ಬಡವರು, ನೊಂದವರ ಸೇವೆಯೇ ಪುಣ್ಯ

ವಿಜಯಪುರ.ನ೩:ಮಾನವನಿಗೆ ಹಣ, ಆಸ್ತಿ, ಅಧಿಕಾರ, ಹಣಗಳಿಕೆ, ಬಂಗಲೆ ನಿರ್ಮಾಣಗಳಂತಹ ಅನೇಕ ಆಲೋಚನೆಗಳು ಮನಸ್ಸಿನಲ್ಲಿ ಸುಳಿಯುತ್ತಲೇ ಇರುತ್ತವೆ. ಅದರಿಂದಾಗಿ ಸದಾ ಚಿಂತನೆಯಲ್ಲಿಯೇ ತೊಡಗಿದ್ದು ಬಡವರು, ನೊಂದವರು, ಹಸಿದವರು, ರೋಗಿಗಳು, ನಿರ್ಗತಿಕರಿಗೆ ದಾನ, ಸೇವೆ ಮಾಡುವುದರಿಂದ ಪುಣ್ಯ ಲಭಿಸಬಲ್ಲದು ಎಂದು ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ತಿಳಿಸಿದರು.
ಪಟ್ಟಣದ ಚಂದೇನಹಳ್ಳಿ ಗೇಟ್‌ನಲ್ಲಿ ಸರ್ವೋದಯ ಸೊಸೈಟಿ ನಡೆಸುತ್ತಿರುವ ಸ್ವಾಧಾರ ಮಹಿಳಾ ಸಾಂತ್ವನ ಕೇಂದ್ರ, ಬಾಪೂಜಿ ವೃದ್ಧಾಶ್ರಮ, ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ದಿ.ಪುಟ್ಟಮ್ಮ ಎ.ವಿ.ವೀರಭದ್ರಪ್ಪ ಸ್ಮರಣಾರ್ಥ ಹಮ್ಮಿಕೊಂಡಿದ್ದ ಸೇವಾಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬದಲಾದ ಒತ್ತಡದ ಜೀವನ ಶೈಲಿಯಿಂದಾಗಿ ಮನುಷ್ಯನಿಗೆ ಯಾವುದರಲ್ಲಿಯೂ ತೃಪ್ತಿ ಸಿಗುತ್ತಿಲ್ಲ. ಸಮಾಜಮುಖಿಯಾಗಿ ಬಡವರ ಶೋಷಿತರ ಸಮಸ್ಯೆಗಳಿಗೆ ಸಂಪಾದಿಸುವುದರಿಂದ ಅಲ್ಪಮಟ್ಟಿಗಾದರೂ ಬದುಕಿನಲ್ಲಿ ತೃಪ್ತಿ, ಸಾರ್ಥಕತೆ ದೊರೆಯಬಲ್ಲದು. ಶೋಷಿತರ ಏಳಿಗೆಯಲ್ಲಿ ದುಡಿದ ಬಸವಣ್ಣ, ಗಾಂಧೀಜಿ, ಬುದ್ಧ, ಅಂಬೇಡ್ಕರ್, ಮದರ್‌ತೆರೇಸಾರಂತಹವ ದಾಶ್ನಿಕರ ಮಾನವೀಯತಾಗುಣಗಳು ನಮ್ಮಲ್ಲಿ ಅಂಕುರಿಸಬೇಕು ಎಂದರು.
ತೇಜಸ್ ಮಾತನಾಡಿ, ಆಧುನಿಕ ಜಗತ್ತು ಮಾನವೀಯತಾಗುಣಗಳನ್ನು ಕಳೆದುಕೊಳ್ಳುತ್ತಿದ್ದು, ಹಿರಿಯರ ಆದರ್ಶಗಳು ಇಂದಿಗೆ ಅನುಕರಣೀಯ ವಾಗಬೇಕು ಎಂದರು.
ಸರ್ವೋದಯ ಸೊಸೈಟಿಯ ಸಿಬ್ಬಂದಿ ವರ್ಗದವರು, ವೃದ್ದಾಶ್ರಮದ ಸಿಬ್ಬಂದಿ ಇದ್ದರು. ನೊಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.