ಬಡವರು-ಶ್ರೀಮಂತರ ನಡುವೆ ಬೆಸುಗೆ ಕೆಲಸದಲ್ಲಿ ಧರ್ಮಸ್ಥಳ ಟ್ರಸ್ಟ್:ಡಾ.ವೀರೇಂದ್ರ ಹೆಗ್ಗಡೆ

ಅಫಜಲಪುರ: ನ.16:ಸಾಕಷ್ಟು ಜನ ಬಡತನದಲ್ಲೇ ಉಳಿಸಿದ್ದು, ಅನೇಕರು ಶ್ರೀಮಂತರಾಗಿಯೇ ಉಳಿದಿದ್ದಾರೆ. ಬಡವರು-ಶ್ರೀಮಂತರ ನಡುವೆ ಬೆಸುಗೆಯಾಗಿ ಇಬ್ಬರನ್ನು ಒಟ್ಟಿಗೆ ತರುವ ಕಾರ್ಯದಲ್ಲಿ ನಮ್ಮ ಟ್ರಸ್ಟ್ ತೊಡಗಿಕೊಂಡಿದೆ. ಮಹಿಳಾ ಸಬಲೀಕರಣ, ಜನರನ್ನು ಸ್ವಾವಲಂಬಿ ಹಾಗೂ ಆರ್ಥಿಕ ಸಶಕ್ತರನ್ನಾಗಿ ಮಾಡುವುದೇ ನಮ್ಮ ಧ್ಯೇಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ತಿಳಿಸಿದರು.
ಪಟ್ಟಣದ ಶೆಟ್ಟಿ ಫಂಕ್ಷನ್ ಹಾಲ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಕಲಬುರಗಿ ಘಟಕದ ನೇತೃತ್ವದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ಸ್ವಸಹಾಯ ಸಂಘಗಳ ಸಮಾವೇಶ ಹಾಗೂ ಸಮುದಾಯ ಕಾರ್ಯಕ್ರಮಗಳು ಸೌಲಭ್ಯ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಳೆದ 52 ವರ್ಷಗಳ ಹಿಂದೆ ಭೀಕರ ಬರಗಾಲದ ಸಂದರ್ಭದಲ್ಲಿ ಈ ಭಾಗದ ಪವಿತ್ರ ಯಾತ್ರಾ ಸ್ಥಳವಾಗಿರುವ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ ಆ ಸಮಯದಲ್ಲಿ ಈ ಭಾಗದ ಜನರು ಒಂದು ಹೊತ್ತಿನ ಊಟಕ್ಕೂ ಸಹ ಪರದಾಡುವ ಪರಸ್ಥಿತಿ ಇತ್ತು.ಆದರೆ ಕ್ರಮೇಣವಾಗಿ ಈ ಭಾಗದ ಜನರು ಆರ್ಥಿಕವಾಗಿ ಹಾಗೂ ಇತರೆ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬಂದಿರುವುದು ಸಂತಸ ತಂದಿದೆ. ಆದರೆ ಇನ್ನೂ ಬಹಳಷ್ಟು ಈ ಭಾಗ ಅಭಿವೃದ್ಧಿ ಆಗಬೇಕಾಗಿದೆ. ಇಲ್ಲಿಯ ಜನರು ಬಹಳಷ್ಟು ಮುಗ್ಧರು ಆದರೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.ಇದರಿಂದ ನಾವು ಇತರರಿಗೆ ಮಾದರಿಯಾಗುತ್ತದೆ.ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 14 ಸಾವಿರ ಸಂಘಗಳಿಗೆ ಹಾಗೂ ಅಫಜಲಪುರ ತಾಲೂಕಿನ 2 ಸಾವಿರ ಸಂಘಗಳಿಗೆ ಸಾಲವನ್ನು ನೀಡಲಾಗಿದೆ. ಜನರ ಏಳಿಗೆಗೆ ಸರಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಮಠಗಳು, ಇತರೆ ಸಂಸ್ಥೆಗಳೂ ಈ ದಿಸೆಯಲ್ಲಿ ಯತ್ನಿಸುತ್ತೇವೆ. ಫಲಾನುಭವಿಗಳಾದ ಜನರು ತಮ್ಮ ಪಾಲಿನ ಶ್ರಮವನ್ನೂ ಹಾಕಬೇಕಾಗುತ್ತದೆ. ಸರಕಾರದ ನೆರವನ್ನು, ಮಠ ಮತ್ತಿತರ ಸಂಸ್ಥೆಗಳ ನೆರವನ್ನು ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು, ಸ್ವಸಹಾಯ ಸಂಘಗಳ ಸದಸ್ಯರು ನಿಯಮಿತ ಸಭೆ ನಡೆಸಬೇಕು. ಉಳಿತಾಯ ಮಾಡಬೇಕು,ಆದಾಯೋತ್ಪನ್ನ ಚಟುವಟಿಕೆ ಕೈಗೊಂಡು ಸಾವಲಂಬಿಯಾಗಬೇಕು. ಉತ್ತಮ ಬದುಕು ಕಟ್ಟಿಕೊಳ್ಳಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಧರ್ಮಸ್ಥಳ ಸಂಸ್ಥೆಯು ಒದಗಿಸಿಕೊಡುತ್ತದೆ. ಆದರೆ ಅದನ್ನು ಬಳಸಿಕೊಳ್ಳುವ ಫಲಾನುಭವಿಗಳಲ್ಲಿ ಎಚ್ಚರ ಇರಬೇಕು. ಫಲಾನುಭವಿಗಳು ಜಾಗೃತರಾಗಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡರಷ್ಟೇ ಬದುಕು ಹಸನಾಗಬಲ್ಲದು ಎಂದು ಹೇಳಿದರು.ಇದಕ್ಕೂ ಮುನ್ನ ಪೂಜ್ಯರು ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಹಾಗೂ ಅಫಜಲಪುರ ಮಳೇಂದ್ರ ಶಿವಾಚಾರ್ಯರ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಕಾರ್ಯಕ್ರಮದಲ್ಲಿ ಕೆರೆ ಕಾಮಗಾರಿ ಮಂಜೂರಾತಿ ಪತ್ರ,ಶುದ್ದಗಂಗಾ ಘಟಕ ಮಂಜೂರಾತಿ ಪತ್ರ, ಪ್ರಗತಿನಿಧಿ ವಿತರಣೆ, ಹಾಲು ಉತ್ಪಾದಕರ ಸಂಘಗಳಿಗೆ ಅನುದಾನ, ಶಿಷ್ಯ ವೇತನ ಮಂಜೂರಾತಿ ಪತ್ರಗಳನ್ನು ಹಾಗೂ ಶಾಲಾ-ಕಾಲೇಜುಗಳಿಗೆ ಡೆಸ್ಕ್ ವಿಸರಣೆ ಮಾಡಲಾಯಿತು.

ಶಾಸಕ ಎಂ.ವೈ.ಪಾಟೀಲ್ ಮಾತನಾಡಿ ಸರ್ಕಾರ ಮಾಡದ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಅಭೂತಪೂರ್ವವಾಗಿ ಸೇವಾ ಕಾರ್ಯ ಮಾಡುತ್ತಿದೆ. ಮಹಿಳಾ ಸಬಲೀಕರಣ ಜೊತೆಗೆ ಕೆರೆಗೆ ಹೂಳೆತ್ತುವ, ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆ, ಮಠಗಳನ್ನೂ ಅಭಿವೃದ್ಧಿಪಡಿಸುವುದು, ಅಂಗವಿಕಲರಿಗೆ ವೀಲ್ಚೇರ್ ಕೊಡುವುದು, ವಿಧವಾ ವೇತನ, ಶಿಷ್ಯವೇತನ ಹೀಗೆ ಅನೇಕ ಸಮಾಜಮುಖಿ ಸೇವಾ ಕಾರ್ಯ ಕೈಗೊಳ್ಳುತ್ತಿದೆ. ಈ ಭಾಗದಲ್ಲಿ ಅನೇಕ ಕೆರೆಗಳನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಮಾಡಿದೆ ಇದೇ ರೀತಿ ನಾನು ಸಹ ನೂರು ಕಿಲೋಮೀಟರ್ ಒಂದು ಕೆರೆ ನಿರ್ಮಾಣ, ಚೆಕ್ ಡ್ಯಾಂ ನಿರ್ಮಾಣ ಮಾಡಿ ಈ ಭಾಗದ ರೈತರಿಗೆ ಸಂಪೂರ್ಣವಾಗಿ ಭೀಮಾ ನದಿಯಿಂದ ನೀರಾವರಿ ಕಲ್ಪಿಸುವ ಮಹತ್ವದ ಉದ್ದೇಶದಿಂದ 54 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಮಾಡುವ ಸಲುವಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇನೆ. ಯಾವುದೇ ಜಾತಿ ಧರ್ಮ ಇಲ್ಲದೆ ಎಲ್ಲರಿಗೂ ಸಮನಾಗಿ ಸೌಲಭ್ಯಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ನೀಡುತ್ತಿರುವುದು ನಿಜಕ್ಕೂ ಅದ್ಭುತವಾದ ಕಾರ್ಯವಾಗಿದೆ ಎಂದು ತಿಳಿಸಿದರು.

