ಬಡದೇಶಗಳಿಗೆ ಲಸಿಕೆ ಪೂರೈಕೆಗೆ ಪಣ

ನವದೆಹಲಿ/ರಿಯಾದ್, ನ. ೨೨- ವಿಶ್ವದ ಬಡದೇಶಗಳಿಗೆ ಕೋವಿಡ್-೧೯ ಲಸಿಕೆಯನ್ನು ನ್ಯಾಯಯುತವಾಗಿ ವಿತರಿಸಲು ಆರ್ಥಿಕ ನೆರವು ನೀಡಲು ಜಿ – ೨೦ ರಾಷ್ಟ್ರಗಳ ಶೃಂಗಸಭೆಯ ನಾಯಕರು ದೃಢ ಸಂಕಲ್ಪ ಮಾಡಿದ್ದಾರೆ.

ಜಗತ್ತಿನ ಬಡದೇಶಗಳಿಗೆ ಲಸಿಕೆಗಳನ್ನು ಹಾಗೂ ಔಷಧಿ ಪೂರೈಕೆ ಮತ್ತು ಪರೀಕ್ಷೆಗಳನ್ನು ನಡೆಸಲು ಆರ್ಥಿಕ ನೆರವು ನೀಡಲು ವಿಶ್ವದ ೨೦ ಅತಿ ದೊಡ್ಡ ಆರ್ಥಿಕ ರಾಷ್ಟ್ರಗಳು ಸಮ್ಮತಿಸಿವೆ. ಸಾಂಕ್ರಾಮಿಕ ರೋಗದಿಂದ ತತ್ತರಿಸಿರುವ ಬಡ ದೇಶಗಳು ಸಂಕಷ್ಟದಿಂದ ಹೊರಬರಲು ನಾವು ಬೆಂಬಲ ನೀಡುತ್ತೇವೆ ಎಂದು ಭರವಸೆ ನೀಡಿವೆ.

ಬಡದೇಶಗಳ ಎಲ್ಲ ಜನರಿಗೆ ಕೈಗೆಟುಕುವ ದರದಲ್ಲಿ ಕೋವಿಡ್ ೧೯ ರ ವ್ಯಾಕ್ಸಿನ್ ಪೂರೈಸಲು ಶೃಂಗಸಭೆಯ ಎಲ್ಲ ರಾಷ್ಟ್ರಗಳು ಒಕ್ಕೊರಲಿನಿಂದ ತೀರ್ಮಾನಿಸಿದ ಎಂಬ ಮಾಹಿತಿಯನ್ನು ಸುದ್ದಿಸಂಸ್ಥೆ ವರದಿ ಮಾಡಿದೆ.

ಬಡದೇಶಗಳಲ್ಲಿ ನ ಜನರಿಗೆ ಲಸಿಕೆ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಸೂಕ್ತ ವಾತಾವರಣವನ್ನು ನಿರ್ಮಿಸಬೇಕಾಗಿದೆ ಎಂದು ಸೌದಿ ಅರೇಬಿಯಾದ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರು ತಮ್ಮ ಆರಂಭಿಕ ಭಾಷಣದಲ್ಲಿ ಹೇಳಿದರು.

ಇದಕ್ಕೆ ಶೃಂಗಸಭೆಯ ಎಲ್ಲಾ ಸದಸ್ಯ ರಾಷ್ಟ್ರಗಳ ನಾಯಕರು ಸಮ್ಮತಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅತಿ ದೊಡ್ಡ ಸವಾಲು

ಎರಡನೇ ಮಹಾಯುದ್ಧದ ನಂತರ ಜಗತ್ತು ಎದುರಿಸುತ್ತಿರುವ ಅತಿ ದೊಡ್ಡ ಸವಾಲು ಕೋವಿಡ್ ೧೯ ಸಾಂಕ್ರಾಮಿಕ ರೋಗ ವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಉ೨೦ ರಾಷ್ಟ್ರಗಳ ಶೃಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಇದು ಮಾನವ ಇತಿಹಾಸದಲ್ಲಿ ಮಹತ್ವದ ತಿರುವು ಆಗಿದೆ ಎಂದು ತಿಳಿಸಿದ್ದಾರೆ.

೨೦ ರಾಷ್ಟ್ರಗಳ ಒಕ್ಕೂಟದ ಸಮರ್ಥ ನಿರ್ವಹಣೆಗೆ ಭಾರತ, ಅಗತ್ಯವಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೊಡುಗೆಯನ್ನು ನೀಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಎಲ್ಲಿಂದ ಬೇಕಾದರೂ ಕೆಲಸ ಮಾಡಿ ಎಂಬುದು ಕೊರಾ ನೋತ್ತರ ಜಗತ್ತಿನಲ್ಲಿ ಸಾಮಾನ್ಯವಾಗಿದೆ. ವರ್ಚುಯಲ್ g೨೦ ಕಾರ್ಯಾಲಯ ಸ್ಥಾಪಿಸುವುದು ಅಗತ್ಯ ಎಂದು ಮೋದಿಯವರು ಸಲಹೆ ಮಾಡಿದ್ದಾರೆ.

ಕೊರೋ ನೋ ತ್ತರ ಜಗತ್ತಿಗೆ ಹೊಸ ಸೂಚ್ಯಂಕ ಅಭಿವೃದ್ಧಿಪಡಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದ್ದಾರೆ. ಪ್ರತಿಭೆಗೆ ಒಂದೆಡೆ ವೇದಿಕೆ ಕಲ್ಪಿಸುವುದು ಸಮಾಜದ ಎಲ್ಲ ವರ್ಗಗಳಿಗೂ ತಂತ್ರಜ್ಞಾನವನ್ನು ತಲುಪುವಂತೆ ಮಾಡುವುದು ಇಂದಿನ ಅಗತ್ಯ ಎಂದರು.

ಆಡಳಿತದಲ್ಲಿ ಪಾರದರ್ಶಕತೆ, ನಂಬಿಕೆಯ ಮನೋಭಾವದೊಂದಿಗೆ ಭೂಮಿಯೊಂದಿಗೆ ವ್ಯವಹರಿಸುವುದು ಸೇರಿದಂತೆ ೪ ಪ್ರಮುಖ ಅಂಶಗಳನ್ನು ಒಳಗೊಂಡಂತಹ ಸೂಚ್ಯಂಕವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಇದರ ಆಧಾರದಲ್ಲಿ ಜಿ ೨೦ ರಾಷ್ಟ್ರಗಳ ಒಕ್ಕೂಟ ಹೊಸ ಜಗತ್ತಿಗೆ ಹೊಸತನ್ನು ನೀಡುವ ಸಂಕಲ್ಪವನ್ನು ಸಾಕಾರಗೊಳಿಸಬೇಕು ಎಂದು ಅವರು ಒಕ್ಕೂಟದ ನಾಯಕರಿಗೆ ಕರೆ ನೀಡಿದರು.