ಬಡವರಿಗೆ ಅಗ್ಗದರದ ಔಷಧಿ ಪೂರೈಸುವ ಪ್ರಧಾನಮಂತ್ರಿಗಳ ಜನೌಷಧಿ ಕಾರ್ಯಕ್ರಮ ಪ್ರತಿ ಗ್ರಾಮಕ್ಕೆ ವಿಸ್ತರಿಸುವ ಉದ್ದೇಶಃ ಸಚಿವ ಎಸ್.ಟಿ ಸೋಮಶೇಖರ

ವಿಜಯಪುರ, ನ.21-ಬಡಜನರಿಗೆ ಅಗ್ಗ ದರದಲ್ಲಿ ಔಷಧಿ ಪೂರೈಸುವ ಪ್ರಧಾನಮಂತ್ರಿಗಳ ಜನೌಷಧಿ ಕಾರ್ಯಕ್ರಮವನ್ನು ಪ್ರತಿ ಗ್ರಾಮಕ್ಕೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ ಅವರು ಹೇಳಿದರು.
ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿಂದು 67 ನೇ ಅಖಿಲ ಭಾರತ ಸಹಕಾರ ಸಪ್ತಾಹ ದಿನಾಚರಣೆ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಬಡಜನರಿಗೆ ಅಗ್ಗ ದರದಲ್ಲಿ ಔಷಧಿ ಪೂರೈಸುವ ಪ್ರಧಾನಮಂತ್ರಿಗಳ ಜನೌಷಧಿ ಕಾರ್ಯಕ್ರಮ ಪಟ್ಟಣ ಪ್ರದೇಶಗಳಲ್ಲಿ ಈಗಾಗಲೇ ಜಾರಿಯಲ್ಲಿದ್ದು, ಅದನ್ನು ಪ್ರತಿ ಗ್ರಾಮದ ಜನರಿಗೆ ನೆರವಾಗಲು ಈ ಯೋಜನೆಯನ್ನು ಸಹಕಾರ ಇಲಾಖೆಯಿಂದ ಪ್ರತಿ ಗ್ರಾಮಕ್ಕೆ ವಿಸ್ತರಿಸುವ ಚಿಂತನೆಯಿದೆ ಎಂದರು.
ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಚೈತನ್ಯ ತುಂಬಲು ರಾಜ್ಯದ ನಾಲ್ಕು ವಿಭಾಗಗಳಾದ ಬೆಂಗಳೂರ, ಮೈಸೂರ, ಕಲಬುರ್ಗಿ ಮತ್ತು ಬೆಳಗಾವಿಗಳ ವಿವಿಧ ಜಿಲ್ಲೆಗಳಲ್ಲಿ ಆರ್ಥಿಕ ಸ್ಪಂದನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇದರ ಅಂಗವಾಗಿ ವಿಶೇಷ ಸಾಲಸೌಲಭ್ಯಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಈ ಸಂದರ್ಭದಲ್ಲಿ ಸ್ಮರಿಸುವುದಾಗಿ ತಿಳಿಸಿದ ಸಚಿವರು ಮುಂದಿನ ನವಪೀಳಿಗೆಗೆ ಸಹಕಾರಿ ಸಂಘಗಳ ಸೇವೆ ಮತ್ತು ಕರ್ತವ್ಯ ಹಾಗೂ ಸಾಧನೆ ತಿಳಿಸಲು ಜಿಲ್ಲೆಯಲ್ಲಿ ಸಾಧನೆಗೈದ ಸಹಕಾರಿ ಸಂಘಗಳ ಮಾಹಿತಿಯುಳ್ಳ ಕಿರುಹೊತ್ತಿಗೆಯನ್ನು ಸಹ ಬಿಡುಗಡೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ತೀವ್ರ ಸಂಕಷ್ಟ ಎದುರಿಸಿ ನಿರುದ್ಯೋಗಿವಾಗಿರುವವರಿಗೆ ರಾಜ್ಯದ 40 ಸಾವಿರ ಸಹಕಾರಿ ಸಂಘಗಳ ಮೂಲಕ ಉದ್ಯೋಗ ಕಲ್ಪಿಸುವ ಉದ್ದೇಶ ಸಹ ಮುಂದಿನ ವರ್ಷದಲ್ಲಿ ಜಾರಿಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಸಚಿವರು ಹೇಳಿದರು.
