ಬಡವರ ಅಭಿವೃದ್ಧಿಯೇ ಡಬಲ್ ಇಂಜಿನ್ ಸರ್ಕಾರದ ಗುರಿ: ಮೋದಿ

ಚಿಕ್ಕಬಳ್ಳಾಪುರ,ಮಾ.೨೫:ಬಡವರ ಅಭಿವೃದ್ಧಿಯೇ ಡಬಲ್ ಇಂಜಿನ್ ಸರ್ಕಾರದ ಪರೋಮೋಚ್ಛ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಅವರು ಹೇಳಿದರು. ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಿರ್ಮಿಸಿರುವ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕಾಲೇಜು, ಸತ್ಯಸಾಯಿ ರಾಜೇಶ್ವರಿ ಭವನವನ್ನೂ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯರವರ ಜನ್ಮಸ್ಥಳವಾಗಿದೆ. ಇಂತಹ ಪುಣ್ಯಭೂಮಿಗೆ ಬಂದಿದ್ದು ನನ್ನ ಸೌಭಾಗ್ಯ ಎಂದರು.ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಡಬಲ್ ಇಂಜಿನ್ ಸರ್ಕಾರ ಬಡವರ ಅಭಿವೃದ್ಧಿಗೆ ಒತ್ತು ನೀಡಿದೆ. ಬಡವರ ಹಿತ ಕಾಯ್ದು ಅವರ ಅಭಿವೃದ್ಧಿ ನಮ್ಮ ಪರಮೋಚ್ಛ ಗುರಿಯಾಗಿದೆ ಎಂದರು.ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡ ರೋಗಿಗಳಿಗೆ ಅನುಕೂಲವಾಗಿದೆ. ಕರ್ನಾಟಕದಲ್ಲೂ ಲಕ್ಷಾಂತರ ಬಡವರಿಗೆ ಈ ಯೋಜನೆಯ ಲಾಭ ಸಿಕ್ಕಿದೆ ಎಂದರು.
ಬಡವರ ಆರೋಗ್ಯದ ಜತೆ ಜತೆಯೆ ಡಬಲ್ ಇಂಜಿನ್ ಸರ್ಕಾರ ಮಹಿಳೆಯರ ಕಲ್ಯಾಣಕ್ಕೂ ಒತ್ತು ನೀಡಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ತತ್ವದಡಿ ದೇಶವನ್ನು ಪ್ರಗತಿಯತ್ತ ಮುನ್ನಡೆಸಿದ್ದೇವೆ ಎಂದರು.ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಅಂದರೆ ೨೦೧೪ಕ್ಕೂ ಮೊದಲು ದೇಸದಲ್ಲಿ ೩೦೦ಕ್ಕಿಂತ ಕಡಿಮೆ ವೈದ್ಯಕೀಯ ಕಾಲೇಜುಗಳಿದ್ದವು. ಇಂದು ದೇಶದಲ್ಲಿ ೬೫೦ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. ಕರ್ನಾಟಕದಲ್ಲೇ ಸುಮಾರು ೭೦ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ಇದು ಡಬಲ್ ಇಂಜಿನ್ ಸರ್ಕಾರದಿಂದ ಆಗಿರುವ ಪ್ರಗತಿ ಎಂದರು.
ಸತ್ಯಸಾಯಿ ಆಶ್ರಮದಿಂದ ಆಗಿರುವ ಶೈಕ್ಷಣಿಕ, ಸಾಮಾಜಿಕ ಕಾರ್ಯಗಳು ಇಡೀ ದೇಶಕ್ಕೆ ಮಾದರಿ ಎಂದು ಅವರು, ಸಾಯಿಬಾಬಾ ಅವರ ಜತೆಗೆ ನನಗೆ ನಿಕಟ ಸಂಬಂಧವಿತ್ತು ಎಂದು ನೆನಪಿಸಿಕೊಂಡರು.
ಮುಖ್ಯಮಂತ್ರಿ ಮಾತು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ವಿಶ್ವದಲ್ಲಿಯೇ ಪ್ರಧಾನಿ ನರೇಂದ್ರ ಮೋದಿರವರು ವಿಶ್ವಗುರು ಎಂಬುದಕ್ಕೆ ಪಾತ್ರರಾಗಿದ್ದಾರೆ. ಅವರ ಸಮರ್ಥ ಆಡಳಿತದಲ್ಲಿ ದೇಶ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಸಾಧಿಸಿದೆ. ನಾನು
ಇಲ್ಲಿಗೆ ಮೂರನೇ ಭಾರಿ ಆಗಮಿಸಿದ್ದು, ಒಂದು ವರ್ಷದ ಹಿಂದೆ ಬಂದಿದ್ದಾಗ ಮಧುಸೂಧನಾ ಸಾಯಿರವರು ಹೇಳಿದಂತೆ ಒಂದು ವರ್ಷದೊಳಗೆ ಸುವ್ಯವಸ್ಥಿತ ಸೇವಾ ಮನೋಭಾವನೆಯ ವೈದ್ಯಕೀಯ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಸಂಸ್ಥೆಯ ಸದ್ಗುರು ಮದುಸೂಧನ ಸಾಯಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರಿಂದಲೇ ಉದ್ಘಾಟಿಸಬೇಕು ಎಂಬ ನಮ್ಮ ಸಂಕಲ್ಪ ಈಡೇರಿದೆ. ಇದೇ ರೀತಿ ೨೦೨೫ರಲ್ಲಿ ಮತ್ತೊಂದು ವೈದ್ಯಕೀಯ ಸಂಶೋಧನಾ ಸಂಸ್ಥೆಯನ್ನು ನಿರ್ಮಿಸಲಿದ್ದು ಅದರ ಉದ್ಘಾಟನೆಯನ್ನೂ ಸಹ ನರೇಂದ್ರ ಮೋದಿಯವರೇ ಮಾಡಬೇಕು ಎಂದು ಆಶಯವಾಗಿದೆ ಎಂದು ತಿಳಿಸಿದರು.
ಕಳೆದ ವರ್ಷ ಕೇಂದ್ರ ಗೃಹ ಸಚಿವ ಅಮಿತ್ ಶಾ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕಾಲೇಜು ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಒಂದೇ ವರ್ಷದಲ್ಲಿ ಭವ್ಯವಾದ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಇಲ್ಲಿ ವೈದ್ಯಕೀಯ ಶಿಕ್ಷಣ, ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದರು.
ಸರ್ ಎಂ. ವಿಶ್ವೇಶ್ವರಯ್ಯನವರಿಗೆ ನಮನ
ಕಾರ್ಯಕ್ರಮಕ್ಕೂ ಮೊದಲು ಪ್ರಧಾನಿ ಮೋದಿ ಅವರು ಸರ್ ಎಂ. ವಿಶ್ವೇಶ್ವರಯ್ಯರವರ ಸಮಾಧಿಗೆ ತೆರಳಿ ನಮನ ಸಲ್ಲಿಸಿದರು.
ಮುದ್ದೇನಹಳ್ಳಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾಗತಿಸಿದರು. ಆನಂತರ ಸರ್.ಎಂ.ವಿಶ್ವೇಶ್ವರಯ್ಯ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಮೋದಿ ಆಗಮನದ ಹಿನ್ನಲೆಯಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಬಿ.ಎನ್.ನರಸಿಂಹಮೂರ್ತಿ ಉಪಸ್ಥಿತರಿದ್ದರು.