ಬಡವರ ತಾಯಿ ಇಂದಿರಾಜೀ; 103 ನೇ ಪುಣ್ಯಸ್ಮರಣೆ


ದಾವಣಗೆರೆ.ನ.೧೯; ದೇಶದ ಜನತೆ ಇಂದಿಗೂ ಕೂಡ ಇಂದಿರಾಗಾಂದಿಯವರನ್ನು ಬಡವರ ತಾಯಿ ಎಂದೇ ನೆನಪು ಮಾಡಿಕೊಳ್ಳುತ್ತಾರೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಡಿ.ಬಸವರಾಜ್ ಹೇಳಿದರು. ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಛೇರಿ ಎಸ್.ಎಸ್.ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿಗಳಾದ ದಿ. ಇಂದಿರಾಗಾಂಧಿಯವರ ೧೦೩ ನೇ ಜನ್ಮದಿನ ಸಮಾರಂಭದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಶ್ರೀಮತಿ ಇಂದಿರಾಜಿ ಅವರು ಬಾಲ್ಯದಿಂದಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡು ಗಾಂಧೀಜಿ ಹಾಗೂ ನೆಹರುರವರಿಗೆ ನೆರವಾಗುತ್ತಿದ್ದರು. ಸ್ವಾತಂತ್ರ್ಯದ ನಂತರ ತಮ್ಮ ತಂದೆಯಾದ ನೆಹರೂಜಿಯವರ ಜೊತೆಗೂಡಿ ದೇಶವಿದೇಶಗಳಿಗೆ ತೆರಳಿ ಅನುಭವ ಪಡೆದುಕೊಂಡರು. ಬಳಿಕ ದೇಶದ ಚುಕ್ಕಾಣಿ ಹಿಡಿದು ದಿಟ್ಟತನದಿಂದ ಆಡಳಿತ ನಡೆಸಿದ ಧೀಮಂತ ಮಹಿಳೆ.ಹೆಣ್ಣು ಎಂದಿಗೂ ಅಬಲೆಯಲ್ಲ ಆಕೆ ಸಬಲೆ ಎಂದು ತೋರಿಸಿಕೊಟ್ಟಿದ್ದಾರೆ. ೧೫ ವರ್ಷಗಳ ಕಾಲ ಪ್ರಧಾನಿಯಾಗಿ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡ್ಯೊಯ್ದಿದ್ದಾರೆ.

ಈ ಅವಧಿಯಲ್ಲಿ ಬಡವರ ಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ.೨೦ ಅಂಶಗಳ ಕಾರ್ಯಕ್ರಮ ಆಯೋಜಿಸುವ ಮೂಲಕ ಬಡವರಿಗೆ ಸಾಕಷ್ಟು ನೆರವು ನೀಡಿದ್ದರು. ಗರೀಬಿ ಹಟಾವೋದಂತಹ ಕಾರ್ಯಕ್ರಮ ಹಮ್ಮಿಕೊಂಡು ಬಡತನ ನಿರ್ಮೂಲನೆಗೆ ಶ್ರಮಿಸಿದ್ದರು.ಪಾಕಿಸ್ತಾನದೊಂದಿಗೆ ಯುದ್ದ ಘೋಷಿಸಿ ವೈರಿಗಳನ್ನು ಹಿಮ್ಮೆಟ್ಟಿಸಿದ್ದ ಧೀರ ಮಹಿಳೆ.ಬ್ಯಾಂಕ್ ಗಳ ರಾಷ್ಟ್ರೀಕರಣ ಮಾಡುವ ಮೂಲಕ ಶ್ರೀ ಸಾಮಾನ್ಯರಿಗೂ ಅನುಕೂಲ ಮಾಡಿಕೊಟ್ಟಿದ್ದರು. ಅನೇಕ ಅಭಿವೃದ್ದಿ ಕೆಲಸ ಮಾಡಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ ಮಾತನಾಡಿ ಉಳುವವನೆ ಹೊಲದೊಡೆಯ ಎಂಬ ಕಾರ್ಯಕ್ರಮದ ಮೂಲಕ ಇಂದಿರಾಜಿ ಬಡವರಿಗೆ ನೆರವು ನೀಡಿದ್ದರು ಆದರೆ ಇಂದಿನ ಬಿಜೆಪಿ ಸರ್ಕಾರ ಉಳ್ಳವನೇ ಹೊಲದೊಡೆಯ ಎಂಬ ಕಾನೂನು ಜಾರಿ ಮಾಡುವ ಮೂಲಕ ಮಾರಾಟ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಹಲವಾರು ಯೋಜನೆಗಳನ್ನು ಖಾಸಗೀಕರಣ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪ್ರದಾನಿ ಮೊದಿಯವರು ಇಂದಿರಾಗಾಂಧಿ ಹಾಗೂ ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನೇಲ್ಲಾ ಖಾಸಗೀರಣ ಮಾಡುತ್ತಿದ್ದಾರೆಂದರು.
ಈ ವೇಳೆ ಭವ್ಯ ನರಸಿಂಹಮೂರ್ತಿ,ಪಾಲಿಕೆ ಸದಸ್ಯರಾದ ಕೆ.ಚಮನ್ ಸಾಬ್,ಸುಧಾ ಇಟ್ಟಿಗುಡಿ, ಮುಖಂಡರಾದ ಬಿ.ಹೆಚ್ ವೀರಭದ್ರಪ್ಪ,ಮೈನುದ್ದೀನ್,ಲಿಯಾಖತ್,ಅನಿತಾಬಾಯಿ,ಸುಷ್ಮಾ ಪಾಟೀಲ್,ಇಬ್ರಾಹಿಂ ಖಲೀಲ್,ರಹೀಂ ಮತ್ತಿತರರಿದ್ದರು.