ಆತ್ಮನಿರ್ಭರ್ ಭಾರತ ಯೋಜನೆಯಡಿ ಮುಂದಿನ ನಾಲ್ಕು ವರ್ಷಕ್ಕೆ ಸರ್ಕಾರ 4750 ಕೋಟಿ. ರೂ.ಗಳನ್ನು ಘೋಷಿಸಿದ್ದು, ಮೊದಲ ವರ್ಷಕ್ಕೆ 625 ಕೋಟಿ ರೂ,ಗಳನ್ನು ಒದಗಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ನೆರವು ನೀಡುವಂತೆ ಪ್ರಸ್ತಾವನೆ ಸಲ್ಲಿಸಿರುವ ಪ್ರಥಮ ರಾಜ್ಯ ಕರ್ನಾಟಕವಾಗಿದೆ ಎಂದು ಹೇಳಿದರು.
ವಿಜಯಪುರ ಜಿಲ್ಲೆಯ ಡಿಸಿಸಿ ಬ್ಯಾಂಕ್ ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದು, ಬಡಜನರಿಗೆ, ರೈತರಿಗೆ, ಪ.ಜಾತಿ, ಪ.ಪಂಗಡದ ಜನಾಂಗದ ಜನರಿಗೆ ಹಾಗೂ ಎಸ್‍ಎಚ್‍ಜಿ ಗ್ರೂಪ್‍ಗಳಿಗೆ 1200 ಕೋಟಿ ರೂ.ಗಳ ಸಾಲ ವಿತರಿಸುವ ಗುರಿ ಹೊಂದಿ ಈಗಾಗಲೇ 600 ಕೋಟಿ.ರೂ ವಿತರಿಸಲು ಕ್ರಮಕೈಗೊಂಡಿದೆ. ಶಾಸಕ ಶಿವಾನಂದ ಪಾಟೀಲ ಅವರ ಬದ್ಧತೆ ಮತ್ತು ಸಹಕಾರಿ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ಈ ಬ್ಯಾಂಕ್ ಪ್ರಥಮ ಸ್ಥಾನದಲ್ಲಿದೆ. ಸಾವಿರಾರು ಜನರಿಗೆ ಉದ್ಯೋಗ, ಲಕ್ಷಾಂತರ ರೈತರಿಗೆ ಸಾಲ ಸೌಲಭ್ಯ ಕೊಡುವಲ್ಲಿ ಇಂತಹ ಸಹಕಾರಿಗಳ ಕಾರ್ಯ ಅಭಿನಂದನಾರ್ಹವಾಗಿದೆ. ಸರ್ಕಾರದ ಮೂಲಕ ಆಶಾ ಕಾರ್ಯಕರ್ತೆಯರಿಗೆ ಕೋವಿಡ್ ಸೇವೆ ಸಲ್ಲಿಸಿದಕ್ಕಾಗಿ ತಲಾ 3000 ರೂ.ಗಳ ಪ್ರೋತ್ಸಾಹಧನವನ್ನು ಸಹ ಈಗಾಗಲೇ ವಿತರಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ್ (ಯತ್ನಾಳ) ಅವರ ಪರಿಶ್ರಮದ ಫಲವಾಗಿ ಶ್ರೀ ಸಿದ್ದೇಶ್ವರ ಸಹಕಾರಿ ಸಂಸ್ಥೆ, ಇಂಡಿ ಶಾಸಕ ಯಶವಂತರಾಯಗೌಡ ಅವರ ನೇತೃತ್ವದಲ್ಲಿ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸಕ್ಕರೆ ಕಾರ್ಖಾನೆ ಮತ್ತು ನಂದಿ ಸಕ್ಕರೆ ಕಾರ್ಖಾನೆಗಳ ಕಾರ್ಯಗಳು ಪ್ರಶಂಸನೀಯವಾಗಿದ್ದು, ಈ ಎಲ್ಲ ಸಹಕಾರಿಗಳ ಬದ್ಧತೆಯಿಂದಾಗಿ ವಿಜಯಪುರ ಜಿಲ್ಲೆಯು ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವರು ಹಾಗೂ ಶಾಸಕ ಶಿವಾನಂದ ಪಾಟೀಲ್ ಅವರು ಸಹಕಾರ ಇಲಾಖೆ ಇನ್ನಷ್ಟು ಬಲಪಡಿಸಬೇಕಾಗಿದೆ. ವಿಂಗಡನೆಗೊಂಡಿರುವ ಸಹಕಾರಿ ಕ್ಷೇತ್ರಗಳನ್ನು ಮರು ಜೋಡಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿ, ಸಹಕಾರಿ ಕ್ಷೇತ್ರಕ್ಕೆ ಕೊಡುಗೆ ನೀಡಿದ ಶ್ರೀ ಸಿದ್ಧನಗೌಡ ಪಾಟೀಲ ಕ್ಷೀರಕ್ರಾಂತಿ ಮಾಡಿದ್ದ ಪ್ರೊ. ಕುರಿ ಹಾಗೂ ಇನ್ನೀತರ ಸಹಕಾರಿಗಳ ಸೇವೆಯನ್ನು ಸ್ಮರಿಸಿದರು.
ಶಾಸಕ ಯಶವಂತಗೌಡ ಪಾಟೀಲ್ ಅವರು ಮಾತನಾಡಿ ವಿಜಯಪುರ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕ ನೇತೃತ್ವದಿಂದಾಗಿ ಅದ್ವಿತೀಯ ಪ್ರಗತಿ ಸಾಧಿಸಿದೆ. ಸಹಕಾರಿ ಚಳುವಳಿಯಲ್ಲಿ ಕಾರ್ಯನಿರ್ವಹಿಸಿದ ಸಹಕಾರಿ ಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸನಗೌಡ ಪಾಟೀಲ್ (ಯತ್ನಾಳ) ಅವರು ಸಹಕಾರ ಇಲಾಖೆ ಪಾರದರ್ಶಕ ಹಾಗೂ ಇನ್ನಷ್ಟು ಬಲಿಷ್ಠವಾಗಬೇಕು. ಉತ್ತಮ ಸಹಕಾರಿಗಳಿಗೆ ಪ್ರಶಸ್ತಿ ನೀಡುವಂತಾಗಬೇಕು. ಸಹಕಾರ ಕ್ಷೇತ್ರ ಇನ್ನಷ್ಟು ವೃದ್ಧಿಗೆ ಕೆಲವು ಬದಲಾವಣೆಗಳನ್ನೂ ಸಹ ತರುವ ಅಗತ್ಯವಿದ್ದು, ಈ ಕುರಿತು ಸಚಿವರು ಗಮನ ಹರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಚಿವ ಎಸ್.ಟಿ ಸೋಮಶೇಖರ ಸೇರಿದಂತೆ ಶಾಸಕರೆಲ್ಲರೂ ಡಿಸಿಸಿ ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ಆಪ್ ಇಂದಿಲ್ಲಿ ಬಿಡುಗಡೆಗೊಳಿಸಿದರು. ಶಾಸಕ ಎಂ.ಸಿ ಮನಗೂಳಿ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಕೆಎಮ್‍ಎಫ್ ಅಧ್ಯಕ್ಷ ಎಸ್.ಎಸ್.ಮಿಸಾಳೆ, ನಂದಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಶಶಿಕಾಂತಗೌಡ ಪಾಟೀಲ್, ಸಹಕಾರ ಸಂಘಗಳ ಅಪರ ನಿಬಂಧಕರು (ಪತ್ತು) ಬಿ.ಎಸ್ ಹರೀಶ ಸೇರಿದಂತೆ ಇತರರು ಉಪಸ್ಥಿತಿರಿದ್ದರು.
ಇದೇ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಜೀ, ಜವಾಹರ್‍ಲಾಲ್ ನೆಹರು, ಸಿದ್ಧನಗೌಡ ಪಾಟೀಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಹಕಾರಿಗಳಿಗೆ ಸನ್ಮಾನಿಸಲಾಯಿತು.