ಬಡವರಿಗೆ ಕೇಂದ್ರದ ಬಂಪರ್;ಇಂದಿನಿಂದ ಜಾರಿ

ನವದೆಹಲಿ,ಜ.೧- ಹೊಸ ವರ್ಷದಲ್ಲಿ ಕೇಂದ್ರ ಸರ್ಕಾರ ದೇಶದ ಬಡವರಿಗೆ ಉಚಿತ ಪಡಿತರ ಒದಗಿಸುವ ಯೋಜನೆಯನ್ನು ಮುಂದುವರೆಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಇನ್ನು ಒಂದು ವರ್ಷ ಬಡವರಿಗೆ ಉಚಿತ ಪಡಿತರ ನೀಡುವ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
ಡಿಸೆಂಬರ್ ೩೧ ರಂದು ಕೊನೆಯಾದ ಉಚಿತ ಪಡಿತರ ಯೋಜನೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಒಂದು ವರ್ಷ ವಿಸ್ತರಿಸಲಾಗಿದ್ದು ಬಡಜನರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಕೇಂದ್ರಸರ್ಕಾರದ ಮಹತ್ವಾಂಕ್ಷಿ ಯೋಜನೆ ಇದಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ೮೧.೩೫ ಕೋಟಿ ಬಡವರಿಗೆ ಒಂದು ವರ್ಷದವರೆಗೆ ಪ್ರತಿ ವ್ಯಕ್ತಿಗೆ ೫ ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.
ಇದರ ಜೊತೆಯಲ್ಲಿ ಅಂತ್ಯೋದಯ ಅನ್ನ ಯೋಜನೆ ಅಡಿಯಲ್ಲಿ ಬರುವ ಕುಟುಂಬಗಳು ತಿಂಗಳಿಗೆ ೩೫ ಕೆಜಿ ಆಹಾರ ಧಾನ್ಯ ವಿತರಣೆ ಎಂದಿನಂತೆ ಮುಂದುವರಿಯಲಿದೆ. ರಾಷ್ಡ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಬಡವರಿಗೆ ಪ್ರತಿ ಕೆಜಿ ಅಕ್ಕಿಗೆ ೩ ರೂ.ಗೆ ಮತ್ತು ಪ್ರತಿ ಕೆಜಿ ಗೋಧಿಯನ್ನು ೨ ರೂ.ಗೆ ನೀಡಲಾಗುತ್ತದೆ.
೨ ಲಕ್ಷ ಕೋಟಿ ಸರ್ಕಾರಕ್ಕೆ ಹೊರೆ:
ದೇಶದಲ್ಲಿ ಮುಂದಿನ ಒಂದು ವರ್ಷಗಳ ಕಾಲ ಉಚಿತ ಪಡಿತರ ಯೋಜನೆ ಮುಂದುವರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿ ೨ ಲಕ್ಷ ಕೋಟಿ ಹೊರೆ ಬೀಳಲಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮತ್ತು ಪ್ರಧಾನ ಮಂತ್ರಿ ಗರೀಬ್ ಅನ್ನ ಕಲ್ಯಾಣ ಯೋಜನೆಯಡಿ ೮೧.೩೫ ಕೋಟಿ ಫಲಾನುಭವಿಗಳಿಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ ಐದು ಕೆ.ಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಪ್ರಸ್ತುತ ಕೇಂದ್ರ ಸರ್ಕಾರ ಪ್ರತಿ ವ್ಯಕ್ತಿಗೆ ೫ ಕೆ.ಜಿ ಆಹಾರ ಧಾನ್ಯಗಳನ್ನು ಪ್ರತಿ ಕೆಜಿಗೆ ೨-೩ ರೂ.ಗೆ ಒದಗಿಸುತ್ತದೆ.
ಫಲಾನುಭವಿಗಳು ಆಹಾರ ಧಾನ್ಯ ಪಡೆಯಲು ಒಂದು ರೂಪಾಯಿ ಪಾವತಿಸಬೇಕಾಗಿಲ್ಲ. ಈ ಯೋಜನೆಗಾಗಿ ಕೇಂದ್ರ ಸರ್ಕಾರವರ್ಷಕ್ಕೆ ಸುಮಾರು ೨ ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
೫.೩೩ ನ್ಯಾಯಬೆಲೆ ಮೂಲಕ ವಿತರಣೆ
ಹೊಸ ಸಂಯೋಜಿತ ಯೋಜನೆಯು ೫.೩೩ ಲಕ್ಷ ನ್ಯಾಯಬೆಲೆ ಅಂಗಡಿಗಳ ಮೂಲಕ ದೇಶಾದ್ಯಂತ ಉಚಿತ ಆಹಾರ ಧಾನ್ಯ ವಿತರಣೆ ಮಾಡಲಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ನೀಡಲಾಗುತ್ತಿರುವ ಪಡಿತರದ ಸಾಕಷ್ಟು ಆಹಾರ ಧಾನ್ಯಗಳ ದಾಸ್ತಾನಿದೆ. ೧೫೯ ಲಕ್ಷ ಟನ್ ಗೋಧಿ, ೧೦೪ ಲಕ್ಷ ಟನ್ ಅಕ್ಕಿ ಲಭ್ಯವಿದೆ ಎಂದು ಸರ್ಕಾರ ತಿಳಿಸಿದೆ.

  • ಬಡ ಜನತೆ ಹಸಿವು ನೀಗಿಸಲು ಮುಂದಾದ ಕೇಂದ್ರ ಸರ್ಕಾರ
  • ಇಂದಿನಿಂದ ಒಂದು ವರ್ಷ ಉಚಿತ ಪಡಿತರ ವಿತರಣೆ ಮುಂದುವರಿಕೆ
  • ಪ್ರತಿ ವ್ಯಕ್ತಿಗೆ ೫ ಕೆಜಿ ಆಹಾರ ದಾನ್ಯ ಉಚಿತವಾಗಿ ವಿತರಣೆ
  • ಅಂತ್ಯೋದಯ ಅನ್ನ ಯೋಜಮೆಯಡಿ ಪ್ರತಿ ಕುಟುಂಬಕ್ಕೆ ೩೫ ಕೆ.ಜಿ ಪಡಿತರ ವಿತರಣೆ
  • ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಮತ್ತು ರಾಷ್ಟ್ರೀಯ ಅಹಾರ ಭದ್ರತಾ ಯೋಜನೆಯಡಿ ಪಡಿತರ ಪೂರೈಕೆ
  • ಕೇಂದ್ರ ಸರ್ಕಾರಕ್ಕೆ ವಾರ್ಷಿಕ ೨ ಲಕ್ಷ ಕೋಟಿ ಹೆಚ್ಚುವರಿ ಹೊರೆ
  • ಹಣ ಪಾವತಿಸಲು ಕೇಂದ್ರ ನಿರ್ದಾರ – ಪಿಯೂಷ್ ಗೋಯಲ್