ಬಡವರಿಗೆ ರಿಯಾಯಿತಿ ಚಿಕಿತ್ಸೆ-ನಿಸರ್ಗ ನಾರಾಯಣಸ್ವಾಮಿ

ದೇವನಹಳ್ಳಿ.ನ೧:ಪಟ್ಟಣದ ಸುತ್ತಮುತ್ತಲ ಜನತೆಗೆ ಅತ್ಯವಶ್ಯಕವಾದ ಸುಸಜ್ಜಿತವಾದ ಆಸ್ಪತ್ರೆ ತೆರೆದಿರುವುದು ಸಂತಸದ ವಿಷಯ, ಗುಣಮಟ್ಟದ ಹಾಗೂ ಬಡಜನರಿಗೆ ರಿಯಾಯಿತಿ ನೀಡಿ ಚಿಕಿತ್ಸೆ ನೀಡಿ ಸಮಾಜಮುಖಿಯಾಗಿ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಆಸ್ಪತ್ರೆಯ ಆಡಳಿತ ಮಂಡಳಿಗೆ ಕಿವಿಮಾತು ಹೇಳಿದರು.
ಅವರು ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಶಿರಡಿ ಸಾಯಿ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿ ೬೦ ಹಾಸಿಗೆಗಳುಳ್ಳ ಸುಸಜ್ಜಿತ ಪರಿಕರಗಳನ್ನು ಹೊಂದಿರುವ ಆಸ್ಪತೆ ಪ್ರಾರಂಭವಾಗಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ತುಂಬಾ ಅನುಕೂಲವಾಗಲಿದೆ. ಇದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗುವುದು ತಪ್ಪಲಿದ್ದು ಪಟ್ಟಣದ ಹೃದಯಭಾಗದಲ್ಲಿರುವುದು ಎಲ್ಲರಿಗೂ ಅನುಕೂಲವಾಗಲಿದೆ ಎಂದರು.
ಮಕ್ಕಳ ತಜ್ಞರು ಶಿರಡಿ ಸಾಯಿ ಆಸ್ಪತ್ರೆಯ ಸಂಸ್ಥಾಪಕರಾದ ಡಾ.ಮುನಿರಾಜು ಮಾತನಾಡಿ ನಾವು ಸುಮಾರು ವರ್ಷಗಳಿಂದ ೩೦ ಹಾಸಿಗೆಗಳ ಸಾಮರ್ಥ್ಯವುಳ್ಳ ಆಸ್ಪತ್ರೆಯನ್ನು ಬಾಡಿಗೆ ಕಟ್ಟಡದಲ್ಲಿ ಸೇವೆ ನೀಡುತ್ತಾ ಬಂದಿದ್ದೇವೆ ಆಸ್ಪತ್ರೆಯನ್ನು ಮತ್ತಷ್ಟು ಅಭಿವೃದ್ದಿ ಪಡಿಸಿ ಹೆಚ್ಚಿನ ಸೌಲಭ್ಯವನ್ನು ನೀಡುವ ಉದ್ದೇಶದಿಂದ ೬೦ ಹಾಸಿಗೆಗಳ ಸ್ವಂತ ಕಟಡ್ಟಕ್ಕೆ ಸ್ಥಳಾಂತರಿಸಿದ್ದೇವೆ. ನೂತನ ಅಸ್ಪತ್ರೆಯಲ್ಲಿ ಎಲ್ಲಾ ಲಸಿಕೆ, ವೈದ್ಯಕೀಯ ಸೇವೆ, ತೀವ್ರನಿಗಾ ಘಟಕ, ನವಜಾತ ಶಿಶು ತೀವ್ರ ನಿಗಾಘಟಕ, ಎರಡು ಶಸ್ತ್ರ ಚಿಕಿತ್ಸಾ ಕೊಠಡಿ ಹಾಗು ೨೪ ಗಂಟೆಗಳ ಅಪಘಾತ ಮತ್ತು ತುರ್ತು ಸೇವೆ ಹಾಗು ನುರಿತ ವೈದ್ಯರ ತಂಡ ಕೆಲಸ ನಿರ್ವಹಿಸಲಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಇದೆ ವೇಳೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಟೌನ್ ಅಧ್ಯಕ್ಷ ಮುನಿನಂಜಪ್ಪ, ಪುರಸಭೆ ಸದಸ್ಯರಾದ ಕೆ.ಎಸ್.ನಾಗೇಶ್, ಸಾಯಿಕುಮಾರ್‌ಬಾಬು, ಆಸ್ಪತ್ರೆ ವ್ಯವಸ್ಥಾಪಕ ಮಲ್ಲಂಗ್ ಸೇರಿದಂತೆ ಹಲವರು ಭಾಗಿಯಾಗಿದ್ದರು.