ಬಡವರ, ಜನಸಾಮಾನ್ಯರ ನೆರವಿಗೆ ಸರಕಾರ ಮುಂದಾಗಲಿ

ಮಂಗಳೂರು, ಎ.೨೮- ಕೋವಿಡ್ ಪಿಡುಗು ಪ್ರಪಂಚದೆಲ್ಲೆದೆ ಹರಡುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ನಮ್ಮ ದೇಶದಲ್ಲೂ ಎರಡನೆಯ ಬಾರಿಗೆ ಕರೋನಾ ಹರಡುತ್ತಿದ್ದು ಅದನ್ನೆದುರಿಸಲು ಸರಕಾರಗಳು ವಿಫಲವಾಗುತ್ತಿವೆ. ಕೋವಿಡ್ ಪೀಡಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ಡುಗಳಿಲ್ಲದೆ ಅಥವಾ ಅಗತ್ಯ ಆಕ್ಷಿಜನ್ ಹಾಗು ಚುಚ್ಚುಮದ್ದುಗಳಿಲ್ಲದೆ ಅನೇಕರು ಪ್ರಾಣ ಕಳೆದುಕೊಂಡಿರುವುದು ವರದಿಯಾಗಿದೆ. ಕಳೆದ ಸಲ ಕೋವಿಡ್ ವ್ಯಾಪಕವಾಗಿ ಹರಡಿದಾಗ ಆದ ಅನುಭವಗಳಿಂದ ಈ ಸಲದ ಎದುರಿಸುವಿಕೆ ಸುಲಭವಾಗಬೇಕಿತ್ತು. ಆದರೆ ಹಾಗಾಗಲಿಲ್ಲ.
ಕರೋನ ವಿರೋಧಿ ಲಸಿಕೆಗಳ ಲಭ್ಯತೆಯೂ ಕುಂಠಿತವಾಗಿರುವುದರಿಂದ ಲಸಿಕೆ ಪಡೆಯಲು ತೆರಳಿದ ಅನೇಕರು ಕೇಂದ್ರದಿಂದ ಕೇಂದ್ರಕ್ಕೆ ಅಲೆದಾಡುತ್ತಿದ್ದಾರೆ ಹಾಗೂ ಕೆಲವರು ಲಸಿಕೆ ಸಿಗದೆ ವಾಪಸಾಗುತ್ತಿದ್ದಾರೆ. ಇವೆಲ್ಲದರ ಬಗ್ಗೆ ಸರಕಾರ ಕ್ರಮ ಕೈಗೊಳ್ಳುತ್ತಿದ್ದರೂ ಸಮಸ್ಯೆ ನಿವಾರಣೆಯಾಗುತ್ತಿಲ್ಲ.
ಈ ಎಲ್ಲಾ ನ್ಯೂನತೆಗಳನ್ನು ಸರಿಪಡಿಸುವುದರ ಬದಲಾಗಿ ಸರಕಾರ ಲಾಕ್‌ಡೌನ್ ಘೋಷಿಸಿದೆ. ಹಿಂದಿನ ಲಾಕ್‌ಡೌನಿಂದಾಗಿ ಬಡವರು, ಕಾರ್ಮಿಕರು ಹಾಗೂ ಜನಸಾಮಾನ್ಯರು ಅನುಭವಿಸಿದ ಕಷ್ಟ-ಕಾರ್ಪಣ್ಯಗಳು ಅಷ್ಟಿಷ್ಟಲ್ಲ. ಈ ಲಾಕ್‌ಡೌನಿನಲ್ಲೂ ಅಂತಹದೇ ಸಮಸ್ಯೆಗಳು ಮತ್ತೆ ಎದುರಾಗಲಿವೆ. ಈ ಬಗ್ಗೆ ಸರಕಾರ ಕೂಡಲೆ ಕ್ರಮ ವಹಿಸಿ ಬಡವರಿಗೆ, ಕಾರ್ಮಿಕರಿಗೆ ಹಾಗೂ ಕೆಳವರ್ಗದ ಜನಸಾಮಾನ್ಯರಿಗೆ ರೇಷನ್ ಹಾಗೂ ಅಗತ್ಯ ವಸ್ತುಗಳು ಉಚಿತವಾಗಿ ಸಿಗುವಂತೆ ಮಾಡಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ.