ಬಡವರಿಗೆ ನಿವೇಶನ ನೀಡಲು ಟಿ.ಬಿ.ಬೋರ್ಡ್ ಅಡ್ಡಿ-ಆನಂದ್‍ಸಿಂಗ್


ಸಂಜೆವಾಣಿ ವಾರ್ತೆ
ಹೊಸಪೇಟೆ, ಮೇ.25: ನೂತನ ವಿಜಯನಗರ ಜಿಲ್ಲಾ ರಚನೆ, ಅಭಿವೃದ್ಧಿ ಹಾಗೂ ಬೆಳವಣಿಗೆ ದೃಷ್ಟಿಯಿಂದ ಟಿ.ಬಿ.ಬೋರ್ಡ್ ಸ್ಥಳ ಹಸ್ತಾಂತರಿಸಲು ಅಡ್ಡಿಪಡಿಸುತ್ತಿದೆ ಎಂದು ಮಾಜಿ ಪ್ರವಾಸೋದ್ಯಮ ಸಚಿವ ಆನಂದ್‍ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ವೈಕುಂಟ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ನೂತನವಾಗಿ ರಚನೆಯಾದ ವಿಜಯನಗರ ಜಿಲ್ಲಾಡಳಿತಕ್ಕೆ ಟಿ.ಬಿ.ಬೋರ್ಡ್ ವ್ಯಾಪ್ತಿಗೆ ಒಳಪಟ್ಟಿರುವ 20 ಸಾವಿರ ಎಕರೆ ಪ್ರದೇಶವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವಂತೆ ಕೋರಲಾಗಿತ್ತು. ಬಹುತೇಕ ಕಾರ್ಯ ಮುಗಿದಿದ್ದರೂ ಇದೀಗ ಮತ್ತೆ ಟಿ.ಬಿ.ಬೋರ್ಡ್ ಆಕ್ಷೇಪವ್ಯಕ್ತಪಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
20 ಸಾವಿರ ಎಕರೆ ಪ್ರದೇಶದಲ್ಲಿ 70 ಎಕರೆ ಪ್ರದೇಶವನ್ನು ಟಿ.ಬಿ.ಬೋರ್ಡ್ ವ್ಯಾಪ್ತಿಯಲ್ಲಿ ಖಾಯಂ ಆಗಿ ವಾಸವಾಗಿರುವವರಿಗೆ ನೀಡಿ ಉಳಿದ ಭೂಮಿಯನ್ನು ನೂತನ ಜಿಲ್ಲಾಡಳಿತ ನಿವೇಶ, ಜಿಲ್ಲಾಡಳಿತ ಕಚೇರಿ ಸೇರಿದಂತೆ ವಿಜಯನಗರ ಜಿಲ್ಲಾಡಳಿತದ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಡಲು ತೀರ್ಮಾನಿಸಿದೆ. ನಮ್ಮ ರಾಜ್ಯ ಸರ್ಕಾರ, ಆಂದ್ರಪ್ರದೇಶ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸಮ್ಮತಿಸಿದ್ದರೂ ಸಹ ಇದೀಗ ಟಿ.ಬಿ.ಬೋರ್ಡ್ ತಗಾದೆ ಎತ್ತಿದೆ, ಈ ಜಾಗಕ್ಕೆ ತಗಲುವ ವಾಣಿಜ್ಯದರವನ್ನು ನೀಡುವಂತೆ ಹೇಳುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಅಭಿವೃದ್ಧಿಗೆ ಸಹಕಾರ:
ಈಗಾಗಲೇ ನಡೆದಿರುವ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಯಾವುದೆ ಜಿಲ್ಲೆಯ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ ಅವರು ಸಹಕಾರವೇ ಆಗಲಿ, ಖಾಸಗಿಯಾಗಿಯೇ ಆಗಲಿ ಸಕ್ಕರೆ ಕಾರ್ಖಾನೆ ಆರಂಭಿಸುವುದಾದರೆ ಆಗಲಿ ಎಂದರು. ಸರ್ಕಾರ ಹಂಪಿ ಶುಗರ್ಸ್‍ಗೆ ಸಚಿವ ಸಂಪುಟದ ಒಪ್ಪಿಗೆ ದೊರೆತಿರುವುದರಿಂದ ಯಾವುದೆ ತೊಂದರೆಯಾಗದ ಎಂದು ಭಾವಿಸಿರುವೆ ಒಂದು ವೇಳೆ ಸ್ಥಳೀಯ ಶಾಸಕರು ಹಿಂದಿನ ಕಾರ್ಖಾನೆಯನ್ನು ಆರಂಭಿಸುವುದಾದರೆ ನನ್ನ ಆಕ್ಷೇಪವಿಲ್ಲಾ, 10 ಕಿಮಿ, ವ್ಯಾಪ್ತಿಯ ಹೊಸ ಕಾರ್ಖಾನೆ ಮಾಲಿನ್ಯ ತೊಂದರೆಯಾಗುವುದು ಎನ್ನುವುದಾದರೆ ಊರ ಮಧ್ಯವಿರುವ ಹಳೆ ಕಾರ್ಖಾನೆ ತೊಂದರೆಯಾಗುವುದಿಲ್ಲವೇ ? ಎಂದು ಪ್ರಶ್ನಿಸಿದರು. ಆದರೂ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಕಾಯೋನ್ಮುಖವಾಗುವುದಾದರೆ ನನಗೆನೂ ತೊಂದರೆ ಇಲ್ಲಾ ರೈತರಿಗೆ ಹತ್ತಿರದಲ್ಲಿಯೇ ಒಂದು ಕಾರ್ಖಾನೆಯಾಗಿ ಅನುಕೂಲವಾದರೆ ಸಾಕು ಎಂದರು.
ಸಿದ್ಧಾರ್ಥಸಿಂಗ್, ದೇವರಮನಿ ಶ್ರೀನಿವಾಸ, ಧಮೇಂದ್ರಸಿಂಗ್, ಸಂದೀಪಸಿಂಗ್ ಸೇರಿದಂತೆ ಇತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.