ಬಡವರಿಗೆ ಹಂಚಲು ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲವೆಂದ ಕಾಂಗ್ರೆಸ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.20: ಕಾಂಗ್ರೆಸ್ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ನಾವು ನೀಡಿದ ಭರವಸೆಯಂತೆ ಬಡವರಿಗೆ 10 ಕೆ.ಜಿ ಅಕ್ಕಿ ನೀಡುವ ಕಾರ್ಯಕ್ಕೆ ಕೇಂದ್ರದ  ಬಿಜೆಪಿ ಸರ್ಕಾರ ಗೋದಾಮಿನಲ್ಲಿಟ್ಟುಕೊಂಡು ಕೊಡುತ್ತಿಲ್ಲವೆಂದು ಆರೋಪಿಸಿ ಇಂದು ನಗರದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ಪಕ್ಷದ ನಗರ ಜಿಲ್ಲಾ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ  ನೇತೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿಗಳ  ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಲಾಯ್ತು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದಿರುವುದನ್ನು ಸಹಿಲಾಗದ  ಕೇಂದ್ರ ಬಿಜೆಪಿ ಸರ್ಕಾರ,  ಅದರ ಅಧೀನ ಸಂಸ್ಥೆಯಾದ ಎಫ್.ಸಿ.ಐ ಗೆ ಅಕ್ಕಿಯನ್ನು ನೀಡದಂತೆ ತಾಕೀತು ಮಾಡಿದೆಂದು ಬಿಜೆಪಿ ವಿರುದ್ದ  ಕಾಂಗ್ರೆಸ್ ಪ್ರತಿಭಟನೆ ನಡೆಸಿ‌ ಘೋಷಣೆಗಳನ್ನು ಕೂಗಿತು.
ಸಚಿವ ನಾಗೇಂದ್ರ ಈ ಸಂದರ್ಭದಲ್ಲಿ ಮಾತನಾಡಿ, ಅಕ್ಕಿ ಕೊಡೋದಾಗಿ ಹೇಳಿ  ಕೇಂದ್ರ ಸರ್ಕಾರ‌ಮಾತು‌ ತಪ್ಪಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ನುಡಿದಂತೆ ನಾವು ನಡೆದಿದ್ದೇವೆ ಆದ್ರೇ, ಕ್ಷುಲಕ ರಾಜಕಾರಣ, ಕೆಟ್ಟ ಮನಸ್ಥಿತಿಯಿಂದ ಬಿಜೆಪಿಯ ಕೇಂದ್ರ ಸರ್ಕಾರ ಅಕ್ಕಿ ನೀಡ್ತಿಲ್ಲ.‌ ಇಂತಹ  ಧೋರಣೆಯಿಂದ ರಾಜ್ಯದಲ್ಲಿ  ಬಿಜೆಪಿ ಸೋಲನ್ನು ಅನುಭವಿಸಿದ್ದಾರೆ.
ಈ ವರ್ಷ ರಾಜ್ಯದಲ್ಲಿ ಜನರು ಬಿಜೆಪಿಗೆ ಪಾಠ ಕಲಿಸಿದ್ದಾರೆ 2024ರಲ್ಲಿ ದೇಶಾದ್ಯಂತ ಜನರು ಪಾಠ ಕಲಿಸಲಿದ್ದಾರೆಂದರು.‌
ಕೇಂದ್ರ ಅಕ್ಕಿ ನೀಡದೇ ಇದ್ರೂ ಬೇರೆ ರಾಜ್ಯದಿಂದ ಅಕ್ಕಿ ಪಡೆಯುತ್ತೇವೆ. ಅದಕ್ಕೂ ಕೇಂದ್ರ ಸರ್ಕಾರ ಅಡ್ಡಿ ಮಾಡ್ತಿದೆಂದರು.
ಬಿಜೆಪಿಯವರು ಮಾಡುತ್ತಿರುವ ಅಕ್ಕಿ ರಾಜಕೀಯದ ಬಗ್ಗೆ ಸಾಮಾನ್ಯ ಜನರಿಗೆ ತಿಳಿಸಲು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆದೇಶದಂತೆ ರಾಜ್ಯದಾದ್ಯಂತ ಇಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯಲ್ಲಿ ಸಂಡೂರು ಶಾಸಕ ಈ.ತುಕರಾಂ, ಮಾಜಿ ಸಂಸದ ಉಗ್ರಪ್ಪ, ಜಿ.ಪಂ.ಮಾಜಿ ಸದಸ್ಯ. ಅಲ್ಲಂ ಪ್ರಶಾಂತ್ , ಎ.ಮಾನಯ್ಯ, ಮೇಯರ್ ತ್ರಿವೇಣಿ, ಪಾಲಿಕೆ ಸದಸ್ಯರಾದ ವಿ.ಕುಬೇರ, ವಿವೇಕ್, ಮುಖಂಡರುಗಳಾದ ಎಂ. ಶ್ರೀಧರ್, ಶಿವರಾಜ್ ಹೆಗಡೆ, ವೆಂಕಟೇಶ್ ಹೆಗಡೆ,  ಮೊದಲಾದವರು ಪಾಲ್ಗೊಂಡಿದ್ದರು.