ಬಡವರ ಆರೋಗ್ಯ ರಕ್ಷಣೆ ಗೆ ಆಗ್ರಹ

ಕೋಲಾರ,ಏ,೨- ಏಪ್ರಿಲ್ ತಿಂಗಳಿನಿಂದ ಏರಿಕೆಯಾಗುವ ಅಗತ್ಯ ಔಷಧಿಗಳ ಬೆಲೆ ನಿಯಂತ್ರಣಕ್ಕೆ ಕಾನೂನು ರಚನೆ ಮಾಡಿ ಬಡವರ ಆರೋಗ್ಯ ರಕ್ಷಣೆ ಮಾಡಬೇಕೆಂದು ರೈತಸಂಘದಿಂದ ಮುಳಬಾಗಿಲು ತಾಲೂಕು ಆರೋಗ್ಯ ಅಧಿಕಾರಿಗಳ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ನೀಡಿ ಆಗ್ರಹಿಸಲಾಯಿತು.
ರೈತಸಂಘದ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಗೆ ಕೃಷಿ ಕ್ಷೇತ್ರದ ಅವೈಜ್ಞಾನಿಕ ಕಾನೂನು ಜಾರಿಗೆ ತಂದು ದಿನೇದಿನೇ ದೇಶದ ಬಡಜನರ ಹಕ್ಕುಗಳನ್ನು ಶ್ರೀಮಂತರಿಗೆ ಮಾರಾಟ ಮಾಡುವ ಜೊತೆಯಲ್ಲಿ ಬಡವರ ಆರೋಗ್ಯವನ್ನು ಔಷಧಿ ಬೆಲೆ ಏರಿಕೆ ಮಾಡಿ ಕಸಿಯುತ್ತಿರುವ ಕೇಂದ್ರ, ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಕೈಬಿಡದಿದ್ದರೆ ಚುನಾವಣೆಯಲ್ಲಿ ಮತ ಕೇಳಲು ಗ್ರಾಮೀಣ ಪ್ರದೇಶಕ್ಕೆ ಬರುವ ರಾಜಕಾರಣಿಗಳ ಮುಖಕ್ಕೆ ಸಗಣಿ ಬಳಿಯುವ ಎಚ್ಚರಿಕೆ ನೀಡಿದರು.
ಬಡ, ರೈತ, ಕೂಲಿ ಕಾರ್ಮಿಕರ ಆರೋಗ್ಯಕ್ಕೆ ಬೇಕಾದಂತಹ ೩೦೦ಕ್ಕೂ ಹೆಚ್ಚು ಔಷಧಿಗಳ ಬೆಲೆ ಏರಿಕೆ ಏಪ್ರಿಲ್ ತಿಂಗಳಿಂದ ಶೇ.೧೨ರಷ್ಟು ಏರಿಕೆ ಮಾಡುತ್ತಿರುವುದು ಜನಸಾಮಾನ್ಯರನ್ನು ಯಾವುದೇ ಮದ್ದು ಗುಂಡಿಲ್ಲದೆ ನಿಧಾನವಾಗಿ ವಿಷ ನೀಡುವ ಮುಖಾಂತರ ಸರ್ಕಾರವೇ ಬಡವರನ್ನು ಹಾಳು ಮಾಡಲು ಔಷಧಿ ಧರವನ್ನು ಏರಿಕೆ ಮಾಡುವಂತಿದೆ ಎಂದು ಆರೋಪಿಸಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಭಾರತದಲ್ಲಿ ಔಷಧಿಗಳ ಬೆಲೆಯನ್ನು ನಿಯಂತ್ರಿಸುವ ರಾಷ್ಟ್ರೀಯ ಔಷಧಿ ಬೆಲೆ ಪ್ರಾಧಿಕಾರವೇ (ಎನ್.ಪಿ.ಪಿ.ಎ.) ಈ ಏರಿಕೆಗೆ ಸಮ್ಮತಿಯನ್ನು ಮೊಹರನ್ನು ಒತ್ತಿದೆ. ಕೇಂದ್ರ ಸರ್ಕಾರವು ಸೂಚಿಸಿದಂತೆ ಸಗಟು ಬೆಲೆ ಸೂಚ್ಯಾಂಕದ (ಡಬ್ಲ್ಯೂ.ಪಿ.ಐ.) ವಾರ್ಷಿಕ ಬದಲಾವಣೆಯ ೨೦೨೨ರ ಶೇ.೧೨.೧೨ ರಷ್ಟು ಇದೆ ಎಂದು ಎನ್.ಪಿ.ಪಿ.ಎ. ತಿಳಿಸಿದೆ.
ಇದಕ್ಕೆ ಅನುಗುಣವಾಗಿ ನೋವು ನಿವಾರಕಗಳು, ಸೋಂಕು ನಿವಾರಕಗಳು ಹೃದಯಕ್ಕೆ ಸಂಬಂಧಿಸಿದಂತೆ ಔಷಧಿಗಳ ಆಂಟಿ ಬಯೋಟೆಕ್‌ಗಳು ಸೇರಿದಂತೆ ಅಗತ್ಯ ಔಷಧಿಗಳ ಬೆಲೆಗಳನ್ನು ಏರಿಕೆ ಮಾಡುವ ಉದ್ದೇಶವಾದರೂ ಏನಿತ್ತು ಎಂದು ಪ್ರಶ್ನಿಸಿದರು.
ಪ್ಯಾರಾಸಿಟಿಮಲ್, ಆಂಟಿ ಬಯೋಟಿಕ್, ಅಜಿತೋಮೈಸಿನ್, ಬ್ಯಾಕ್ಟೀರಿಯಲ್, ಸೋಂಕು ನಿವಾರಕಗಳು ಸೇರಿದಂತೆ ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಪ್ರಮುಖ ಔಷಧಿಗಳೇ ಬಡವರ ಕೈಗೆ ಎಟುಕದಂತೆ ಸುಮಾರು ೩೮೦ ಔಷಧಿಗಳ ಬೆಲೆ ಏರಿಕೆ ಮಾಡಿದರೆ ಇನ್ನು ಔಷಧಿ ದುಬಾರಿ ವೆಚ್ಚ ನೀಡಿ ಕೊಳ್ಳಲಾಗದೆ ಇತ್ತ ಆರೋಗ್ಯವೂ ಸರಿಪಡಿಸಿಕೊಳ್ಳಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ.