ಬಡವರ ಜೀವದ ಜೊತೆ ಸರ್ಕಾರದ ಚೆಲ್ಲಾಟ:ಮುಬೀನ್

ಕಲಬುರಗಿ:ಜ.21:ಡಬಲ್ ಇಂಜಿನ್ ಸರ್ಕಾರ ರೈತರು, ಕೂಲಿ ಕಾರ್ಮಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಹಗರಣಗಳಲ್ಲೇ ಕಾಲಹರಣ ಮಾಡುತ್ತಿರುವ ಸರ್ಕಾರ ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷರಾದ ಮುಬೀನ್ ಅಹಮದ್ ಹೇಳಿದರು.

ರಾಜ್ಯ ಬಿಜೆಪಿ ಸರ್ಕಾರ, ಕೇಂದ್ರ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಪಿಎಸ್‍ಐ ನೇಮಕಾತಿ ಹಗರಣ, ರಾಘವೇಂದ್ರ ಬ್ಯಾಂಕ್ ಹಗರಣ, ಪದವಿ ಕಾಲೇಜು ಉಪನ್ಯಾಸಕರ ನೇಮಕಾತಿ ಹಗರಣ, ಶಿಕ್ಷಕರ ನೇಮಕಾತಿ ಹಗರಣ ಹೀಗೆ ಸಾಲುಸಾಲು ಹಗರಣ ನಡೆಸಿರುವ ರಾಜ್ಯ ಸರ್ಕಾರ ಜನರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ಕೊರೊನಾ ಸಂದರ್ಭದಲ್ಲಿ ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವೆಂಟಿಲೇಟರ್ ಸೇರಿ ವೈದ್ಯಕೀಯ ಉಪಕರಣ ಖರೀದಿಯಲ್ಲೂ ರಾಜ್ಯದ ಮಂತ್ರಿಗಳು ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿವೆ. ಆದರೂ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.

ಕಲಬುರ್ಗಿ ಜಿಲ್ಲೆಯಲ್ಲಿ ಪ್ರಧಾನಿಗಳು ಭೇಟಿ ನೀಡಿದರು ಆದರೆ ರೈತರ ಬಹುದೊಡ್ಡ ಸಮಸ್ಯೆ ಆದ ತೊಗರಿ ಬೆಳೆಯ ಪರಿಹಾರ ಬಗ್ಗೆ ಪ್ರಧಾನಿಯವರು ಮಾತನಾಡಿಲ್ಲ. ಕೇವಲ ಚುನಾವಣೆ ಪ್ರಚಾರಕ್ಕಾಗಿ ಸಣ್ಣ ಪುಟ್ಟ ಯೋಜನೆಗಳಿಗೆ ಉದ್ಘಾಟನೆ ಮಾಡಲು ಬರುವುದು ಒಂದು ರೀತಿಯ ಜಿಲ್ಲೆಗೆ ಅವಮಾನ ಎಂದು ಹೇಳಿದರು.