ಬಡವರಿಗೆ ನಿವೇಶನ ಹಂಚಲು ಕ್ರಮ ವಹಿಸುವಂತೆ ಆಗ್ರಹ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.18: ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಉಚಿತ ನಿವೇಶನಗಳನ್ನು ವಿತರಿಸುವ ಉದ್ದೇಶದಿಂದಲೇ ವಶಪಡಿಸಿರುವ ಪಟ್ಟಣದ ಟಿ.ಬಿ.ಬಡಾವಣೆಯಲ್ಲಿ ಪಟ್ಟಣದ ನಿವೇಶನರಹಿತ ಬಡವರಿಗೆ ನಿವೇಶನಗಳನ್ನು ಹಂಚಲು ಕ್ರಮ ವಹಿಸುವಂತೆ ಪುರಸಭೆ ಹಿರಿಯಸದಸ್ಯ ಕೆ.ಸಿ.ಮಂಜುನಾಥ್ ಆಗ್ರಹಿಸಿದರು.
ಅವರು ಪಟ್ಟಣದ ಶಹರಿ ರೋಜ್ಗಾರ್ ಭವನದಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತ ಅಧಿಕಾರಿಗಳಾದ ನಂದೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಡವರಿಗೆ ನಿವೇಶನಗಳನ್ನು ಹಂಚುವ ಸದುದ್ದೇಶದಿಂದ ಪಟ್ಟಣದ ಟಿ.ಬಿ.ಬಡಾವಣೆಯಲ್ಲಿ 21 ಎಕರೆ ಪ್ರದೇಶ ಭೂ ಸ್ವಾಧೀನವಾಗಿದೆ. ಭೂ ಸ್ವಾಧೀನವಾಗಿ ಮೂರು ದಶಕಗಳು ಕಳೆದಿದ್ದರೂ ಪುರಸಭೆ ಇದುವರೆಗೂ ಒಂದೇ ಒಂದು ನಿವೇಶನವನ್ನು ಬಡವರಿಗೆ ಹಂಚಿಕೆ ಮಾಡಿಲ್ಲ. ನಿವೇಶನ ಹಂಚಿಕೆಯಾಗದಿದ್ದರೂ ಇಲ್ಲಿ ಬಲಾಢ್ಯರು ಅತಿಕ್ರಮಿಸಿ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಜೊತೆಗೆ ರಾಜ್ಯ ಸರ್ಕಾರವೇ ಜಾತಿಗೊಂದು ಸಮುದಾಯ ಭವನಕ್ಕೆ ಜಾಗ ನೀಡಿ ಬಡವರ ನಿವೆಶನಗಳಿಗೆ ಕೊಳ್ಳಿಯಿಟ್ಟಿದೆ.ಇದು ಕಾನೂನಿನ ಸ್ಪಷ್ಠ ಉಲ್ಲಂಘನೆ. ಪುರಸಭೆಗೆ ಸೇರಿದ ಜಾಗಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಿ ಪುರಸಭೆ ವಶಕ್ಕೆ ಪಡೆಯಬೇಕು, ಪಟ್ಟಣದಲ್ಲಿ ವಾಸ ಮಾಡುತ್ತಿರುವ ಕಡು ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಉಚಿತವಾಗಿ ನಿವೇಶನಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೆ.ಸಿ.ಮಂಜುನಾಥ್ ಒತ್ತಾಯಿಸಿದರು.
ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಹಂಚಿಕೆಯಾಗಿದ್ದ 1276 ನಿವೇಶನಗಳ ಪೈಕಿ ಮೊದಲ ಹಂತದಲ್ಲಿ 694 ನಿವೇಶನಗಳನ್ನು ರಾಜ್ಯ ಸರ್ಕಾರ ಸಕ್ರಮಗೊಳಿಸಿದೆ. ಸಕ್ರಮಗೊಂಡಿರುವ ನಿವೇಶನ ಮತ್ತು ಕಟ್ಟಡಗಳ ಇ-ಸ್ವತ್ತು ಮಾಡಿಕೊಡಲು ವಿನಾಕಾರಣ ಸತಾಯಿಸಲಾಗುತ್ತಿದೆ. ಸಕ್ರಮ ನಿವೇಶನಗಳಲ್ಲಿನ ಕಟ್ಟಡ ಮತ್ತು ಆಸ್ತಿಗಳ ಇ-ಸ್ವತ್ತು ಮಾಡಿಕೊಡಬೇಕು. ಸಕ್ರಮವಾಗದೆ ಉಳಿದಿರುವ 582 ನಿವೇಶನಗಳ ಸಕ್ರಮಾತಿಗೆ ಕ್ರಮ ವಹಿಸಬೇಕು. ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ ಪಟ್ಟಣದ ಮೂಲ ನಿವಾಸಿಗಳು ವಾಸಿಸುತ್ತಿದ್ದಾರೆ. ಅಗ್ರಹಾರ ಬಡಾವಣೆಗೆ ಖುದ್ದು ಭೇಟಿ ನೀಡಿ ಅಲ್ಲಿ ವಾಸಿಸುತ್ತಿರುವವರನ್ನು ಗುರುತಿಸಿ ಅವರ ಮನೆಗಳನ್ನು ಇ-ಸ್ವತ್ತು ಮಾಡಿಕೊಡುವಂತೆ ಕೆ.ಸಿ.ಮಂಜುನಾಥ್ ಒತ್ತಾಯಿಸಿದರು.
ಪುರಸಭೆ ಸದಸ್ಯ ಡಿ.ಪ್ರೇಮ್ ಕುಮಾರ್ ಮಾತನಾಡಿ ಅಂಬೇಡ್ಕರ್ ನಗರದ ಹೆಬ್ಬಾಗಿಲಿಗೆ ಒಂದು ಸುಸಜ್ಜಿತ ಸ್ವಾಗತ ಕಮಾನನ್ನು ನಿರ್ಮಾಣ ಮಾಡುವ ಮೂಲಕ ಅಂಬೇಡ್ಕರ್ ಅವರ ಹೆಸರನ್ನು ಚಿರಸ್ತಾಯಿಗೊಳಿಸುವ ನಿಟ್ಟಿನಲ್ಲಿ ಪುರಸಭೆಯು ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಹಳೆ ಕಿಕ್ಕೇರಿ ರಸ್ತೆಗೆ ಡಾ. ಬಿ.ಆರ್.ಅಂಬೇಡ್ಕರ್ ಹೆಸರಿಟ್ಟು ನಾಮಫಲಕವನ್ನು ಕೂಡಲೇ ಅನಾವರಣ ಮಾಡಬೇಕು. ಪಟ್ಟಣದ ವಿವಿಧ ಬಡಾವಣೆಗಳು ಹಾಗೂ ರಸ್ತೆಗಳಿಗೆ ಹಿರಿಯ ಸ್ವಾತಂತ್ರ?ಯ ಹೋರಾಟಗಾರರು ಹಾಗೂ ಸಾಹಿತಿಗಳ ಹೆಸರನ್ನು ಇಡಲು ಪುರಸಭೆಯು ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪುರಸಭೆ ಹಿರಿಯ ಸದಸ್ಯ ಬಸ್ ಸಂತೋಷ್ ಕುಮಾರ್ ಮಾತನಾಡಿ ಪಟ್ಟಣದ ಹೇಮಾವತಿ ಬಡಾವಣೆಯು ಅಭಿವೃದ್ಧಿ ಕೆಲಸ ಕಾರ್ಯಗಳಿಂದ ವಂಚಿತವಾಗಿದ್ದು, ಗ್ರಾಮಭಾರತಿ ಶಾಲೆಯ ಪಕ್ಕದ ಮೈದಾನಕ್ಕೆ ಹೊಂದಿಕೊಂಡಂತೆ ಸುಸಜ್ಜಿತವಾದ ಬಯಲುರಂಗ ಮಂದಿರವನ್ನು ನಿರ್ಮಾಣ ಮಾಡಿ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಲು ಉತ್ತೇಜನ ನೀಡಬೇಕು, ಕೆ.ಆರ್.ಪೇಟೆ ಪಟ್ಟಣವು ಮಂಡ್ಯ ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿರುವುದರಿಂದ ಪಟ್ಟಣದಲ್ಲಿ ಅಗತ್ಯವಾಗಿ ಆಗಬೇಕಾಗಿರುವ ಕೆಲಸ ಕಾರ್ಯಗಳನ್ನು ಮೊದಲ ಆದ್ಯತೆಯಲ್ಲಿ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಆರ್.ಲೋಕೇಶ್ ಮಾತನಾಡಿ ರಸ್ತೆ ಬದಿ ವ್ಯಾಪಾರಿಗಳಿಗೆ ಶಾಶ್ವತವಾದ ಮಾರುಕಟ್ಟೆಯನ್ನು ನಿರ್ಮಾಣ ಮಾಡುವ ದಿಕ್ಕಿನಲ್ಲಿ ಪುರಸಭೆ ಆಡಳಿತ ಅಧಿಕಾರಿಗಳು ಕೆ.ಆರ್.ಪೇಟೆ ಪಟ್ಟಣದ ಡಿಸಿಸಿ ಬ್ಯಾಂಕ್ ಹಿಂಭಾಗದಲ್ಲಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಸುಸಜ್ಜಿತವಾದ ಮಾರುಕಟ್ಟೆ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಂಡು ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಮನವಿ ಮಾಡಿದರು.ಪುರಸಭೆಯಲ್ಲಿ 23 ಜನ ಸದಸ್ಯರಿದ್ದು ಇಂದಿನ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಆರ್.ಲೋಕೇಶ್ ಸದಸ್ಯರಾದಕೆ.ಸಿ.ಮಂಜುನಾಥ್,ಡಿ.ಪ್ರೇಮಕುಮಾರ್,ಬಸ್ ಸಂತೋಷ್‍ಕುಮಾರ್, ಹೆಚ್.ಎನ್.ಪ್ರವೀಣ್,ಮಹಾದೇವಿ, ಕೆ.ಎಸ್.ಪ್ರಮೋದ್‍ಕುಮಾರ್, ನಟರಾಜ್, ಶುಭಾ, ಪದ್ಮಮ್ಮ ಮತ್ತು ಗಾಯತ್ರಿ ಮಾತ್ರ ಭಾಗವಹಿಸಿದ್ದು ವಿರೋಧಿ ಬಣದ ಸದಸ್ಯರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಸತತವಾಗಿ ಮೂರು ಸಭೆಗಳಿಗೆ ಗೈರು ಹಾಜರಾಗುವ ಸದಸ್ಯರ ಸದಸ್ಯತ್ವವನ್ನು ಅನರ್ಹ ಮಾಡುವ ಅಧಿಕಾರವೂ ಸರ್ಕಾರಕ್ಕೆ ಇರುವುದರಿಂದ ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸದ ಸದಸ್ಯರ ಸದಸ್ಯತ್ವ ಅನರ್ಹಗೊಳಿಸುವಂತೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ಹೇಳಿದರು.