ಬಡಮಕ್ಕಳ ಶಿಕ್ಷಣಕ್ಕೆ ಧರ್ಮಸ್ಥಳ ಸಂಸ್ಥೆ ಕೊಡುಗೆ ಅಪಾರ

ಚಿಕ್ಕನಾಯಕನಹಳ್ಳಿ, ನ. ೧೪- ಕೋವಿಡ್-೧೯ ಸಮಸ್ಯೆಯಿಂದ ಶಾಲೆಗಳು ಮುಚ್ಚಿರುವ ನಿಟ್ಟಿನಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಧಕ್ಕೆಯಾಗಬಾರದೆಂದು ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆಯವರು ಅಂತರ್ಜಾಲ ಶಿಕ್ಷಣ ವ್ಯವಸ್ಥೆಯನ್ನು ಜ್ಞಾನತಾಣ ಎಂಬ ವಿಶೇಷ ಯೋಜನೆಯಲ್ಲಿ ರಾಜ್ಯದ ೧ ಲಕ್ಷ ವಿದ್ಯಾರ್ಥಿಗಳಿಗೆ ೮೧ ಕೋಟಿ ರೂ. ಖರ್ಚು ಮಾಡಿ ಸೇವೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ಹಿರಿಯ ಸಾಹಿತಿ ಡಾ.ಎಂ.ವಿ. ನಾಗರಾಜರಾವ್ ಹೇಳಿದರು.
ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಚೇರಿಯಲ್ಲಿ ಧರ್ಮಸ್ಥಳ ಸಂಘದ ಸದಸ್ಯರ ಫಲಾನುಭವಿ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಟ್ಯಾಬ್ ಮತ್ತು ಲ್ಯಾಪ್‌ಟ್ಯಾಪ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ಸಮಸ್ಯೆಯಿಂದ ಶಿಕ್ಷಣದ ವ್ಯವಸ್ಥೆಯಲ್ಲಿ ಭಾರೀ ಸಮಸ್ಯೆಯನ್ನು ಉಂಟು ಮಾಡಿದೆ. ಸರ್ಕಾರ ಶಾಲೆ-ಕಾಲೇಜು ತೆರೆಯಲು ಮತ್ತು ಪಾಠ ಪ್ರವಚನವನ್ನು ಶಿಕ್ಷಕರು ಬೋಧಿಸಲು ಸುವ್ಯವಸ್ಥೆ ಕಲ್ಪಿಸಲು ಗೊಂದಲದಲ್ಲಿ ಸಿಲುಕಿದೆ. ಮಕ್ಕಳ ಭವಿಷ್ಯವನ್ನು ರೂಪಿಸಲು ಅಂತರ್ಜಾಲ ಮೂಲಕ ಶಿಕ್ಷಕರು ಪಾಠವನ್ನು ಹೇಳುವ ಸ್ಥಿತಿ ಉಂಟಾಗಿದ್ದು, ಈ ವ್ಯವಸ್ಥೆಗೆ ಅತ್ಯವಶ್ಯಕವಾಗಿ ಲ್ಯಾಪ್‌ಟ್ಯಾಪ್ ಅಥವಾ ಟ್ಯಾಬ್ ಬೇಕಾಗಿರುತ್ತದೆ. ಆದರೆ ಉಳ್ಳವರು ೨೮ ರಿಂದ ೩೩ ಸಾವಿರದವರೆಗಿನ ಲ್ಯಾಪ್‌ಟ್ಯಾಪ್ ಖರೀದಿ ಮಾಡಿ ಪೋಷಕರು ತಮ್ಮ ಮಕ್ಕಳಿಗೆ ಸಹಕಾರಿಯಾಗಿದ್ದಾರೆ ಎಂದರು.
ಬಡತನ ರೇಖೆಯಲ್ಲಿರುವ ಕುಟುಂಬಗಳು ತಮ್ಮ ಮಕ್ಕಳಿಗೆ ಲ್ಯಾಪ್‌ಟ್ಯಾಪ್ ಕೊಡಿಸಲಾಗದ ಸ್ಥಿತಿಯನ್ನು ಡಾ.ವೀರೇಂದ್ರ ಹೆಗ್ಗಡೆಯವರು ಅರಿತು ಅಂತರ್ಜಾಲದಿಂದ ವಂಚಿತರಾದ ಮಕ್ಕಳಿಗೆ ಅನುಕೂಲವಾಗಲು ಶ್ರೀಕ್ಷೇತ್ರ ಟ್ಯಾಬ್ ಮತ್ತು ಲ್ಯಾಪ್‌ಟ್ಯಾಪ್ ಉತ್ಪಾದನಾ ಕಂಪೆನಿಯ ಜತೆ ಮಾತುಕತೆ ನಡೆಸಿ ರಿಯಾಯ್ತಿ ದರದಲ್ಲಿ ಖರೀದಿ ಮಾಡಲು ತೀರ್ಮಾನಿಸಿದೆ.
