ಬಡಮಕ್ಕಳಿಗೆ ಉಚಿತ ಬಟ್ಟೆ ವಿತರಣೆ ಅಗತ್ಯ

ಚಿತ್ರದುರ್ಗ. ನ.13; ಬಡ ಮಕ್ಕಳಿಗೆ ಉಚಿತವಾಗಿ ಹೊಸಬಟ್ಟೆಗಳನ್ನು ನೀಡುವುದು ಶ್ಲಾಘನೀಯವಾದ ಕೆಲಸ, ಹೆಚ್ಚುತ್ತಿರುವ ಬಡತನದಲ್ಲಿ ಮೂಲೆಗುಂಪಾಗಿರುವ ಜನರನ್ನು ಗುರುತಿಸಿ, ಅವರಿಗೆ ಅವಶ್ಯಕತೆ ಎನಿಸುವ ಬಟ್ಟೆ, ಆಹಾರ ಪದಾರ್ಥ, ಔಷಧ ಸಾಮಗ್ರಿಗಳು, ಸ್ವಚ್ಛತಾ ಸಾಮಗ್ರಿಗಳನ್ನು, ವಿತರಣೆ ಮಾಡುವುದರಿಂದ ಅವರ ಜೀವನಮಟ್ಟ ಸುಧಾರಿಸುವುದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು.ಅವರು ಚಿತ್ರದುರ್ಗ ನಗರದ ಸುತ್ತಮುತ್ತಲಿರುವ ಸ್ಲಂಮ್‌ಗಳಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕಲ್ಪವೃಕ್ಷ ಚಾರಿಟಬಲ್ ವತಿಯಿಂದ ಆಯೋಜಿಸಿದ್ದ ಬಡ ಮಕ್ಕಳಿಗೆ ಬಟ್ಟೆ ವಿತರಿಸುವ ಸಂದರ್ಭದಲ್ಲಿ ಜನರನ್ನ ಉದ್ದೇಶಿಸಿ ಮಾತನಾಡುತ್ತಿದ್ದರು. ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ಬಟ್ಟೆಗಳನ್ನ, ರೆಡಿಮೇಡ್ ಬಟ್ಟೆಗಳನ್ನು, ವ್ಯಾಪಾರ ಮಾಡಲು ಸಾಧ್ಯವಾಗದಿದ್ದಾಗ, ವ್ಯಾಪಾರಸ್ಥರುಗಳು ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಬಡ ಮಕ್ಕಳಿಗೆ ವಿತರಿಸಿ ಅವರ ಜೀವನವನ್ನು ಸುಂದರಗೊಳಿಸಬೇಕು. ಹಿಂದೆಲ್ಲ ಕೈಯಿಂದಲೇ ಉಡುಪುಗಳನ್ನ ಮಾಡಿಕೊಂಡು, ಬಟ್ಟೆ ಮಾಡಿಕೊಂಡು, ಜನರು ತಮ್ಮ ಸ್ವಂತ ಕಾಲ ಮೇಲೆ ನಿಂತಿದ್ದರು. ಈಗ ಅವಕಾಶಗಳು ಕಡಿಮೆಯಾಗಿ, ಜನರಿಗೆ ತಮ್ಮ ಬಟ್ಟೆಗಳನ್ನು ತಾವೇ ಮಾಡಿಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ಹಾಗಾಗಿ ಅವರಿಗೆ ನಾವು ಕೈಗಾರಿಕೆಯಲ್ಲಿ ತಯಾರಾದ ಹೊಸ ಬಟ್ಟೆಗಳನ್ನ ಅವರಿಗೆ ವಿತರಿಸಿ, ಅವರನ್ನ ಒಂದು ಹಂತದವರೆಗಾದರೂ ಸುರಕ್ಷತೆ ಮಾಡಬೇಕಾಗಿದೆ ಎಂದರು. ಬಹಳಷ್ಟು ಒಳ್ಳೆಯ ಉಡುಪುಗಳು ಮಾರಾಟವಾಗದಿದ್ದಾಗ, ಮಳಿಗೆಗಳಲ್ಲೇ ಹಾಗೆ ಕೊಳೆತು ಹಾಳಾಗುವ ದೃಶ್ಯ ಸಾಮಾನ್ಯವಾಗಿದೆ, ಹಾಗಾಗಿ ಹಳೆಯ ಸ್ಟಾಕ್‌ಗಳಲ್ಲಿ ಇರುವಂತಹ ಹೊಸ ಬಟ್ಟೆಗಳನ್ನು, ಬಡಮಕ್ಕಳಿಗೆ ಶೀಘ್ರವಾಗಿ ವಿತರಿಸಿ, ಚಳಿಗಾಲದಲ್ಲಿ ಅವರಿಗೆ ಒಂದಿಷ್ಟು ಆಸರೆ ನೀಡಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ದಾನಿಗಳಾದ ಶ್ರೀ ಮಹೇಂದ್ರ ಸಂಘ್ವಿಯವರು ಐವತ್ತು ಜನ ಮಕ್ಕಳಿಗೆ ಬಟ್ಟೆ ವಿತರಿಸಲು ಹಣದ ಸಹಾಯ ಮಾಡಿದ್ದರು. ಬಟ್ಟೆ ವ್ಯಾಪಾರಿಗಳಾದ ಪಾರಸ್ ಬಾಯಿ, ಕಡಿಮೆ ದರದಲ್ಲಿ ಬಟ್ಟೆಗಳನ್ನ ನೀಡಿದರು.