ಬಡವರ ಧ್ವನಿಯಾಗುವ ಕಾಂಗ್ರೆಸ್ ಪಕ್ಷ ಪ್ರತೀ ಗ್ರಾ.ಪಂ.ನಲ್ಲಿ ಅಧಿಕಾರಕ್ಕೆ ಏರಲಿದೆ

ಸುಳ್ಯ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದವರಿಗೆ ಕಾಂಗ್ರೆಸ್ ಅಭಿನಂದನಾ ಸಭೆ

ಸುಳ್ಯ, ಜ.೫- ಕಾಂಗ್ರೆಸ್ ಅಧಿಕಾರಕ್ಕಾಗಿ ಬಂದ ಪಕ್ಷ ಅಲ್ಲ. ಬಡವರ ಧ್ವನಿಯಾಗಿ ಹುಟ್ಟಿಕೊಂಡ ಪಕ್ಷ. ಗ್ರಾ.ಪಂ. ಚುನಾವಣೆಯ ಇಲ್ಲಿಯ ಫಲಿತಾಂಶ ನೋಡಿದರೆ ಮುಂದೊಂದು ದಿನ ಸುಳ್ಯದ ಪ್ರತೀ ಗ್ರಾ.ಪಂ.ನಲ್ಲಿ ಕಾಂಗ್ರೆಸ್ ಬೆಂಬಲಿಗರು ಅಧಿಕಾರ ಹಿಡಿಯುವ ಮುನ್ಸೂಚನೆ ಇದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದರು.

ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಗ್ರಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿ ಗೆದ್ದವರಿಗೆ ಹಾಗೂ ಸ್ಪರ್ಧಿಸಿ ಪರಾಭವಗೊಂಡವರಿಗೆ ನಡೆದ ಅಭಿನಂದನಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ರಾಜಕೀಯ ಆರಂಭವಾಗುವುದೇ ಗ್ರಾಮ ಮಟ್ಟದಿಂದ. ಇಲ್ಲಿ ಇಂದು ಗೆದ್ದವರು ಮುಂದೊಂದು ದಿನ ರಾಜಕೀಯದಲ್ಲಿ ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಿದೆ. ಗೆದ್ದವರು ಸುಮ್ಮನಿರದೆ ಸರಕಾರಗಳು ಜಾರಿಗೊಳಿಸುವ ಯೋಜನೆಯನ್ನು ನೀವೆಲ್ಲರೂ ಪ್ರತೀ ಮನೆಗೆ ಸಿಗುವಂತೆ ಮಾಡಬೇಕು. ಜತೆಗೆ ಗ್ರಾಮ ಮಟ್ಟದಿಂದಲೇ ಪಕ್ಷವನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟುವ ಕೆಲಸವನ್ನು ಇಂದಿನಿಂದಲೇ ಮಾಡಬೇಕು. ಮುಂದಿನ ಚುನಾವಣೆಯಲ್ಲೇ ನೀವೆ ಅಭ್ಯರ್ಥಿಗಳಾಗಬೇಕು ಎನ್ನುವ ಆಶಯವನ್ನು ಗ್ರಾಮಸ್ಥರು ಹೇಳುವ ರೀತಿಯ ಕೆಲಸ ಮಾಡಿ ತೋರಿಸಬೇಕು ಎಂದು ಖಾದರ್ ಹೇಳಿದರು.

ಎ.ಐ.ಸಿ.ಸಿ ಸದಸ್ಯ, ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕೆ.ಪಿ.ಸಿ.ಸಿ. ಸುಳ್ಯ ಉಸ್ತುವಾರು ಕೃಷ್ಣಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಕೆ.ಪಿ.ಸಿ.ಸಿ. ಮಾಜಿ ಸದಸ್ಯೆ ರಾಜೀವಿ ರೈ, ಜಿ.ಪಂ. ಮಾಜಿ ಸದಸ್ಯೆ ಸರಸ್ವತಿ ಕಾಮತ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ್, ನ.ಪಂ. ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಭವಾನಿಶಂಕರ್ ಕಲ್ಮಡ್ಕ ವೇದಿಕೆಯಲ್ಲಿದ್ದರು. ಗ್ರಾ.ಪಂ.ಗಳಿಗೆ ಸ್ಪರ್ಧಿಸಿ ಗೆದ್ದ ಹಾಗೂ ಪರಾಭವಗೊಂಡ ಅಭ್ಯರ್ಥಿಗಳನ್ನು ಹಾರ, ಶಾಲು, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.