ್ಕೆ ಕಮಕನೂರ ಹರ್ಷ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ನಗರಕ್ಕೆ ಕುಡಿಯುವ ನೀರು ಸರಬರಾಜಿಗಾಗಿ ಬೆಣ್ಣೆತೊರಾ ಜಲಾಶಯಕ್ಕೆ ಭೀಮಾ ಮತ್ತು ಕಾಗಿಣಾ ನದಿಗಳಿಂದ ನೀರು ತುಂಬಿಸುವ 365 ಕೋಟಿ ರೂ. ಮೊತ್ತದ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಕೈಗೆತ್ತಿಕೊಳ್ಳುತ್ತಿರುವುದು. ಚಿತ್ತಾಪುರ ತಾಲೂಕಿನ ಕೆರೆ ತುಂಬಿಸುವ ಯೋಜನೆ, ಜೇವರ್ಗಿ ತಾಲೂಕಿನಲ್ಲಿ ಬಾಂದಾರು ಹಾಗೂ ಕೆರೆ ತುಂಬಿಸುವ ಕಾಮಗಾರಿ ಕೈಗೆತ್ತಿಕೊಳ್ಳುವುದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಸರ್ಕಾರಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸುವುದು. ಕಲಬುರಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ಘಟಕವನ್ನು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ತಾಂತ್ರಿಕ ನೆರವಿನೊಂದಿಗೆ ಸ್ಥಾಪಿಸುವುದು. ಕಲಬುರಗಿಯ ಕೆ.ಜಿ.ಟಿ.ಟಿ.ಐ.ನಲ್ಲಿ ಸಿ.ಎನ್.ಸಿ (Computer Numerical Control ) ಯಂತ್ರವನ್ನು ಕೇಂದ್ರೀಕರಿಸುವ ಮೊದಲ ಶ್ರೇಷ್ಠತಾ ಕೇಂದ್ರವನ್ನು 16 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸುವುದು ಸೇರಿದಂತೆ ಕಲ್ಯಾಣ ಕರ್ನಾಟಕಕ್ಕೆ ಸಿದ್ದರಾಮಯ್ಯನವರು ಅಮೋಘ ಕೊಡುಗೆ ನೀಡಿದ್ದಾರೆ. ಈ ಬಜೆಟ್ ಉತ್ತಮ ಬಜೆಟ್ ಆಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಎಲ್ಲ ಸಚಿವರಿಗೆ, ಶಾಸಕರಿಗೆ ಅಭಿನಂದಿಸುವುದಾಗಿ ಕಮಕನೂರ ತಿಳಿಸಿದ್ದಾರೆ.