ಬಡವರಿಗೆ ಉತ್ತಮ ಆರೋಗ್ಯ ಸೇವೆ ನೀಡಿ : ಶಾಸಕ ಲಕ್ಷ್ಮಣ ಸವದಿ

ಅಥಣಿ :ನ.1: ತಾಲೂಕಿನ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆಯ ಕುರಿತು ಕೆಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಶಾಸಕ ಲಕ್ಷ್ಮಣ ಸವದಿ ಅವರು ಮಂಗಳವಾರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ವಾರ್ಡಗಳಲ್ಲಿನ ರೋಗಿಗಳ ಜೊತೆಗೆ ಸಮಾಲೋಚನೆಯ ನಡೆಸಿ ನಂತರ ಅಧಿಕಾರಿಗಳ ಸಭೆ ನಡೆಸಿದರು.
ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ವೈದ್ಯರು ಸರಿಯಾಗಿ ಆಸ್ಪತ್ರೆಗೆ ಆಗಮಿಸುತ್ತಿಲ್ಲ. ಬಡ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಹಣ ಕೇಳುತ್ತಿರುವ ದೂರುಗಳು ಕೇಳಿ ಬಂದಿವೆ. ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರೋಗಿಗಳಿಗೆ ನೀಡಲಾಗುವ ಉಪಹಾರ ಮತ್ತು ಊಟ ಇನ್ನು ಸುಧಾರಣೆಯಾಗಬೇಕು. ಆಸ್ಪತ್ರೆಯಲ್ಲಿನ ಶೌಚಾಲಯಗಳು ಮತ್ತು ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ರೋಗಿಗಳಿಗೆ ಸೊಳ್ಳೆಗಳ ಕಾಟ ತಡೆಗಟ್ಟುವ ನಿಟ್ಟಿನಲ್ಲಿ ಸುರಕ್ಷತಾ ಕ್ರಮಗಳನ್ನು ಕೈಕೊಳ್ಳಬೇಕು. ರೋಗಿಗಳಿಗೆ ಸಕಾಲಕ್ಕೆ ಗುಣಮಟ್ಟದ ಚಿಕಿತ್ಸೆಯನ್ನು ನೀಡಬೇಕು ಮತ್ತು ಔಷಧಿಗಳನ್ನು ಒದಗಿಸಬೇಕು. ಸರ್ಕಾರದಿಂದ ಬರಬೇಕಾದ ಯಾವುದೇ ಪರಿಕರಗಳು ಮತ್ತು ಸೌಲಭ್ಯಗಳು ಬಾರದಿದ್ದರೆ, ನನ್ನ ಗಮನಕ್ಕೆ ತರಬೇಕು. ಸರ್ಕಾರದಿಂದ ಅವುಗಳನ್ನ ತರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಒಟ್ಟಾರೆ ಆಸ್ಪತ್ರೆಯ ವ್ಯವಸ್ಥೆ ಸುಧಾರಣೆಯಾಗಬೇಕು. ಬೆಳಗಾವಿ ಜಿಲ್ಲೆಯಲ್ಲಿಯೇ ಮಾದರಿ ಆಸ್ಪತ್ರೆಯಾಗಬೇಕು. ಈ ಆಸ್ಪತ್ರೆಗೆ ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಮತ್ತು ಸರ್ಕಾರದ ಯೋಜನೆಗಳನ್ನು ಒದಗಿಸುವಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಇಲ್ಲಿಯವರೆಗೆ ಮಾಡಿದ್ದೇನೆ. ಅವುಗಳನ್ನ ಇಲ್ಲಿನ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯವರು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಬಡ ರೋಗಿಗಳಿಗೆ ಗುಣಮಟ್ಟದ ನೀಡಬೇಕು ಎಂದು ಸಲಹೆ ನೀಡುವ ಮೂಲಕ ಕೆಲ ವೈದ್ಯಾಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಲಕ್ಷ್ಮಣ ಸವದಿ ಅವರು ನೀತಿ ಪಾಠ ಹೇಳುವ ಮೂಲಕ ಮಾತಿನ ಚಾಟಿ ಬೀಸಿದರು.
ಆರೋಗ್ಯ ಅಧಿಕಾರಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು ಅಥಣಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು ಜಿಲ್ಲೆಯಲ್ಲಿಯೇ ಮಾದರಿಯ ಆಸ್ಪತ್ರೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಲಾಗುವುದು. ಇಲ್ಲಿನ ವೈದ್ಯರಿಗೆ ಸಭೆ ನಡೆಸುವ ಮೂಲಕ ಬಡವರಿಗೆ ಉತ್ತಮ ಆರೋಗ್ಯ ಸೇವೆ ನೀಡುವಂತೆ ಸಲಹೆ ನೀಡಲಾಗಿದೆ. ಶೀಘ್ರದಲ್ಲಿಯೇ ಅಥಣಿ ಪಟ್ಟಣದಲ್ಲೊಂದು ತಾಯಿ ಮಗು ಆಸ್ಪತ್ರೆಯನ್ನು ನಿರ್ಮಿಸಲಾಗುವುದು. ಗರ್ಭಿಣಿ ಸ್ತ್ರೀಯರ ತಪಾಸಣೆ ಹಾಗೂ ಹೆರಿಗೆ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ವಿಭಾಗ ಆರಂಭವಾಗುವುದರಿಂದ ಬಡ ಕುಟುಂಬದ ಮಹಿಳೆಯರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಆಫರ್ ಆರೋಗ್ಯ ಅಧಿಕಾರಿ ಶರಣಪ್ಪ ಗಡದೆ, ತಾಲೂಕಾ ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ, ಡಾ.ಸಿ. ಎಸ್ ಪಾಟೀಲ, ಡಾ. ಚಿದಾನಂದ ಮೇತ್ರಿ, ಡಾ.ಮೋಹನ ಕುಮಾರ, ಡಾ. ಗುರುಸಿದ್ದಪ್ಪಗೊಳ, ಕಚೇರಿ ಅಧೀಕ್ಷಕ ಪ್ರಕಾಶಚಂದ್ರ ನರಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅಶೋಕ ಕಾಂಬಳೆ, ಅಥಣಿ ಪುರಸಭೆ ಮುಖ್ಯ ಅಧಿಕಾರಿ ಅಶೋಕ ಗುಡಿಮನಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

