ಬಡವರಿಗೆ 1 ಸಾವಿರ ನಿವೇಶನ

ಕುಣಿಗಲ್, ನ. ೨೪- ಪಟ್ಟಣದ ಬಡವರಿಗೆ ಒಂದು ಸಾವಿರ ನಿವೇಶನಗಳನ್ನು ಲಾಟರಿ ಮೂಲಕ ಪಾರದರ್ಶಕವಾಗಿ ಯಾವುದೇ ರಾಜಕೀಯ ಒತ್ತಡ ಇಲ್ಲದೆ ವಿತರಿಸಲಾಗುವುದು ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.
ಪಟ್ಟಣದ ಮಲ್ಲಘಟ್ಟ ಪ್ರದೇಶದಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ಹಾಗೂ ಪುರಸಭೆ ಸಹಯೋಗತ್ವದಲ್ಲಿ ಮಲ್ಲಘಟ್ಟ ಹಾಗೂ ಬಿದನಗೆರೆ ವ್ಯಾಪ್ತಿಯ ಸುಮಾರು ೨೫ ಎಕರೆ ಪ್ರದೇಶದಲ್ಲಿ ಆರೂವರೆ ಕೋಟಿ ರೂ. ವೆಚ್ಚದಲ್ಲಿ ಲೇಔಟ್ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಅಭಿವೃದ್ಧಿ ವಿಚಾರದಲ್ಲಿ ಬಡವರು, ದುರ್ಬಲರ ಕೆಲಸಗಳು ಸುಗಮವಾಗಿ ಆಗಲು ಯಾವುದೇ ವ್ಯಕ್ತಿಯೊಂದಿಗೆ ರಾಜಿಯಾಗುವುದಿಲ್ಲ. ಈಗಾಗಲೇ ನಿವೇಶನಕ್ಕಾಗಿ ೩೮೦೦ ಕ್ಕೂ ಹೆಚ್ಚು ಬಡವರು ಅರ್ಜಿ ಸಲ್ಲಿಸಿದ್ದು ಇದರಲ್ಲಿ ೧ ಸಾವಿರ ನಿವೇಶನಗಳನ್ನು ಲಾಟರಿಯ ಮೂಲಕ ನಿಜವಾದ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಇದರಲ್ಲಿ ಯಾವುದೇ ಅಧ್ಯಕ್ಷರು ಸದಸ್ಯರು ಒತ್ತಡಗಳಿಗೆ ಮಣಿಯುವುದಿಲ್ಲ. ಬಡವರ ಅಭಿವೃದ್ಧಿ ವಿಚಾರದಲ್ಲಿ ಯಾರೊಂದಿಗೂ ರಾಜಿಯಾಗುವುದಿಲ್ಲ ಎಂದರು.
ವಸತಿ ಸಚಿವ ವಿ. ಸೋಮಣ್ಣ ನಿವೇಶನ ನಿರ್ಮಾಣ ಲೇಔಟ್ ನಿರ್ಮಿಸಲು ಆರೂವರೆ ಕೋಟಿ ರೂ. ನೀಡಿದ್ದಕ್ಕೆ ಅಭಿನಂದಿಸುವುದಾಗಿ ತಿಳಿಸಿದ ಅವರು, ಬಹಳ ವರ್ಷಗಳ ನಂತರ ಬಡವರಿಗೆ ನಿವೇಶನ ನೀಡುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಕುಣಿಗಲ್ ಪಟ್ಟಣದಲ್ಲಿ ಸುಧಾಮೂರ್ತಿಯವರ ಇಂಫೋಸ್ ಸಂಸ್ಥೆಯ ವತಿಯಿಂದ ೧೦೦ ಹಾಸಿಗೆವುಳ್ಳ ಸುಸರ್ಜಿತವಾದ ಆಸ್ಪತ್ರೆ ನಿರ್ಮಾಣ ಮಾಡಿಕೊಡುವಂತೆ ಸುಧಾಮೂರ್ತಿ ಅವರಲ್ಲಿ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಒಪ್ಪಿದ್ದು ಮುಂದಿನ ದಿನಗಳಲ್ಲಿ ಈ ಕೆಲಸವು ನಡೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಡಾ.ಎಚ್. ಡಿ. ರಂಗನಾಥ್, ಪುರಸಭಾಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷೆ ತಪ್ಸಂ, ಸದಸ್ಯರಾದ ರಾಮು, ಅರುಣ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಎಸ್. ಕೆ. ನಾಗೇಂದ್ರ, ತಹಶೀಲ್ದಾರ್ ಮಹಾಬಲೇಶ್ವರ, ಮುಖ್ಯ ಅಧಿಕಾರಿ ಸಿದ್ದೇಶ್, ಪುರಸಭಾ ಪರಿಸರ ಇಂಜಿನಿಯರ್ ಚಂದ್ರಶೇಖರ್, ರಾಜೀವ್ ಗಾಂಧಿ ವಸತಿ ನಿಗಮದ ಸಹಾಯಕ ಇಂಜಿನಿಯರ್ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.