ಬಡವರ ನಿವೇಶನಕ್ಕಾಗಿ ಜಾಗ ಒತ್ತುವರಿ ವಿರೋಧಿಸಿ ಪ್ರತಿಭಟನೆ

ಮೈಸೂರು, ನ.19: ಬಡವರ ನಿವೇಶನಕ್ಕಾಗಿ ಕೊಟ್ಟಿರುವ ಒಂದು ಎಕರೆ 20 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಸಮಾಜ ಸೇವಕ ಗಿರೀಶ್ ಮಾದನಹಳ್ಳಿ ಕುಟುಂಬ ಸಮೇತ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಾದನಹಳ್ಳಿ ಗ್ರಾಮ ಹುಲ್ಲಹಳ್ಳಿ ಹೋಬಳಿ ನಂಜನಗೂಡು ತಾಲೂಕು ಮೈಸೂರು ಜಿಲ್ಲೆ ಆ ಗ್ರಾಮದಲ್ಲಿ 1 ಎಕ್ರೆ 20 ಗುಂಟೆ ಜಮೀನು ಸರ್ಕಾರದ್ದಾಗಿದ್ದು, ಅದನ್ನು ಅಲ್ಲಿನ ಗ್ರಾಮದವರಾದ ಮಲ್ಲಿಕಾರ್ಜುನ ಮಹಾದೇವಪ್ಪ, ಬಸವರಾಜು, ಶಿವಣ್ಣ ಎಂಬವರು ಒತ್ತುವರಿ ಮಾಡಿಕೊಂಡಿರುತ್ತಾರೆ. ಅದಕ್ಕಾಗಿ ನಾವು ನಂಜನಗೂಡು ತಾಲೂಕು ಅಧಿಕಾರಿಯವರಿಗೆ ಮತ್ತು ಮೈಸೂರು ಜಿಲ್ಲಾಧಿಕಾರಿಯವರಿಗೆ ಸಂಬಂಧಪಟ್ಟ 13/1ಎ, 1ಎ, 12/1, 12/2 ಎಲ್ಲಾ ದಾಖಲಾತಿಗಳನ್ನು ಸಾಕಷ್ಟು ಬಾರಿ ನೀಡಿ ಮನವಿ ಸಲ್ಲಿಸಿದ್ದೇವೆ. ಆದರೂ ಇದಕ್ಕೆ ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಶ್ರೀಮಂತರ ಮತ್ತು ಒತ್ತುವರಿದಾರರ ಆಮಿಷಕ್ಕೆ ಒಳಗಾಗಿರುತ್ತಾರೆ ಎಂದು ಆರೋಪಿಸಿದರು.
ಅದೇ ಗ್ರಾಮದವನಾದ ನಾನು ಮತ್ತು ನಮ್ಮ ಕುಟುಂಬವು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನಮಗೆ ಕೊಟ್ಟಿರುವ ಹಕ್ಕು ಪತ್ರದಂತೆ ಜಾಗವನ್ನು ಗುರುತಿಸಿಕೊಡುವಂತೆ ಕುಟುಂಬ ಸಮೇತ ಹೋರಾಟ ಮಾಡಿದ್ದೇನೆ. ನಮಗೆ ಯಾವುದೇ ರೀತಿಯ ಆದಾಯವಿಲ್ಲದೆ ಕೂಲಿ ಕಾರ್ಮಿಕರಾಗಿರುತ್ತೇವೆ. ನಮಗೆ ಹಿಂದಿನ ವರ್ಷ ಮಳೆಯಲ್ಲಿ ನಮ್ಮ ಮನೆ ಕುಸಿದು ಹೋಗಿದೆ. ಹೊಸದಾಗಿ ಕಟ್ಟಿರುವ ಮನೆಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಬಂದಿದ್ದರೂ ಒಂದು ಲಕ್ಷ ಮಾತ್ರ ಪರಿಹಾರ ನೀಡಿ ಇನ್ನೂ ಕೊಡಬೇಕಾದ ಹಣವನ್ನು ನೀಡದೆ ಹಾರಿಕೆಯ ಉತ್ತರ ನೀಡಲಾಗಿದೆ. ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದು 2 ವರ್ಷದಿಂದ ಶೌಚಾಲಯವನ್ನು ನಿರ್ಮಿಸಲು ಅವಕಾಶ ನೀಡುತ್ತಿಲ್ಲ. ಪ್ರತಿನಿತ್ಯ 1/2ಕಿಮೀ ನಡೆದುಕೊಂಡು ಬಯಲು ಪ್ರದೇಶಕ್ಕೆ ಬಹಿರ್ದೆಸೆಗೆ ಹೋಗಬೇಕಿದೆ. ಗುಡ್ಡಗಾಡು ಪ್ರದೇಶವಾಗಿದ್ದು ಚಿರತೆ ಹಾವಳಿ ಇರುತ್ತದೆ. ಇವರ ಕಿರುಕುಳದಲ್ಲಿ ಅಂತ್ಯ ಕಾಣುವ ಹಂತದಲ್ಲಿದ್ದೇವೆ. ಸಿಎಂ ಯಡಿಯೂರಪ್ಪನವರ ಕಂದಾಯ ಅಧಿಕಾರಿಗಳು ಸರ್ಕಾರಿ ಜಾಗವನ್ನು ಅಳತೆ ಮಾಡಿಕೊಡದೆ ಇರುವುದರಿಂದ ಒತ್ತುವರಿದಾರರಿಂದ ಜಾಗ ಸಿಗುವವರೆಗೂ ಧರಣಿ ಮಾಡುತ್ತೇವೆ ಎಂದು ತಿಳಿಸಿದರು.