#

ಅರಣ್ಯ ಅಧಿಕಾರಿಗಳು ನಮ್ಮ ಮನೆ ತಪಾಸಣೆ ಮಾಡಿದ್ದು ಕಾನೂನು ಬಾಹಿರ :

ತಮ್ಮ ಪುತ್ರ ಹುಲಿ ಉಗುರು ಧರಿಸಿದ ವಿಚಾರವಾಗಿ ಪ್ರತ್ಯಕ್ರಿಯೆಸಿದ ಅವರು ನನ್ನ ಸುಪುತ್ರ ಧರಿಸಿದ್ದು ಹುಲಿಯ ಉಗುರು ಅಲ್ಲ, ಅದೊಂದು ಕಾಣಿಕೆಯಾಗಿ ನೀಡಿದ ಪೆಂಡೆಂಟ್ ಆಗಿತ್ತು. ಆದರೆ ನಾನು ಕ್ಷೇತ್ರದಲ್ಲಿ ಇಲ್ಲದೆ ಇದ್ದಾಗ ಅರಣ್ಯ ಅಧಿಕಾರಿಗಳು ನನಗೆ ಮಾಹಿತಿ ನೀಡದೇ ಮನೆಗೆ ಭೇಟಿ ನೀಡಿ ತಪಾಸಣೆ ಮಾಡಿದ್ದು ಕಾನೂನು ಬಾಹಿರ. ನಾನು ಈ ವಿಚಾರದಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಬಹುದು. ಆದರೆ ಇಂತಹ ಸಣ್ಣ ಪುಟ್ಟ ವಿಚಾರಕ್ಕೆ ಸ್ಪೀಕರ್ ಅವರಿಗೆ ದೂರು ಕೊಡುವುದು ಬೇಡ ಎಂದು ಬಿಟ್ಟಿದ್ದೀನಿ ಎಂದು ಹೇಳಿದರು.