ಬಡವರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ

ಗೌರಿಬಿದನೂರು, ಮಾ ೨೭- ಅವಿಭಜಿತ ಜಿಲ್ಲೆಗಳಲ್ಲಿನ ಗ್ರಾಮೀಣ ಭಾಗದ ಬಡವರ ಕುಟುಂಬಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಕೋಟ್ಯಂತರ ರೂಗಳ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಿದ್ದು, ಫಲಾನುಭವಿಗಳು ಅದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಹೇಳಿದರು.
ನಗರದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಆಯೋಜಿಸಿದ್ದ ಠೇವಣಿ ಸಂಗ್ರಹಣೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಕೇವಲ ಗೌರಿಬಿದನೂರು ತಾಲ್ಲೂಕಿನಲ್ಲಿ ಮಾತ್ರ ಇದುವರೆಗೂ ಬ್ಯಾಂಕ್ ವತಿಯಿಂದ ಸುಮಾರು ೨೫ ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಸಾಲದ ಸೌಲಭ್ಯ ನೀಡಿದ್ದು, ಇದರಿಂದ ಅವರ ಬದುಕಿಗೆ ಭದ್ರತೆಯನ್ನು ನೀಡುವುದಲ್ಲದೆ ಆರ್ಥಿಕವಾಗಿ ಸಹಕಾರ ನೀಡಿದ್ಧೇವೆ. ದಶಕದ ಹಿಂದೆ ದಿವಾಳಿಯಾಗಿದ್ದ ಬ್ಯಾಂಕ್ ಇಂದು ರಾಷ್ಟ್ರೀಕೃತ ಬ್ಯಾಂಕ್ ಸೇವೆಗಳಿಗಿಂತ ಎರಡು ಪಟ್ಟು ಮುಂದೆ ಬಂದು ನೊಂದ ಬಡ ಕುಟುಂಬಗಳಿಗೆ ಆಸರೆಯಾಗಿದೆ. ಪ್ರತೀ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿಎಸ್ಸೆಸ್ಸೆಎನ್ ಸಂಘಗಳ ಮೂಲಕ ರೈತರಿಗೆ ಸಾಲದ ಸೌಲಭ್ಯ ನೀಡಿ ಬಳಿಕ ಹಂತಹಂತವಾಗಿ ಪಡೆಯುವ ಮೂಲಕ ಎಲ್ಲಾ ಸಹಕಾರ ಸಂಘಗಳ ನಿರ್ದೇಶಕರು ಮತ್ತು ಕಾರ್ಯದರ್ಶಿಗಳು ಬ್ಯಾಂಕ್ ಸೇವೆಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ ಮಾತನಾಡಿ, ಇಡೀ ರಾಜ್ಯದಲ್ಲಿಯೇ ಜಿಲ್ಲೆಯ ಡಿಸಿಸಿ ಬ್ಯಾಂಕ್ ಜನರ ಸಂಕಷ್ಟಗಳಿಗೆ ನೆರವಾಗುವ ಉತ್ತಮ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜತೆಗೆ ಎಲ್ಲ ಸಹಕಾರಿ ಸಂಘಗಳ ಕಾರ್ಯದರ್ಶಿಗಳ ಮತ್ತು ನಿರ್ದೇಶಕರ ಕಾರ್ಯಕ್ಷಮತೆ, ಬದ್ಧತೆಯಿ ಸೇವೆಯಿಂದ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಕುಟುಂಬಗಳಿಗೂ ನೆರವಾಗುವ ಚಿಂತನೆ ಮಾಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ತಾಲ್ಲೂಕಿನ ಸುಮಾರು ೩೫ ಸಹಕಾರ ಸಂಘಗಳಿಂದ ಸಂಗ್ರಹಿಸಿದ ೩.೫ ಕೋಟಿ ರೂಗಳನ್ನು ಠೇವಣಿಯಾಗಿ ಬ್ಯಾಂಕಿಗೆ ನೀಡಿದರು. ಉತ್ತಮ ಸೇವೆಯ ಜತೆಗೆ ಬ್ಯಾಂಕ್ ನ ಅಭಿವೃದ್ಧಿಗೆ ಸಹಕಾರಿಯಾಗಿರುವ ಬ್ಯಾಂಕ್ ನ ಸಿಬ್ಬಂಧಿಯನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ವೇದ, ಸಹಕಾರಿ ಮಹಾಮಂಡಳಿಯ ಅಧ್ಯಕ್ಷರಾದ ಎಚ್.ವಿ.ನಾಗರಾಜ್, ಎಜಿಎಂ ಕಲೀಂ ಉಲ್ಲಾ, ಠೇವಣಿ ಸಂಗ್ರಹಣೆ ವ್ಯವಸ್ಥಾಪಕರಾದ ಹುಸೇನ್ ಸಾಬ್ ದೊಡ್ಡಮನಿ ವ್ಯವಸ್ಥಾಪಕ ಮಹಮದ್ ಅಸ್ಲಾಂ, ಮೇಲ್ವಿಚಾರಕರಾದ ಚಂದ್ರಶೇಖರ್, ಮಂಜುನಾಥ್, ಮುಖಂಡರಾದ ಸಿ.ಆರ್.ನರಸಿಂಹಮೂರ್ತಿ ಹಾಗೂ ಎಲ್ಲಾ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರು ಭಾಗವಹಿಸಿದ್ದರು.