ಈ ಅನುಕೂಲದಲ್ಲಿ ಫಲಾನುಭವಿಗಳಿಗೆ ಟ್ಯಾಬ್ ಖರೀದಿಸಲು ೪ ಸಾವಿರ ಮತ್ತು ಲ್ಯಾಪ್‌ಟ್ಯಾಪ್ ಖರೀದಿಸಲು ೬ ಸಾವಿರ ಪ್ರೋತ್ಸಾಹ ಧನವನ್ನು ಶ್ರೀಕ್ಷೇತ್ರ ನೀಡುತ್ತಿದೆ ಎಂದರು.
ಅಂತರ್ಜಾಲ ಶಿಕ್ಷಣಕ್ಕೆ ಪರಿಣಿತಿ ಹೊಂದಿರುವ ೪೫೦ ಶಿಕ್ಷಕರನ್ನು ನಿಯೋಜಿಸಲಾಗಿದೆ ಮತ್ತು ಅಂತರ್ಜಾಲ ಶಿಕ್ಷಣವು ೫ನೇ ತರಗತಿಯಿಂದ ೧೦ನೇ ತರಗತಿಯ ಮಕ್ಕಳಿಗೆ ಉಪಯೋಗವಾಗುವಂತೆ ವಿಜ್ಞಾನ ಗಣಿತ ಮತ್ತು ಇಂಗ್ಲೀಷ್ ವಿಷಯ ಅಡಕವಾಗಿರುವ ವ್ಯವಸ್ಥೆಯನ್ನು ಟ್ಯಾಬ್ ಮತ್ತು ಲ್ಯಾಪ್‌ಟ್ಯಾಪ್‌ನಲ್ಲಿ ತುಂಬಲಾಗಿದೆ.
ಇಂತಹ ಸಾಧನೆಯನ್ನು ಶ್ರೀಕ್ಷೇತ್ರ ಮಾದರಿಯಾಗಿ ಸೇವೆ ಸಲ್ಲಿಸುತ್ತಿರುವುದು ತುಂಬಾ ಶ್ಲಾಘನೀಯ. ವೀರೇಂದ್ರ ಹೆಗ್ಗಡೆಯವರು ನೀಡುತ್ತಿರುವ ಪ್ರೋತ್ಸಾಹವನ್ನು ಯಾರೂ ಕೂಡ ದುರುಪಯೋಗಪಡಿಸಿಕೊಳ್ಳ ಬಾರದು ಎಂದರು.
ವಕೀಲ ಎಂ.ಬಿ.ನಾಗರಾಜು ಮಾತನಾಡಿ, ಇತ್ತೀಚೆಗೆ ಶಾಲೆ ಇಲ್ಲದ ಕಾರಣ ಮಕ್ಕಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಮಗ್ನರಾಗಿರುತ್ತಾರೆ.
ಶ್ರೀಕ್ಷೇತ್ರ ಪ್ರೋತ್ಸಾಹಿಸಿ ನೀಡುತ್ತಿರುವ ಟ್ಯಾಬ್ ಮತ್ತು ಲ್ಯಾಪ್‌ಟ್ಯಾಪ್‌ನ್ನು ಶಿಕ್ಷಣಕ್ಕೆ ಮಾತ್ರ ಮಕ್ಕಳು ಬಳಕೆ ಮಾಡಿಕೊಳ್ಳುವಂತೆ ಪೋಷಕರು ನಿಗಾ ವಹಿಸಬೇಕು ಎಂದರು.
ಶ್ರೀಕ್ಷೇತ್ರ ಧ.ಗ್ರಾ.ಯೋ. ಯೋಜನಾಧಿಕಾರಿ ಸಿ.ಎಸ್.ಪ್ರಶಾಂತ್ ಮಾತನಾಡಿ, ತಾಲ್ಲೂಕಿನಲ್ಲಿ ಸಂಘದ ಸದಸ್ಯರುಗಳ ೧೦ ಸಾವಿರ ಮಕ್ಕಳಿಗೆ ಲ್ಯಾಪ್‌ಟ್ಯಾಪ್ ಟ್ಯಾಬ್‌ನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಿಎಸ್‌ಐ ಹರೀಶ್, ಆಗ್ರೋ ಪ್ರಕಾಶ್, ತಹಶೀಲ್ದಾರ್ ಗ್ರೇಡ್-೨ ಮೋಹನ್, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.