ಬರಗಾಲ ಸ್ಮರಿಸಿದ ಪೂಜ್ಯರು
ಕಳೆದ 50 ವರ್ಷಗಳ ಹಿಂದೆ ಬರಗಾಲದಲ್ಲಿ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದನ್ನು ಡಾ. ವೀರೇಂದ್ರ ಹೆಗ್ಗಡೆಯವರು ಸ್ಮರಿಸಿದರು.ಕಲಬುರಗಿ ಜಿಲ್ಲೆಯ ಜನ ಬಹಳಷ್ಟು ಕಷ್ಟದಲ್ಲಿದ್ದರು.ಇಂತಹ ಸಂದರ್ಭದಲ್ಲಿ ನಾವು ಬಟ್ಟೆಗಳು ಹಾಗೂ ಗಂಜಿ ಕೇಂದ್ರಗಳನ್ನು ಆರಂಭಿಸಿದ್ದೇವೆ.ಜಾನುವಾರುಗಳಿಗಾಗಿ ಮೇವಿನ ವ್ಯವಸ್ಥೆ ಮಾಡಿದ್ದೇವು ಎಂದು ನೆನಪು ಮಾಡಿಕೊಂಡು ಈ ಭಾಗಕ್ಕೆ ಹಲವಾರು ಭಾರಿ ಭೇಟಿ ನೀಡಬೇಕೆಂದು ನಿರ್ಧಾರ ಮಾಡಿದರೂ ಸಹ ಕಾಲ ಕೂಡಿ ಬರಲಿಲ್ಲ.ಆದರೆ ಇವತ್ತು ನಿಮ್ಮೆಲ್ಲರನ್ನು ನೋಡಿ ನನಗೆ ಬಹಳಷ್ಟು ಸಂತೋಷವಾಗಿದೆ.ಕಳೆದ 50 ವರ್ಷಗಳ ಹಿಂದೆ ಇದಕ್ಕೆ ಹೋಲಿಸಿದರೆ ಇವತ್ತು ಬಹಳಷ್ಟು ಅಭಿವೃದ್ಧಿ ಪಥದತ್ತ ಹೋಗಿದೆ.ಇನ್ನೂ ಈ ಭಾಗ ಹಲವಾರು ವಿಷಯದಲ್ಲಿ ಹಿಂದುಳಿದಿದೆ.ಮುಂದೆ ಬರುವ 10 ವರ್ಷಗಳಲ್ಲಿ ಈ ಭಾಗ ಎಲ್ಲಾ ರೀತಿಗಳಲ್ಲಿ ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ವಿಶ್ವಾರಾಧ್ಯ ಮಳೆಂದ್ರ ಶಿವಾಚಾರ್ಯ, ಶ್ರೀ ಚನ್ನಮಲ್ಲ ಶಿವಾಚಾರ್ಯರು, ಶ್ರೀ ವೀರ ಮಾಂತ ಶಿವಾಚಾರ್ಯರು, ಶ್ರೀ ಶಾಂತಲಿಂಗ ಶಿವಾಚಾರ್ಯರು ವಹಿಸಿದ್ದರು. ಅತಿಥಿಗಳಾಗಿ ಶ್ರದ್ಧಾ ಹೆಗಡೆ, ರೇಣುಕಾ ಪಾಟೀಲ್,ಪಪ್ಪು ಪಟೇಲ್, ಪ್ರಕಾಶ ಜಮಾದಾರ, ಸಿದ್ದಾರ್ಥ ಬಸರಿಗಿಡ, ಚಂದ್ರಶೇಖರ್ ಕರಜಗಿ, ಸೂರ್ಯಕಾಂತ ನಾಕೇದಾರ,ಮಹಾದೇವಪ್ಪ ಕರೂಟಿ,ಶಿವಪುತ್ರಪ್ಪ ಸಂಗೋಳಗಿ,ಮಲ್ಲಪ್ಪ ಗುಣಾರಿ, ಚನ್ನಬಸಯ್ಯ ಹಿರೇಮಠ, ಶೈಲೇಶ ಗುಣರಿ, ಶ್ರೀಶೈಲ್ ಬಳೂರ್ಗಿ, ರಾಜು ಚವ್ಹಾಣ,ಚಿದಾನಂದ ಮಠ, ಸುನಿಲ್ ಶೆಟ್ಟಿ, ಆನಂದ್ ಶೆಟ್ಟಿ, ಪ್ರಶಾಂತ ಹೀರೆಮಠ,ಸಂತೋಷ್ ಶೆಟ್ಟಿ, ಶ್ರೀಕಾಂತ್ ಕಲಕೇರಿ, ರವಿ ನಂದಶೇಟ್ಟಿ, ಮಹಾದೇವ ಕಲಕೇರಿ,ಶಿವರಾಯ ಪ್ರಭು,ಸತೀಶ್ ಸುವರ್ಣ, ಶಿವರಾಜ್ ಆಚಾರ್ಯ,ಡಾ.ಎಲ್.ಎಚ್.ಮಂಜುನಾಥ,ಅನೀಲಕುಮಾರ ಸೇರಿದಂತೆ ಇನ್ನಿತರು ಇದ್ದರು.