ಬಡವರಿಗೆ ಉಚಿತ ಔಷಧ ವಿತರಣೆ

ಮುದ್ದೇಬಿಹಾಳ :ಸೆ.19: ಆರೋಗ್ಯ ತಪಾಸಣಾ ಶಿಬಿರಗಳು ಬಡವರಿಗೆ ಸಹಾಯಕವಾಗಿದ್ದು ಮೌಲಾನಾಗಳು ತಮ್ಮ ದುಡಿಮೆಯಲ್ಲಿ ಬಂದ ಹಣದಲ್ಲಿ ಬಡವರ ಆರೋಗ್ಯದ ಸಲುವಾಗಿ ವಿನಿಯೋಗಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಕೊಣ್ಣೂರಿನ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.

ಪಟ್ಟಣದ ತಡಸದ ಕಾಂಪ್ಲೆಕ್ಸ್‍ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣಾ ಶಿಬಿರದಲ್ಲಿ ಬಡ ರೋಗಿಗಳಿಗೆ ಔಷಧಿ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಸ್ಕಿ ಫೌಂಡೇಶನ್ ಸಹ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಜನಸೇವೆಯಲ್ಲಿ ತೊಡಗಿಕೊಂಡಿದೆ.ದೂರದ ಆಸ್ಪತ್ರೆಗಳಿಗೆ ಹೋಗಲು ಬಡವರಿಗೆ ಸಾಧ್ಯವಾಗುವುದಿಲ್ಲ.ಇಂತಹ ಆರೋಗ್ಯ ಶಿಬಿರಗಳು ಹೆಚ್ಚು ಜರುಗಬೇಕು ಎಂದರು.

ಮೌಲಾನಾ ಅಲ್ಲಾಭಕ್ಷ ಖಾಜಿ ಮಾತನಾಡಿ,ಜಮಿಯತೆ ಉಲೇಮಾ ಹಿಂದ್ ಶಾಖೆಯಿಂದ ಉಚಿತವಾಗಿ ಔಷಧಿ ವಿತರಣೆಯನ್ನು ಮಾಡಲಾಗುತ್ತಿದೆ.ಅದರ ಸದುಪಯೋಗವನ್ನು ಬಡವರು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಡಾ.ಎಂ.ಎ.ಸಲೀಂ,ಡಾ.ತೌಸಿಫಹ್ಮದ ಮಮದಾಪೂರ,ಡಾ.ಆಶೀಫ್ ಅಹ್ಮದ,ಡಾ.ಗುರುರಾಜ ಗಲಗಲಿ,ಡಾ.ರಶ್ಮಿ ಬಿರಾದಾರ,ಪುರಸಭೆ ಉಪಾಧ್ಯಕ್ಷೆ ಶಹಜಾದಬಿ ಹುಣಚಗಿ,ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ,ಅಲ್ಲಾಭಕ್ಷ್ಯ ಢವಳಗಿ,ಜಮಿಯತ್ ಉಲಮಾ ಹಿಂದ್ ಶಾಖೆ ಅಧ್ಯಕ್ಷ ಇಸಾಕ್ ಮಾಗಿ,ಹುಸೇನ್ ಉಮ್ರಿ,ಮುಖಂಡ ಎನ್.ಎಲ್.ನಾಯ್ಕೋಡಿ ಮೊದಲಾದವರು ಇದ್ದರು. ಇದೇ ವೇಳೆ ಬಡವರಿಗೆ ಉಚಿತವಾಗಿ ಔಷಧಿಗಳನ್ನು ಹಾಗೂ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.